ಭವಿಷ್ಯದ ಸವಾಲುಗಳನ್ನು ಎದುರಿಸಲು ವಿಕಲಚೇತನರ ಕೌಶಲ್ಯಾಭಿವೃದ್ದಿ ತರಬೇತಿ ಕೇಂದ್ರ ಸಹಕಾರಿ :ಎಸ್ ನಾಗಣ್ಣ

ತುಮಕೂರು:

     ಬೆಳಗುಂಬದ ರೆಡ್ ಕ್ರಾಸ್ ಸಂಸ್ಥೆ ವತಿಯಿಂದ ನಡೆಯುತ್ತಿರುವ ಕಿವುಡ ಮತ್ತು ಮೂಕ ಮಕ್ಕಳ ಶಾಲೆಯ ಬಳಿ ಇನ್ಫೋಸಿಸ್ ವತಿಯಿಂದ ನಿರ್ಮಿಸಿರುವ ವಿಕಲಚೇತನರ ಕೌಶಲ್ಯಾಭಿವೃದ್ದಿ ತರಬೇತಿ ಕೇಂದ್ರದ ಉದ್ಘಾಟನೆಯನ್ನು ಮಾ.20 ರ ಬೆಳಗ್ಗೆ 10:30ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ಭಾರತೀಯ ರೆಡ್ ಕ್ರಾಸ್ ತುಮಕೂರು ಜಿಲ್ಲಾ ಸಭಾಪತಿ ಟಿ.ಬಿ.ಶೇಖರ್ ತಿಳಿಸಿದ್ದಾರೆ.

    ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,ಸುಮಾರು 10*150 ಅಡಿ ಜಾಗದಲ್ಲಿ ವಿಕಲಚೇತನ ಮಕ್ಕಳಿಗೆ ವಿವಿಧ ರೀತಿಯ ಅವಶ್ಯಕ ತರಬೇತಿ ನೀಡಿ,ಅವರು ಕುಟುಂಬಕ್ಕೆ ಹೊರೆಯಾಗದೆ,ಸ್ವಾವಲಂಬಿ ಜೀವನ ನಡೆಸುತಾಗಬೇಕು ಎಂಬ ಉದ್ದೇಶದಿಂದ ರೆಡ್‌ಕ್ರಾಸ್ ಸಂಸ್ಥೆಗೆ ಇನ್ಫೋಸಿಸ್ ಸಂಸ್ಥೆಯವರು ತಮ್ಮ ಸಿ.ಎಸ್.ಆರ್.ನಿಧಿಯಿಂದ ಈ ಕಟ್ಟಡವನ್ನು ನಿರ್ಮಿಸಿಕೊಟ್ಟಿದ್ದು, ಮುಂದಿನ 5 ವರ್ಷಗಳ ಕಾಲ ನಿರ್ವಹಣೆ ಸಹ ಮಾಡಲಿದ್ದಾರೆ ಎಂದರು.

    ಮಾರ್ಚ್ 20 ರಂದು ನಡೆಯುವ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಅರಗಜ್ಞಾನೇಂದ್ರ ಅವರು ಉದ್ಘಾಟನೆ ಮಾಡುವರು. ಅಧ್ಯಕ್ಷತೆಯನ್ನು ಶಾಸಕ ಡಿ.ಸಿ.ಗೌರಿಶಂಕರ್ ವಹಿಸುವರು, ಮುಖ್ಯ ಅತಿಥಿಗಳಾಗಿ ಸಚಿವರಾದ ಜೆ.ಸಿ.ಮಾಧುಸ್ವಾಮಿ, ಬಿ.ಸಿ.ನಾಗೇಶ್,

     ಡಾ.ಸಿ.ಎನ್.ಆಶ್ವಥ್‌ನಾರಾಯಣ,ಸಂಸದ ಜಿ.ಎಸ್.ಬಸವರಾಜು,ಇನ್ಫೋಸಿಸ್ ಪ್ರತಿಷ್ಠಾನದ ಧರ್ಮದರ್ಶಿ ಸುನೀಲ್ ಕುಮಾರ್ ಧಾರೇಶ್ವರ್,ಬೆಳಗುಂಬ ಗ್ರಾಮ ಪಂಚಾಯತಿ ಅಧ್ಯಕ್ಷ ಮಂಜುನಾಥ್,ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಕರ್ನಾಟಕದ ಸಭಾವತಿ ವಿಜಯಕುಮಾರ್ ಪಾಟೀಲ್ ಶಾವಂತಗೇರ, ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್, ಎಸ್.ಪಿ.ರಾಹುಲ್ ಕುಮಾರ್ ಶಹಪುರವಾಡ, ಸಿಒಓ ಡಾ.ಕೆ.ವಿದ್ಯಾಕುಮಾರಿ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಸಭಾಪತಿ ಟಿ.ಬಿ.ಶೇಖರ್ ಉಪಸ್ಥಿತರಿರು ವವರು.ಇದೇ ಕಾರ್ಯಕ್ರಮದಲ್ಲಿ ರೆಡ್‌ಕ್ರಾಸ್ ಸಂಸ್ಥೆಯ ಹಿರಿಯ ಚೇತನಗಳಾದ ಎಂ.ವಿ.ರಾಮಚಂದ್ರ, ಡಾ.ಸಿ.ಜಯರಾಮರಾವ್,ಟಿ.ಎಂ.ಸ್ವಾಮಿ,ಎಂ.ಬಸವಯ್ಯ,ಹೆಚ್.ಜಿ.ಚಂದ್ರಶೇಖರ್, ಸಿ.ವಿ.ಮಹದೇವಯ್ಯ ,ಎಸ್.ನಾಗಣ್ಣ ಅವರುಗಳನ್ನು ಅಭಿನಂದಿಸಲಾಗುವುದು ಎಂದರು.

    ರೆಡ್ ಕ್ರಾಸ್ ಕೌಶಲ್ಯಾಭಿವೃದ್ದಿ ಸಮಿತಿಯ ಅಧ್ಯಕ್ಷ ಬಸವರಾಜು ಮಾತನಾಡಿ, ವಿಕಲಚೇತನರ ವಸತಿ ಸಹಿತ ಕೌಶಲ್ಯ ತರಬೇತಿ ಕೇಂದ್ರ ಇದಾಗಿದ್ದು, ಅಂಗವಿಕಲರು ಕುಟುಂಬಕ್ಕೆ ಹೊರೆಯಾದಂತೆ ಅವರು ಸ್ವಾವಲಂಬಿಗಳಾಗಿ ಬದುಕು ಕಟ್ಟಿಕೊಳ್ಳುವಂತೆ ಮಾಡುವ ಉದ್ದೇಶವನ್ನು ಹೊಂದಿದ್ದು, ಇಲ್ಲಿ ವಾಣಿ ಪೌಂಡೇಷನ್ನ ಸಹಯೋಗದಲ್ಲಿ ಟೈಲರಿಂಗ್, ಸಿ.ಎನ್.ಸಿ ಮಿಷನ್ ಆಪರೇಟಿಂಗ್, ಕಂಪ್ಯೂಟರ್ ಹಾರ್ಡವೇರ್, ಎಲೆಕ್ಟ್ರಾನಿಕ್, ಎಲೆಕ್ಟ್ರಿಕ್, ಕಾರ್ಪೆಂಟರ್ ಸೇರಿದಂತೆ, ಇಂದಿನ ಅವಶ್ಯಕತೆಗೆ ತಕ್ಕಂತೆ ತರಬೇತಿ ಆಯೋಜಿಸಲು ತೀರ್ಮಾನಿಸಲಾಗಿದೆ.ಕಟ್ಟಡದ ಜೊತೆಗೆ, ತರಬೇತಿಯ ಮೇಲ್ವಿಚಾರಣೆಯನ್ನು ಇನ್ಫೋಸಿಸ್ ನಡೆಸಲಿದೆ. ಇದರ ಜೊತೆ ಕೇಂದ್ರ ಮತ್ತು ರಾಜ್ಯ ಸರಕಾರದ ವತಿಯಿಂದ ದೊರೆಯುವ ಅನುದಾನದಲ್ಲಿಯೂ ಹಲವು ತರಬೇತಿಯನ್ನು ನೀಡುವ ಆಲೋಚನೆ ಇದೆ ಎಂದರು.

     ರೆಡ್ ಕ್ರಾಸ್ ರಾಷ್ಟ್ರೀಯ ಮಂಡಳಿಯ ಸದಸ್ಯ ಎಸ್.ನಾಗಣ್ಣಮಾತನಾಡಿ,2018ರಲ್ಲಿ ಇನ್ಫೋಸಿಸ್ ಸಂಸ್ಥೆಯ ಶ್ರೀಮತಿ ಸುಧಾಮೂರ್ತಿ ಮತ್ತು ತಂಡವನ್ನು ಅಂದಿನ ತುಮಕೂರು ರೆಡ್ ಕ್ರಾಸ್ ಸಂಸ್ಥೆ ಪದಾಧಿಕಾರಿಗಳು ವಿಕಲಚೇತನರಿಗೆ ಕೌಲಶ್ಯ ತರಬೇತಿ ಕೇಂದ್ರ ತೆರೆಯಲು ಅಗತ್ಯವಿರುವ ಎಲ್ಲಾ ಮಾಹಿತಿ ನೀಡಿ ಮನದಟ್ಟು ಮಾಡಿಕೊಟ್ಟ ಹಿನ್ನೆಲೆಯಲ್ಲಿ ಆರಂಭದಲ್ಲಿ 5.50 ಕೋಟಿಗೆ ಅಂದಾಜಿಸಲಾಗಿದ್ದ ಕಟ್ಟಡ ಇಂದು 11 ಕೋಟಿ ರೂಗಳ ಖರ್ಚಾಗಿದೆ.

    ತರಬೇತಿಗೆ ಅಗತ್ಯವಿರುವ ಪಾಠೋಪಕರಣವನ್ನು ಇನ್ಪೋಸಿಸ್ ಸಂಸ್ಥೆಯವರೇ ನೀಡಲಿದ್ದಾರೆ.ಇಲ್ಲಿ ನೀಡುವ ಎಲ್ಲಾ ತರಬೇತಿಗಳು ತಾಂತ್ರಿಕತೆಯ ಆಧಾರದಿಂದ ಕೂಡಿದ್ದು, ಭವಿಷ್ಯದ ಸವಾಲುಗಳನ್ನು ಎದುರಿಸಲು ಸಹಕಾರಿಯಾಗಲಿವೆ ಎಂದರು.

    ರೆಡ್‌ಕ್ರಾಸ್ ಸಂಸ್ಥೆಯ ನಿರ್ದೇಶಕ ಕೃಷ್ಣಯ್ಯ ಮಾತನಾಡಿ,ರೆಡ್‌ಕ್ರಾಸ್ ಸಂಸ್ಥೆಯಿಂದ 1-10ನೇತರಗತಿ ಯವರಗೆ ವಿಕಲಚೇತನ ಮಕ್ಕಳಿಗೆ ಶಿಕ್ಷಣವನ್ನು ನೀಡಲಾಗುತ್ತಿದೆ.ಕಿವುಡ ಮತ್ತು ಮೂಕರ ಶಾಲೆಯಲ್ಲಿ ಎಲ್ಲಾ ರೀತಿಯ ತಂತ್ರಜ್ಞಾನವನ್ನು ಬಳಸಿ, ಮಕ್ಕಳಿಗೆ ಕಲಿಸುತ್ತಿದ್ದು, ಎಸ್.ಎಸ್.ಎಲ್.ಸಿಯ ನಂತರ ಮೈಸೂರಿನಲ್ಲಿರುವ ಕೌಶಲ್ಯ ತರಬೇತಿ ಸಂಸ್ಥೆಯಲ್ಲಿ ತರಬೇತಿ ನೀಡಿ, ಅವರಿಗೆ ಉದ್ಯೋಗ ದೊರಕಿಸುವ ಕೆಲಸವನ್ನು ಮಾಡುತ್ತಾ ಬಂದಿದ್ದೇವೆ.

     ಭಾರತೀಯ ರೆಡ್ ಕ್ರಾಸ್ ಸಂಸ್ಥೆಯಿಂದ ನಡೆಯುತ್ತಿರುವ ಈ ಶಾಲೆಯಲ್ಲಿ ಪ್ರಸ್ತುತ 100 ಮಕ್ಕಳು ಕಲಿಯುತ್ತಿದ್ದು, 150 ಮಕ್ಕಳು ಕಲಿಯಲು ಅವಕಾಶವಿದೆ.ಊಟ, ವಸತಿ, ಶಾಲಾ ಶುಲ್ಕ ಎಲ್ಲವೂ ಉಚಿತವಾಗಿ ನೀಡುತ್ತಿದ್ದು,ಅಂಗವಿಕಲ ಮಕ್ಕಳನ್ನು ಹೊಂದಿರುವ ತಂದೆ ತಾಯಿಗಳು ಯಾವುದೇ ಅಂಜಿಕೆ ಇಲ್ಲದೆ ತಮ್ಮ ಮಕ್ಕಳನ್ನು ನಮ್ಮ ಶಾಲೆಗೆ ಸೇರಿಸಿ, ಅವರನ್ನು ವಿದ್ಯಾವಂತರನ್ನಾಗಿ ಮಾಡಬಹುದು. ಇದರ ಜೊತೆಗೆ ಕೌಶಲ್ಯ ತರಬೇತಿ ಕೇಂದ್ರವೂ ಆರಂಭವಾಗಿರುವುದು ಮತ್ತಷ್ಟು ಹೆಚ್ಚಿನ ಶೈಕ್ಷಣಿಕ ಅಭಿವೃದ್ದಿಗೆ ಪೂರಕವಾಗಿದೆ ಎಂದರು.

     ಸುದ್ದಿಗೋಷ್ಠಿಯಲ್ಲಿ ರೆಡ್ ಕ್ರಾಸ್ ಸಂಸ್ಥೆಯ ನಿರ್ದೇಶಕರಾದ ವೇಣುಗೋಪಾಲ್,ಲೋಕೇಶ್ ಟಿ.ಆರ್., ಶಿವಕುಮಾರ್ ಕೆ.ಜಿ. ಜಿ.ವಿ.ವಾಸುದೇವ್ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap