ಮುಡಾಹಗರಣ ಕೇಸ್‌ : ಆ.31ಕ್ಕೆ ವಿಚಾರಣೆ ಮುಂದೂಡಿಕೆ

ಬೆಂಗಳೂರು 

    ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಸೈಟು ಹಂಚಿಕೆ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ನೋಟೀಸ್ ಜಾರಿ ಮಾಡಿರುವುದನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಕೆ ಅರ್ಜಿ ವಿಚಾರಣೆ ಮಾಡಿದ ಹೈಕೋರ್ಟ್, ಆ.31ಕ್ಕೆ ಅರ್ಜಿ ವಿಚಾರಣೆಯನ್ನು ಮುಂದೂಡಿಕೆ ಮಾಡಿದೆ.

   ಗುರುವಾರ ಹೈಕೋರ್ಟ್ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಏಕಸದಸ್ಯ ಪೀಠದಲ್ಲಿ ವಿಚಾರಣೆ ಆರಂಭಿಸಿದ ನಂತರ, ಮುಖ್ಯಮಂತ್ರಿ ಸಿದ್ದರಾಮಯ್ಯ ಪರ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು ಸುಧೀರ್ಘವಾಗಿ ವಾದ ಮಂಡಿಸಿದರು. ಸಿಎಂ ಸಿದ್ದರಾಮಯ್ಯ ಪರ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು, ಸಿಎಂ ವಿರುದ್ಧ ರಾಜ್ಯಪಾಲರು ನೀಡಿದ ಪ್ರಾಸಿಕ್ಯೂಷನ್ ಅನುಮತಿಯನ್ನು ನ್ಯಾಯಾಂಗ ಪರಿಶೀಲಿಸಬಹುದು.

   ಈಗಾಗಲೇ ಅದರ ಬಗ್ಗೆ ಎರಡು ತೀರ್ಪುಗಳು ಬಂದಿವೆ. ಗವರ್ನರ್ ವಿವೇಚನೆಯನ್ನೇ ಬಳಸಿಲ್ಲ, ಆದರೆ ಕ್ಯಾಬಿನೆಟ್ ನಿರ್ಧಾರಕ್ಕೆ ಬದ್ಧನಲ್ಲ ಎಂದಿದ್ದಾರೆ. ಈ ವೇಳೆ ಮಾತನಾಡಿದ ನ್ಯಾಯಮೂರ್ತಿಗಳು, ಕ್ಯಾಬಿನೆಟ್​ ನಿರ್ಧಾರಕ್ಕೆ ರಾಜ್ಯಪಾಲರು ಬದ್ಧರಾಗಬೇಕಿಲ್ಲ. ಸಿಎಂ ವಿರುದ್ಧ ನಿರ್ಧಾರ ತೆಗೆದುಕೊಳ್ಳುವುದು ರಾಜ್ಯಪಾಲರ ಸ್ವತಂತ್ರ ನಿರ್ಧಾರ. ಉಳಿದೆಲ್ಲ ಪ್ರಕರಣಗಳಲ್ಲಿ ರಾಜ್ಯಪಾಲರು ಕ್ಯಾಬಿನೆಟ್​ ಸಲಹೆ ಪರಿಗಣಿಸಬೇಕು. ಈ ಪ್ರಕರಣದಲ್ಲಿ ಸಲಹೆ ಪರಿಗಣಿಸಬೇಕೆಂದಿಲ್ಲ ಎಂದು ಹೇಳಿದರು. ಇದಕ್ಕೆ ಮರು ಉತ್ತರಿಸಿದ ವಕೀಲ ಸಿಂಘ್ವಿ ಸಂಪುಟ​ ನಿರ್ಣಯಕ್ಕೆ ಬದ್ಧನಾಗಿಲ್ಲ ಎಂಬ ಏಕೈಕ ಕಾರಣಕ್ಕೆ ತನಿಖೆಗೆ ಅನುಮತಿಸುವ  ನಿಲುವು ಸರಿಯಲ್ಲ ಎಂದು ಹೇಳಿದರು.  

  ತಾನು ನೀಡಿದ ಅದೇ ದೂರನ್ನೇ ಆಕ್ಷೇಪಣೆಯಲ್ಲೂ ಸಲ್ಲಿಸಿದ್ದಾರೆ. ನೈಸರ್ಗಿಕ ನ್ಯಾಯ ಮುಖ್ಯವಾಗಿದೆ. ಆ.8ರಂದು ಒಂದು ಖಾಸಗಿ ದೂರು ದಾಖಲಿಸಿದ್ದಾರೆ. ದೂರುದಾರರು 17A ಬೇಕಿಲ್ಲವೆಂಬುದಕ್ಕೆ ಕಾರಣ ನೀಡಿದ್ದಾರೆ. ಸಿಎಂ ಆದೇಶ, ಶಿಫಾರಸು ಪ್ರಶ್ನಿಸಿಲ್ಲದ್ದರಿಂದ 17A ಅನುಮತಿ ಅಗತ್ಯವಿಲ್ಲ ಎಂದಿದ್ದಾರೆ. 2004-05ರಲ್ಲಿ ಈ ಪ್ರಕರಣಗಳು ನಡೆದಿವೆ. ಘಟನೆ ನಡೆದ 10 -15 ವರ್ಷಗಳ ನಂತರ ದೂರು ಸಲ್ಲಿಸಿದ್ದಾರೆ. ಅರ್ಜಿ ವಜಾ ಮಾಡಲು ಇದೊಂದೇ ಕಾರಣ ಸಾಕು. ಕಳೆದ 10-15 ವರ್ಷ ಹಳೆ ಘಟನೆಗಳಿಗೆ ಈಗಿನ ಕಾನೂನು ಅನ್ವಯಿಸಲಾಗುತ್ತಿದೆ. ಹಲವು ಕೇಸುಗಳಲ್ಲಿ ತನಿಖೆ ನಡೆದು ಚಾರ್ಜ್‌ಶೀಟ್​ ಸಲ್ಲಿಸಿದ್ದರೂ ತನಿಖೆಗೆ ಅನುಮತಿಸಿಲ್ಲ. ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ, ಮಾಜಿ ಸಚಿವ ಮುರುಗೇಶ್ ನಿರಾಣಿ, ಶಶಿಕಲಾ ಜೊಲ್ಲೆ ಪ್ರಕರಣಗಳಲ್ಲಿ ಪಾಸಿಕ್ಯೂಷನ್‌​ಗೆ ಅನುಮತಿಸಿಲ್ಲ ಎಂದು ವಕೀಲ ಅಭಿಷೇಕ್ ಮನು ಸಿಂಘ್ವಿ ವಾದ ಮಂಡಿಸಿದರು.

    ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಮುಡಾ) ಅನಧಿಕೃತವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಅಧಿಕಾರವನ್ನು ಬಳಸಿಕೊಂಡು 14 ನಿವೇಶನಗಳನ್ನು ಪಡೆದಿದ್ದಾರೆ ಎಂದು ರಾಜ್ಯಪಾಲರಿಗೆ ಟಿ.ಜೆ. ಅಬ್ರಾಹ್ಂ, ಪ್ರವೀಣ್ ಹಾಗೂ ಸ್ನೇಹಮಯಿ ಕೃಷ್ಣ ಎನ್ನುವವರು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ತಮಗೆ ಬಂದ ದೂರನ್ನು ಆಧರಿಸಿ ಸಿಎಂ ಸಿದ್ದರಾಮಯ್ಯ ಅವರಿಗೆ ಪ್ರಾಸಿಕ್ಯೂಷನ್‌ಗೆ ಹಾಜರಾಗುವಂತೆ ರಾಜ್ಯಪಾಲರಾದ ಥಾವರ್ ಚಂದ್ ಗೆಹಲೋಟ್ ಅವರು ನೋಟೀಸ್ ಜಾರಿ ಮಾಡಿದ್ದರು. ಆದರೆ, ಈ ಬಗ್ಗೆ ಸರ್ಕಾರದ ಸಚಿವ ಸಂಪುಟದಿಂದ ಸಿಎಂ ಅವರಿಗೆ ನೀಡಲಾದ ಪ್ರಾಸಿಕ್ಯೂಷನ್‌ ರದ್ದುಗೊಳಿಸುಂತೆ, ಇಲ್ಲವಾದರೆ ರಾಜ್ಯಪಾಲದ ಆದೇಶದ ವಿರುದ್ಧ ಕಾನೂನು ಹೋರಾಟ ಮಾಡುವ ಬಗ್ಗೆ ನಿರ್ಣಯ ಕೈಗೊಳ್ಳಲಾಗಿತ್ತು.
    ಸಿಎಂ ಸಿದ್ದರಾಮಯ್ಯ ವಿರುದ್ಧ ನೀಡಲಾದ ನೋಟೀಸ್ ವಾಪಸ್ ಪಡೆಯದ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ರಾಜ್ಯಪಾಲರ ನೊಟೀಸ್ ವಿರುದ್ಧ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಕೆ ಮಾಡಿದ್ದರು. ಈ ಅರ್ಜಿ ವಿಚಾರಣೆ ಮಾಡಿದ್ದ ಹೈಕೋರ್ಟ್, ಕೆಳ ಹಂತದ ಯಾವುದೇ ನ್ಯಾಯಾಲಯಗಳು ಮುಡಾ ಹಗರಣದ ಕೇಸುಗಳನ್ನು ವಿಚಾರಣೆ ನಡೆಸಿ ಆದೇಶ ಹೊರಡಸಿದಂತೆ ಸೂಚನೆ ನೀಡಿತ್ತು. ಜೊತೆಗೆ, ಆ.29ಕ್ಕೆ ವಿಚಾರಣೆ ಮತ್ತು ಆದೇಶವನ್ನು ಕಾಯ್ದಿರಿಸಿತ್ತು. ಇಂದು ವಿಚಾರಣೆ ಮಾಡಿದ ನ್ಯಾಯಾಲಯವು ಪುನಃ ವಿಚಾರಣೆಯನ್ನು ಎರಡು ದಿನಗಳ ಕಾಲ (ಆ.31ಕ್ಕೆ) ಮುಂದೂಡಿಕೆ ಮಾಡಿದೆ.

Recent Articles

spot_img

Related Stories

Share via
Copy link
Powered by Social Snap