ಬೆಂಗಳೂರು:
ಕೋಣನಕುಂಟೆ ಬಳಿಯ ವಾಜರಹಳ್ಳಿಯಲ್ಲಿ ಗುರುವಾರ ರಾತ್ರಿ ಸಂಭವಿಸಿದ ಅಪಘಾತದಲ್ಲಿ ‘ನನ್ನಮ್ಮ ಸೂಪರ್ ಸ್ಟಾರ್’ ರಿಯಾಲಿಟಿ ಶೋ ಖ್ಯಾತಿಯ ಸಮನ್ವಿ(6) ಮೃತಪಟ್ಟದ್ದು ಅತ್ಯಂತ ನೋವಿನ ಸಂಗತಿ. ಇವಳ ತಾಯಿ, ಖ್ಯಾತ ನಿರೂಪಕಿ ಅಮೃತಾ ನಾಯ್ಡು ಸ್ಥಿತಿ ಗಂಭೀರವಾಗಿದ್ದು, ಅವರ ಚೇತರಿಕೆಗಾಗಿ ಅಭಿಮಾನಿಗಳು ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ.
ಈ ದುರ್ಘಟನೆಗೆ ಹೇಗಾಯ್ತು? ಪ್ರತ್ಯಕ್ಷದರ್ಶಿಗಳು ಬಿಚ್ಚಿಟ್ಟ ಅಸಲಿ ವಿಷ್ಯಯ ಇಲ್ಲಿದೆ.
ಅಮೃತಾ ನಾಯ್ಡು ಶಾಪಿಂಗ್ಗಾಗಿ ಗುರುವಾರ ಸಂಜೆ 4.30ರಲ್ಲಿ ಸ್ಕೂಟರ್ನಲ್ಲಿ ಮಗಳನ್ನು ಹಿಂದೆ ಕೂರಿಸಿಕೊಂಡು ವಾಜರಹಳ್ಳಿ ಮೆಟ್ರೋ ನಿಲ್ದಾಣಕ್ಕೆ ತೆರಳುತ್ತಿದ್ದರು.
ಮಾರ್ಗಮಧ್ಯೆ ವಾಜರಹಳ್ಳಿ ಮುಖ್ಯರಸ್ತೆಯ ನಿತೇಶ್ ಸೀಸರ್ ಅಪಾರ್ಟ್ಮೆಂಟ್ ಬಳಿ ವೇಗವಾಗಿ ಬಂದ ಟಿಪ್ಪರ್ ಲಾರಿ, ಓವರ್ಟೆಕ್ ಮಾಡುವಾಗ ಏಕಾಏಕಿ ಲಾರಿಯ ಎಡಭಾಗ ಸ್ಕೂಟರ್ಗೆ ತಾಗಿತ್ತು. ಪರಿಣಾಮ ಸ್ಕೂಟರ್ ಚಲಾಯಿಸುತ್ತಿದ್ದ ಅಮೃತಾ ಹಾಗೂ ಅವರ ಪುತ್ರಿ ಸಮನ್ವಿ ರಸ್ತೆಗೆ ಬಿದ್ದಿದ್ದರು.
ಸಮನ್ವಿ ಕೈಗೆ ತರಚಿದ ಗಾಯಗಳಾಗಿ, ಬಲಬಾಗದ ತೊಡೆ ಹಾಗೂ ಮರ್ಮಾಂಗದ ಬಳಿ ರಕ್ತಗಾಯವಾಗಿತ್ತು. ಸ್ಥಳೀಯರು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾಗ ಮಾರ್ಗಮಧ್ಯೆ ಸಮನ್ವಿ ಕೊನೆಯುಸಿರೆಳೆದಳು. ಅಮೃತಾ ಅವರಿಗೂ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳಕ್ಕೆ ಬಂದ ಕುಮಾರಸ್ವಾಮಿ ಲೇಔಟ್ ಸಂಚಾರ ಪೊಲೀಸರು ಲಾರಿ ಚಾಲಕ ಮಂಜೇಗೌಡನನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಮನ್ವಿಯನ್ನು ಬಲಿ ಪಡೆದ ಲಾರಿ ಕೋಣನಕುಂಟೆ ಕ್ರಾಸ್ ಕಡೆಯಿಂದ ನೈಸ್ ರಸ್ತೆಯ ಕಡೆ ವೇಗವಾಗಿ ಬರುತ್ತಿತ್ತು. ಚಾಲಕ ಏಕಾಏಕಿ ಲಾರಿಯನ್ನು ಎಡಕ್ಕೆ ಚಲಾಯಿಸಿದ ಹಿನ್ನೆಲೆಯಲ್ಲಿ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.
ಅಪಘಾತ ನಡೆದಾಗ ಸಮೀಪದಲ್ಲೇ ಇದ್ದ ಪ್ರತ್ಯಕ್ಷದರ್ಶಿಯೊಬ್ಬರು ಈ ದುರಂತ ಕುರಿತು ವಿವರಿಸಿದ್ದು ಹೀಗೆ, ನಾವು ಡಿ ಮಾರ್ಟ್ ಬಳಿ ನಿಂತಿದ್ದೆವು. ಆಗ ಮೆಟ್ರೋ ಸ್ಟೇಷನ್ ಬಳಿ ಲಾರಿಯೊಂದು ನಿಂತಿತ್ತು, ಜನ ಮುತ್ತಿಕೊಂಡಿದ್ದರು.
ಪೊಲೀಸ್ನವರು ಇನ್ನೂ ಬಂದಿರಲಿಲ್ಲ. ಸಮೀಪಕ್ಕೆ ಹೋಗಿ ನೋಡಿದ್ರೆ ತಾಯಿ-ಮಗಳು ರಸ್ತೆಗೆ ಬಿದ್ದಿದ್ದರು. ಮಗು ಪ್ರಜ್ಞೆ ತಪ್ಪಿತ್ತು. ಆಮೇಲೆ ಗೊತ್ತಾಯ್ತು ಆ ಮಗು ಬದುಕಲಿಲ್ಲ… ಅದು ನನ್ನಮ್ಮ ಸೂಪರ್ ಸ್ಟಾರ್ ಶೋನ ಸ್ಪರ್ಧಿ’ ಎಂದು ಹೇಳುತ್ತಲೇ ಭಾವುಕರಾದರು.
ಫಟಾಫಟ್ ಮಾತಾನಾಡುತ್ತಾ, ಕನ್ನಡಿಗರ ಮನ ಗೆದ್ದಿದ್ದ ಸಮನ್ವಿ ಸಾವು ಅಭಿಮಾನಿಗಳಿಗೆ ಅತೀವ ನೋವು ತಂದಿದೆ. ಈ ಮೊದಲೇ ಒಂದು ಮಗುವನ್ನ ಕಳೆದುಕೊಂಡಿದ್ದ ತಾಯಿ ಅಮೃತಾ ನಾಯ್ಡು ಅವರಿಗೆ ಸಮನ್ವಿಯೇ ಎಲ್ಲವೂ ಆಗಿದ್ದಳು. ಆ ದುರ್ವಿಧಿ ಸಮನ್ವಿಯನ್ನೂ ಬಲಿ ಪಡೆದು ತಾಯಿ ಒಡಲಿಗೆ ಕೊಳ್ಳಿ ಇಟ್ಟಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ