ಚೀನಾಗೆ ಚಿಪ್ಪು ಹಂದಿ ಅಕ್ರಮ ಸಾಗಾಟ : ಆರೋಪಿಗಳು ಬಂಧನ

ಬೆಳಗಾವಿ

    ಚಿಪ್ಪು ಹಂದಿಯನ್ನು ಚೀನಾಗೆ  ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಆರೋಪಿಗಳನ್ನು ಖಾನಾಪುರ ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ. ಆರೋಪಿಗಳು ಗುರುವಾರ ಖಾನಾಪುರ  ಕಾಡಿನಲ್ಲಿ ಚಿಪ್ಪು ಹಂದಿಯನ್ನು ಹಿಡಿದು, ಲೋಂಡಾ ಗ್ರಾಮದ ರೇಲ್ವೆ ನಿಲ್ದಾಣಕ್ಕೆ ಬಂದಿದ್ದಾರೆ. ಚೀಲದ ಕೆಳಭಾಗದಲ್ಲಿ ಚಿಪ್ಪು ಹಂದಿ ಇರಿಸಿ, ಮೇಲ್ಭಾಗದಲ್ಲಿ ತರಕಾರಿ ಇಟ್ಟು ಯಾರಿಗೂ ಸಂಶಯ ಬರದಂತೆ ಬಂದಿದ್ದಾರೆ.

   ನಿಲ್ದಾಣದಲ್ಲಿ ಆರೋಪಿಗಳ ಸಂಶಯಾಸ್ಪದ ಓಡಾಟ ಕಂಡ ಅರಣ್ಯ ಇಲಾಖೆ ಸಿಬ್ಬಂದಿ, ಹಿಡಿದು ವಿಚಾರಣೆ ಮಾಡಿದಾಗ ಚಿಪ್ಪು ಹಂದಿ ಸಾಗಾಟ ಬೆಳಕಿಗೆ ಬಂದಿದೆ. ಕೂಡಲೇ ಆರೋಪಿಗಳನ್ನು ಬಂಧಿಸಿ ಚಿಪ್ಪು ಹಂದಿಯನ್ನ ರಕ್ಷಣೆ ಮಾಡಿದ್ದಾರೆ. ವಿಚಾರಣೆ ನಡೆಸಿ ಆರೋಪಿಗಳನ್ನು ಹಾಗೂ ಜೀವಂತ ಚಿಪ್ಪು ಹಂದಿಯನ್ನು ಅಧಿಕಾರಿಗಳು ಸ್ಥಳೀಯ ನ್ಯಾಯಾಲಯಕ್ಕೆ ಹಾಜರು ಪಡಿಸಿದರು.

   ಅರಣ್ಯ ಇಲಾಖೆ ಅಧಿಕಾರಿಗಳ ಪ್ರಾಥಮಿಕ ತನಿಖೆಯಲ್ಲಿ ಚಿಪ್ಪು ಹಂದಿಯನ್ನು ಚೀನಾಗೆ ಅಕ್ರಮವಾಗಿ ಸಾಗಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಆರೋಪಿಗಳು ಲೋಂಡಾ ರೇಲ್ವೆ ನಿಲ್ದಾಣದಿಂದ ಕಾರವಾರ ಅಥವಾ ಗೋವಾದ ಬಂದರಿಗೆ ಚಿಪ್ಪು ಹಂದಿಯನ್ನು ಸಾಗಿಸುತ್ತಾರೆ. ಅಲ್ಲಿಂದ ಕೊಲ್ಕತ್ತಾ ಬಂದರಿಗೆ ಹೋಗುವ ಈ ಚಿಪ್ಪು ಹಂದಿ, ಅಲ್ಲಿಂದ ನೇರವಾಗಿ ಹಡಗಿನಲ್ಲಿ ಚೀನಾಗೆ ಹೋಗುತ್ತೆ.

   ಈ ಚಿಪ್ಪು ಹಂದಿಯ ಚಿಪ್ಪನ್ನು ಪುರುಷತ್ವ ಹೆಚ್ಚಿಸುವ ಔಷಧಕ್ಕೆ ಬಳಸಲಾಗುತ್ತದೆ. ಹೀಗೆ ತಯಾರು ಮಾಡಿದ ಔಷದಕ್ಕೆ ಅಂತರಾಷ್ಟ್ರೀಯ ಮಟ್ಟದಲ್ಲಿ ಬಲು ಬೇಡಿಕೆ ಇದೆ. ಹೀಗಾಗಿ ಚಿಪ್ಪು ಹಂದಿಗಳನ್ನು ವ್ಯವಸ್ಥಿತವಾಗಿ ಸಾಗಿಸುವ ಗ್ಯಾಂಗ್ ಆ್ಯಕ್ಟಿವ್​ ಆಗಿದೆ.ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳು ಸಿಕ್ಕಿಬಿದ್ದಿದ್ದು, ಇವರ ಹಿಂದೆ ಯಾರಿದ್ದಾರೆ, ಗ್ಯಾಂಗ್​ ಹೇಗೆ ಕೆಲಸ ಮಾಡುತ್ತಿದೆ ಎಂಬೆಲ್ಲ ಆಯಾಮಗಳಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಅಳಿವಿನಂಚಿನಲ್ಲಿರುವ ಚಿಪ್ಪು ಹಂದಿಗಳನ್ನು ಸಂರಕ್ಷಣೆ ಮಾಡಲು ಇಂತಹ ಖದೀಮರ ಗ್ಯಾಂಗ್ ಅನ್ನು ಅರಣ್ಯ ಇಲಾಖೆ ಮಟ್ಟ ಹಾಕಲಿ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

 

Recent Articles

spot_img

Related Stories

Share via
Copy link