ನವದೆಹಲಿ:
ಮಹಮಾರಿ ಕರೊನಾ ವೈರಸ್ ಒಮಿಕ್ರಾನ್ ರೂಪದಲ್ಲಿ ಮತ್ತೆ ತನ್ನ ಕಬಂದಬಾಹುವನ್ನು ವಿಶ್ವದೆಲ್ಲೆಡೆ ಚಾಚುತ್ತಿದ್ದು, ಜನರನ್ನು ಆತಂಕಕ್ಕೆ ದೂಡಿದೆ.
ಕರೊನಾ ಮೊದಲು ಸ್ಫೋಟಗೊಂಡ ಚೀನಾದಲ್ಲಿ ಮತ್ತೆ ಕೋವಿಡ್ ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಅದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕಠಿಣ ಕ್ರಮಗಳನ್ನು ಜಾರಿಗೆ ತರಲಾಗಿದೆ.
ಚೀನಾದಲ್ಲಿ ಸದ್ಯ ಕೋವಿಡ್ ಶೂನ್ಯ ನಿಯಮವನ್ನು ಪಾಲಿಸಲಾಗುತ್ತಿದೆ.
ಶಂಕಿತ ಕರೊನಾ ಸೋಂಕಿತರನ್ನು ಒಂದೆಡೆ ಕ್ವಾರಂಟೈನ್ ಮಾಡಲು ಲೋಹದ ಬಾಕ್ಸ್ನಿಂದ ತಯಾರದ ಸಾಲು ಸಾಲು ಮನೆಗಳನ್ನು ಇರಿಸಲಾಗಿದೆ.
ಅಲ್ಲದೆ, ಸಾಲು ಸಾಲು ಬಸ್ಗಳು ಜನರನ್ನು ತುಂಬಿಕೊಂಡು ಕ್ವಾರಂಟೈನ್ ಕ್ಯಾಂಪ್ಗಳತ್ತ ಬರುತ್ತಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದ್ದು, ಚೀನಾ ಪರಿಸ್ಥಿತಿಯನ್ನು ನೋಡಿ ಆತಂಕಪಡುವಂತಾಗಿದೆ.
ಬೀಜಿಂಗ್ನಲ್ಲಿ ಮುಂದಿನ ತಿಂಗಳು ನಡೆಯಲಿರುವ ಚಳಿಗಾಲದ ಒಲಿಂಪಿಕ್ಸ್ಗೆ ಭಾರೀ ಸಿದ್ಧತೆಯ ನಡುವೆಯೂ ಶೂನ್ಯ ಕೋವಿಡ್ ನಿಯಮದ ಅಡಿಯಲ್ಲಿ ಲಕ್ಷಾಂತರ ಮಂದಿಯನ್ನು ಕ್ವಾರಂಟೈನ್ನಲ್ಲಿ ಇಟ್ಟಿದೆ.
ಗರ್ಭಿಣಿಯರು, ಮಕ್ಕಳು, ಹಿರಿಯ ನಾಗರಿಕರು ಸೇರಿದಂತೆ ಅನೇಕ ಮಂದಿಯನ್ನು ಬಲವಂತವಾಗಿ ಮರದ ಹಾಸಿಗೆ ಮತ್ತು ಶೌಚಾಲಯದೊಂದಿಗೆ ಸುಸಜ್ಜಿತವಾದ ಲೋಹದ ಮನೆಗಳಲ್ಲಿ ಇರಿಸಲಾಗಿದೆ. ಒಂದು ಪ್ರದೇಶದಲ್ಲಿ ಒಬ್ಬರಿಗೆ ಸೋಂಕು ಕಾಣಿಸಿಕೊಂಡರೆ ಅಲ್ಲಿರುವ ಎಲ್ಲರನ್ನು ಎರಡು ವಾರಗಳ ಕಾಲ ಕ್ವಾರಂಟೈನ್ನಲ್ಲಿ ಇಡಲಾಗುತ್ತಿದೆ.
ಚೀನಾದ ಹಲವಾರು ಪ್ರದೇಶಗಳಲ್ಲಿ, ಮಧ್ಯರಾತ್ರಿಯ ನಂತರ ನಿವಾಸಿಗಳು ತಮ್ಮ ಮನೆಗಳನ್ನು ತೊರೆದು ಕ್ವಾರಂಟೈನ್ ಕೇಂದ್ರಗಳಿಗೆ ಹೋಗಬೇಕೆಂದು ಸರ್ಕಾರ ಸೂಚನೆ ನೀಡಿದೆ.
ಟ್ರ್ಯಾಕ್ ಮತ್ತು ಟ್ರೇಸ್ ಅಪ್ಲಿಕೇಶನ್‌ಗಳನ್ನು ಚೀನಾದಲ್ಲಿ ಕಡ್ಡಾಯ ಮಾಡಲಾಗಿದ್ದು, ಕೋವಿಡ್ ಸೋಂಕಿತನ ನಿಕಟ ಸಂಪರ್ಕಗಳನ್ನು ಪತ್ತೆಹಚ್ಚಿ, ತ್ವರಿತವಾಗಿ ಕ್ವಾರಂಟೈನ್ ಮಾಡಲಾಗುತ್ತದೆ.
ಚೀನಾದಲ್ಲಿ ಸುಮಾರು 20 ಮಿಲಿಯನ್ (2 ಕೋಟಿ) ಮಂದಿಯನ್ನು ಅವರವರ ಮನೆಯಲ್ಲಿ ಬಂಧಿಸಲಾಗಿದೆ. ಆಹಾರ ಪದಾರ್ಥ ಖರೀದಿಸಲೂ ಸಹ ಹೊರಗಡೆ ಬಿಡುತ್ತಿಲ್ಲ. ಕಠಿಣ ನಿಯಮಗಳ ಪರಿಣಾಮ ಸರಿಯಾದ ಸಮಯಕ್ಕೆ ಚಿಕಿತ್ಸೆ ದೊರೆಯದೇ ಗರ್ಭಿಣಿಯೊಬ್ಬರಿಗೆ ಗರ್ಭಪಾತವಾದ ಅಮಾನವೀಯ ಘಟನೆಗೂ ಚೀನಾ ಸಾಕ್ಷಿಯಾಗಿದೆ.
ಚೀನಾದಲ್ಲಿ 2019ರಲ್ಲಿ ಮೊದಲ ಬಾರಿಗೆ ಕರೊನಾ ವೈರಸ್ ಪತ್ತೆಯಾಯಿತು. ವೇಗವಾಗಿ ವೈರಸ್ ಹರಡುವುದನ್ನು ತಡೆಯಲು ಚೀನಾ ಡೈನಾಮಿಕ್ ಶೂನ್ಯ ಎಂದು ಕರೆಯಲ್ಪಡುವ ಸೂತ್ರವನ್ನು ಎಣೆದಿದೆ.
ಇದರ ಅಡಿಯಲ್ಲಿ ಕಟ್ಟುನಿಟ್ಟಾದ ಲಾಕ್ಡೌನ್ ನಿಯಮಗಳು ಮತ್ತು ತಕ್ಷಣ ಸಾಮೂಹಿಕ ಕರೊನಾ ಪರೀಕ್ಷೆಗೆ ಒಳಪಡಿಸಲಾಗುತ್ತದೆ.
ಬೇರೆಡೆ ಮೃದುವಾದ ಲಾಕ್‌ಡೌನ್‌ಗಳಿಗಿಂತ ಚೀನಾದ ಲಾಕ್ಡೌನ್ ಭಿನ್ನವಾಗಿದೆ. ಜನರು ತಮ್ಮ ಕಟ್ಟಡಗಳನ್ನು ತೊರೆಯುವುದನ್ನು ನಿಷೇಧಿಸಲಾಗಿದೆ ಮತ್ತು ಅದಕ್ಕೂ ಹೆಚ್ಚಿನ ಅಪಾಯದ ಸಂಪರ್ಕಗಳೆಂದು ಪರಿಗಣಿಸಿದರೆ ಹೋಟೆಲ್ ಕೊಠಡಿಗಳಲ್ಲಿ ಉಳಿಯಲು ಒತ್ತಾಯಿಸುವ ಸಾಧ್ಯತೆಯು ಚೀನಾದಲ್ಲಿ ಇದೆ. ಒಟ್ಟಾರೆ ಶೂನ್ಯ ಕೋವಿಡ್ ನಿಯಮದ ಅಡಿಯಲ್ಲಿ ಕಠಿಣ ಕ್ರಮಗಳನ್ನು ಚೀನಾ ತೆಗೆದುಕೊಂಡಿದೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ