ತಿರುಪತಿ ತಿಮ್ಮಪ್ಪನ ದರ್ಶನ ಈಗ ಇನ್ನಷ್ಟು ಸುಲಭ : ಹೇಗೆ ಗೊತ್ತಾ…?

ಆಂಧ್ರಪ್ರದೇಶ: 

    ತಿರುಪತಿ ತಿಮ್ಮಪ್ಪನ ದರ್ಶನ ಪಡೆಯಲು ಹಲವು ರಾಜ್ಯ, ದೇಶ-ವಿದೇಶಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸುತ್ತಾರೆ. ಇತ್ತೀಚೆಗಷ್ಟೇ ಉಂಟಾದ ಲಡ್ಡು ಪ್ರಸಾದ ವಿವಾದದ ನಡುವೆಯೂ ದೇವಾಲಯಕ್ಕೆ ಭಕ್ತರ ಸಂಖ್ಯೆಯ ಹರಿವು ಹೆಚ್ಚಾಯಿತೇ ವಿನಃ ಕಡಿಮೆ ಕಾಣಿಸಲಿಲ್ಲ.

   ಇದು ದೇವಾಲಯದ ಟ್ರಸ್ಟ್​ ಮೇಲಿದ್ದ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ. ಈ ನಿಟ್ಟಿನಲ್ಲಿ ದೇವಾಲಯದ ಹಿಂದಿನ ನಿಯಮಗಳನ್ನು ಪರಿಶೀಲಿಸಿದ ಟಿಟಿಡಿ, ಇಂದು ಸಭೆ ನಡೆಸಿ, ಹೊಸ ಬದಲಾವಣೆಗಳನ್ನು ಕಾರ್ಯರೂಪಕ್ಕೆ ತರಲು ನಿರ್ಧರಿಸಿದೆ. 

   ಟಿಟಿಡಿ ಆಡಳಿತ ಮಂಡಳಿ ಹಲವು ನಿರ್ಧಾರಗಳನ್ನು ತೆಗೆದುಕೊಂಡಿದ್ದು, ಶ್ರೀವಾಣಿ ಟ್ರಸ್ಟ್ ಅನ್ನು ವಜಾಗೊಳಿಸಿದೆ. ಕೇವಲ 2ರಿಂದ 3 ಗಂಟೆಯೊಳಗೆ ಸಾಮಾನ್ಯ ಭಕ್ತರು ದೇವರ ದರ್ಶನ ಪಡೆಯುವಂತೆ ಬದಲಾವಣೆ ತರಲು ಎಐ ಮತ್ತು ಆಧುನಿಕ ತಂತ್ರಜ್ಞಾನ ಬಳಸಲು ಕ್ರಮಕೈಗೊಳ್ಳಲಾಗಿದೆ. ಕಂಪಾರ್ಟ್‌ಮೆಂಟ್‌ಗಳಲ್ಲಿ ಭಕ್ತರಿಗೆ ತೊಂದರೆ, ಕಿರಿಕಿರಿ ಉಂಟಾಗದಂತೆ ದರ್ಶನ ಲಭ್ಯವಾಗಲು ಯೋಜನೆ ರೂಪಿಸಲಾಗಿದೆ. ಟಿಟಿಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅನ್ಯಧರ್ಮೀಯ ನೌಕರರನ್ನು ವಿಆರ್​ಎಸ್ ಅಥವಾ ಸರ್ಕಾರಿ ಇಲಾಖೆಗಳಿಗೆ ವರ್ಗಾಯಿಸಲು ನಿರ್ಧರಿಸಲಾಗಿದೆ. ಈ ಕುರಿತು ಟಿಟಿಡಿ ಅಧ್ಯಕ್ಷ ಬಿಆರ್ ನಾಯ್ಡು ಸ್ಪಷ್ಟಪಡಿಸಿದ್ದಾರೆ. 

   ತಿರುಮಲದ ಬಳಿಯಿರುವ ಕಸದ ತೊಟ್ಟಿಯನ್ನು ಮೂರು ತಿಂಗಳೊಳಗೆ ತೆರವುಗೊಳಿಸಲು ಟಿಟಿಡಿ ನಿರ್ಧರಿಸಿದೆ. ಶ್ರೀನಿವಾಸಸೇತು ಫ್ಲೇಓವರ್​ ಅನ್ನು ಗರುಡ ವಾರದಿ ಎಂದು ಮರುನಾಮಕರಣ ಮಾಡಲಾಗಿದೆ. ಅಲಿಪಿರಿಯಲ್ಲಿ ದೇವಲೋಕಕ್ಕೆ ಮಂಜೂರಾದ 20 ಎಕರೆ ಭೂಮಿಯನ್ನು ಟಿಟಿಡಿಗೆ ಹಸ್ತಾಂತರಿಸಲು ಸರಕಾರಕ್ಕೆ ಪತ್ರ ಬರೆಯುವಂತೆ ಬಿ.ಆರ್. ನಾಯ್ಡು ತಿಳಿಸಿದ್ದಾರೆ. ಇದಲ್ಲದೆ, ತಿರುಮಲ ಸುತ್ತಮುತ್ತಲಿನ ಪ್ರದೇಶಗಳಲ್ಲಿ ರಾಜಕೀಯದ ಬಗ್ಗೆ ಮಾತನಾಡದಂತೆ ನಿರ್ಬಂಧ ಹೇರಲಾಗಿತ್ತು. ಈ ನಿಯಮಗಳನ್ನು ಉಲ್ಲಂಘಿಸಿದರೆ ಪ್ರಕರಣ ದಾಖಲಿಸಲಾಗುವುದು ಎಂಬ ಎಚ್ಚರಿಕೆ ರವಾನಿಸಲಾಗಿದೆ. 

   ಪ್ರತಿ ತಿಂಗಳ ಮೊದಲ ಮಂಗಳವಾರದಂದು ಸ್ಥಳೀಯರಿಗೆ ದೇವರ ದರ್ಶನ ನೀಡಲು ಟಿಟಿಡಿ ನಿರ್ಧರಿಸಿದೆ. ಶ್ರೀವಾಣಿ ಟ್ರಸ್ಟ್ ರದ್ದುಪಡಿಸಿ, ಟಿಕೆಟ್ ಮಾರಾಟದಿಂದ ಬಂದ ಹಣವನ್ನು ಟಿಟಿಡಿ ಖಾತೆಗೆ ಜಮಾ ಮಾಡಲು ಯೋಜಿಸಲಾಗಿದೆ. ಖಾಸಗಿ ಬ್ಯಾಂಕ್ ಠೇವಣಿಗಳಿಂದ ಸ್ವಾಮಿಗೆ ಸೇರಿದ ಹಣವನ್ನು ಸರ್ಕಾರಿ ಬ್ಯಾಂಕ್‌ಗಳಿಗೆ ಜಮಾ ಮಾಡಲು ಟಿಟಿಡಿ ಆಡಳಿತ ಮಂಡಳಿ ಮಹತ್ವದ ನಿರ್ಣಯ ಕೈಗೊಂಡಿದೆ. 

   ಪಸ್ತುತ ಹಂಚಿಕೆಯಾಗುತ್ತಿರುವ ತಿರುಪತಿ ಲಡ್ಡು ಪ್ರಸಾದದಲ್ಲಿ ತುಪ್ಪದ ಗುಣಮಟ್ಟವನ್ನು ಮತ್ತಷ್ಟು ಪರಿಶೀಲನೆ ನಡೆಸಲಿದ್ದು, ಭಕ್ತರಿಗೆ ಅನ್ನದಾನದಲ್ಲಿ ಮತ್ತೊಂದು ಹೊಸ ಬಗೆಯ ಖಾದ್ಯವನ್ನು ನೀಡಲು ಮಂಡಳಿ ನಿರ್ಧರಿಸಿದೆ. ನೌಕರರಿಗೆ ಬ್ರಹ್ಮೋತ್ಸವ ಉಡುಗೊರೆಯನ್ನು 14 ಸಾವಿರದಿಂದ 15,400 ರೂ.ಗೆ ಹೆಚ್ಚಿಸಿ ಎಂದು ಟಿಟಿಡಿ ಆದೇಶ ಹೊರಡಿಸಿದೆ. ಪ್ರವಾಸೋದ್ಯಮ ಇಲಾಖೆಗೆ ನೀಡಲಾಗಿದ್ದ 4 ಸಾವಿರ ಎಸ್‌ಇಡಿ ಟಿಕೆಟ್‌ಗಳನ್ನು ರದ್ದುಗೊಳಿಸುವ ಮೂಲಕ ಟಿಟಿಡಿ ಅಧ್ಯಕ್ಷ ಬಿ.ಆರ್.ನಾಯ್ಡು ಅವರು ಹಲವು ಮಹತ್ವದ ಬದಲಾವಣೆಗಳನ್ನು ಈ ಸಭೆಯಲ್ಲಿ ಕೈಗೊಂಡಿದ್ದಾರೆ,

Recent Articles

spot_img

Related Stories

Share via
Copy link
Powered by Social Snap