ವಯಾನಾಡು ಭೂಕುಸಿತ : ಸಾವಿನ ಸಂಖ್ಯೆ 249ಕ್ಕೆ ಏರಿಕೆ….!

ಚೂರಲ್ಮಲಾ: 

    ಕೇರಳದ ವಯನಾಡಿನಲ್ಲಿ ಸಂಭವಿಸಿರುವ ವಿನಾಶಕಾರಿ ಭೂಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ ಗುರುವಾರ 249ಕ್ಕೆ ಏರಿಕೆಯಾಗಿದೆ ಮತ್ತು 240 ಮಂದಿ ನಾಪತ್ತೆಯಾಗಿರುವ ಕುರಿತು ವರದಿಯಾಗಿದೆ. ಭೀಕರ ಭೂಕುಸಿತದಲ್ಲಿ ನೂರಾರು ಜನ ಗಾಯಗೊಂಡಿದ್ದು, ಸಾವಿರಾರು ಜನರನ್ನು ಬೇರೆಡೆ ಸ್ಥಳಾಂತರಿಸಲಾಗಿದೆ.

    ನೆಲಸಮವಾಗಿರುವ ಮನೆಗಳು, ಜಖಂಗೊಂಡ ವಾಹನಗಳು, ಬಂಡೆಗಳು, ನೆಲಕ್ಕುರುಳಿರುವ ಬೃಹತ್ ಮರಗಳು ಮತ್ತು ಮಣ್ಣು ಮಿಶ್ರಿತ ನೀರು, ವಯನಾಡಿನ ಚೂರಲ್ಮಲಾ ಮತ್ತು ಮುಂಡಕ್ಕೈ ಎಂಬ ಅವಳಿ ಗ್ರಾಮಗಳಲ್ಲಿ ಕಂಡುಬಂದ ಈ ದೃಶ್ಯಗಳು ಸ್ಮಶಾನವನ್ನು ಹೋಲುತ್ತಿದೆ.

    ಭೂಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ 249ಕ್ಕೆ(ಅಧಿಕೃತ ಸಂಖ್ಯೆ 167) ಏರಿಕೆಯಾಗಿದೆ ಎಂದು ದೃಢೀಕರಿಸದ ವರದಿಗಳು ತಿಳಿಸಿವೆ. ಅಲ್ಲದೆ 240 ಮಂದಿ ಕಾಣೆಯಾಗಿದ್ದಾರೆ(ಅಧಿಕೃತ ಸಂಖ್ಯೆ 191) ಎಂದು ವರದಿಗಳು ತಿಳಿಸಿವೆ. ಮುಂಡಕ್ಕೈನಲ್ಲಿ, ಸುಮಾರು ಶೇ. 90 ರಷ್ಟು ಮನೆಗಳು ನಾಶವಾಗಿವೆ. 10 ಅಡಿ ಎತ್ತರದವರೆಗೆ ಮಣ್ಣಿನಿಂದ ತುಂಬಿವೆ. ಸೇನೆ, ನೌಕಾಪಡೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ(ಎನ್‌ಡಿಆರ್‌ಎಫ್), ಕೋಸ್ಟ್ ಗಾರ್ಡ್, ಅಗ್ನಿಶಾಮಕ ಮತ್ತು ರಕ್ಷಣಾ ಸೇವೆಗಳು, ಪೊಲೀಸ್, ಸಿವಿಲ್ ಡಿಫೆನ್ಸ್ ಫೋರ್ಸ್ ಮತ್ತು ವಿವಿಧ ಎನ್‌ಜಿಒಗಳ ಸ್ವಯಂಸೇವಕರು ಮೊಣಕಾಲು ಉದ್ದದ ಕೆಸರಿನಲ್ಲಿ ನಾಪತ್ತೆಯಾದವರಿಗಾಗಿ ಹುಡುಕಾಟ ನಡೆದಿದೆ.

    ಏತನ್ಮಧ್ಯೆ, ಮುಂಡಕ್ಕಿಯ ರೆಸಾರ್ಟ್‌ನಲ್ಲಿ ಸಿಲುಕಿದ್ದ 19 ಜನರನ್ನು ರಕ್ಷಿಸಿ ಪರಿಹಾರ ಕೇಂದ್ರಕ್ಕೆ ಕರೆತರಲಾಯಿತು. ಮುಂಡಕ್ಕೈನಿಂದ ಐದು ಮೃತದೇಹಗಳನ್ನು ಹೊರತೆಗೆಯಲಾಗಿದೆ.

   ”ನನ್ನ ಪತ್ನಿ ಶೀಜಾ ಮತ್ತು ಕುಟುಂಬದ ಎಂಟು ಮಂದಿ ನಾಪತ್ತೆಯಾಗಿದ್ದಾರೆ. ಅವರ ಬಗ್ಗೆ ಯಾವುದೇ ಮಾಹಿತಿ ಇಲ್ಲ. ನಮ್ಮ ಮನೆಯು ಅವಶೇಷಗಳ ಅಡಿಯಲ್ಲಿ ಹೂತುಹೋಗಿದೆ” ಎಂದು ಮುಂಡಕ್ಕೈನ ಮಂಡಪತಿಲ್ ಮನೆಯ ಸೋಮನ್ ಅವರು ಹೇಳಿದ್ದಾರೆ.

   ರಕ್ಷಣಾ ಕಾರ್ಯಕರ್ತರು ಮುಂಡಕ್ಕೈನ ಪ್ರತಿಯೊಂದು ದೂರದ ಪ್ರದೇಶವನ್ನು ತಲುಪಿದ್ದಾರೆ ಮತ್ತು ಸಿಕ್ಕಿಬಿದ್ದ ಎಲ್ಲಾ ನಿವಾಸಿಗಳನ್ನು ರಕ್ಷಿಸಿದ್ದಾರೆ. ಸೇತುವೆ ಕೊಚ್ಚಿಹೋಗಿರುವುದರಿಂದ, ನಮಗೆ ಭಾರೀ ಯಂತ್ರೋಪಕರಣಗಳನ್ನು ಈ ಪ್ರದೇಶಕ್ಕೆ ಕೊಂಡೊಯ್ಯಲು ಸಾಧ್ಯವಾಗುತ್ತಿಲ್ಲ. ಕಾಂಕ್ರೀಟ್ ಚಪ್ಪಡಿಗಳನ್ನು ಕತ್ತರಿಸಲು ನಾವು ಕಟ್ಟರ್, ಹಗ್ಗಗಳು ಮತ್ತು ಸಣ್ಣ ಉಪಕರಣಗಳನ್ನು ಬಳಸುತ್ತಿದ್ದೇವೆ. ಕೆ9 ಸ್ಕ್ವಾಡ್‌ನ ಶ್ವಾನಗಳು ನಾಲ್ಕು ಸ್ಥಳಗಳನ್ನು ಗುರುತಿಸಲು ಸಹಾಯ ಮಾಡಿವೆ ಮತ್ತು ನಾಪತ್ತೆಯಾದವರನ್ನು ಹುಡುಕಲು ನಾವು ಅವಶೇಷಗಳನ್ನು ತೆಗೆದುಹಾಕುತ್ತಿದ್ದೇವೆ” ಎಂದು ಎಡಿಜಿಪಿ ಎಂ ಆರ್ ಅಜಿತ್‌ಕುಮಾರ್ ಅವರು ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link