ಬೆಂಗಳೂರು:
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಸಹೋದರ ಡಿಕೆ ಸುರೇಶ್ ಸೋಲನ್ನು ನನ್ನ ವೈಯಕ್ತಿಕ ಸೋಲು ಎಂದು ಉಪಮುಖ್ಯ ಮಂತ್ರಿ ಡಿ ಕೆ ಶಿವಕುಮಾರ್ ಅವರು ಗುರುವಾರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಾ.ಸಿ.ಎನ್.ಮಂಜುನಾಥ್ 2.69 ಲಕ್ಷ ಮತಗಳ ಅಂತರದಿಂದ ಗೆದ್ದಿರುವ ಬಗ್ಗೆ ಈ ಸಂದರ್ಭದಲ್ಲಿ ಉಲ್ಲೇಖಿಸಿದರು. ಇದು ನನ್ನ ವೈಯಕ್ತಿಕ ಸೋಲು. ಬೆಂಗಳೂರು ಗ್ರಾಮಾಂತರ ಸೋಲಿನಿಂದ ಮೊದಲು ಚೇತರಿಸಿಕೊಳ್ಳಬೇಕು. ಒಂದು ವಿಷಯ ಸ್ಪಷ್ಟವಾಗಿ ಹೇಳುತ್ತೇನೆ. ನಾನು ಸೋತಿದ್ದೇನೆ ಎಂದ ಮಾತ್ರಕ್ಕೆ ಸುಮ್ಮನಿರುವುದಿಲ್ಲ ಎಂದು ಹೇಳಿದರು.
ಬೆಂಗಳೂರು ಗ್ರಾಮಾಂತರದಲ್ಲಿ ಕಾಂಗ್ರೆಸ್ ವಿರೋಧಿ ಮತಗಳು ಒಂದಾಗುತ್ತವೆ ಎಂದು ಗೊತ್ತಿತ್ತು. ಅಲ್ಪಸಂಖ್ಯಾತರನ್ನು ಹೊರತುಪಡಿಸಿ ಎಲ್ಲ ಬಿಜೆಪಿ ಮತ್ತು ಜೆಡಿಎಸ್ ಮತಗಳು ಒಟ್ಟಿಗೆ ಬರುತ್ತವೆ ಎಂದು ನಮಗೆ ತಿಳಿದಿತ್ತು. ಆದರೆ, ಅದು ಆ ರೀತಿ ಆಗುತ್ತದೆ ಎಂದು ನಾವು ನಿರೀಕ್ಷಿಸಿರಲಿಲ್ಲ. ಇದು ನನ್ನ ವೈಯಕ್ತಿಕ ಸೋಲಾಗಿದೆ ಎಂದು ತಿಳಿಸಿದರು.
ಇದೇ ವೇಳೆ ಮುಂಬರುವ ಚನ್ನಪಟ್ಟಣ ಉಪಚುನಾವಣೆಯಲ್ಲಿ ಡಿಕೆ ಸುರೇಶ್ ಸ್ಪರ್ಧಿಸುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಆ ಬಗ್ಗೆ ಯಾವುದೇ ಚಿಂತನೆ ಸದ್ಯಕ್ಕಿಲ್ಲ. ಮಾಧ್ಯಮದವರಿಗೆ ಆ ಬಗ್ಗೆ ಚಿಂತನೆಯಿರಬೇಕು ಅಷ್ಟೇ ಎಂದರು.
ನನ್ನ ಕ್ಷೇತ್ರದಲ್ಲಿ ಡಾ.ಸಿ.ಎನ್.ಮಂಜುನಾಥ್ ಗೆಲುವು ಸಾಧಿಸಿದ್ದು, ಅವರಿಗೆ ವೈಯಕ್ತಿಕವಾಗಿ ಅಭಿನಂದಿಸುತ್ತೇನೆ. ಪಕ್ಷಕ್ಕಿಂತ ಅಲ್ಲಿ ವ್ಯಕ್ತಿ ಗೆದ್ದಿದ್ದಾರೆ. ಆದರೂ, ಇಷ್ಟು ದೊಡ್ಡ ಅಂತರದಲ್ಲಿ ಸೋಲಿನ ನಿರೀಕ್ಷೆ ಮಾಡಿರಲಿಲ್ಲ. ಡಿ.ಕೆ.ಸುರೇಶ್ ಉತ್ತಮ ಕೆಲಸ ಮಾಡಿದ್ದು, ಆಡಳಿತ ವಿರೋಧ ಇರಲಿಲ್ಲ. ಜನರು ಡಾ.ಮಂಜುನಾಥ್ ಅವರಿಗೆ ಅವಕಾಶ ನೀಡಬೇಕು ಎಂದು ಅವರನ್ನು ಗೆಲ್ಲಿಸಿದ್ದಾರಷ್ಟೆ. ಕನಕಪುರ ಕ್ಷೇತ್ರದಲ್ಲಿ 60 ಸಾವಿರ ಮತಗಳ ಮುನ್ನಡೆ ಪಡೆಯುವ ನಿರೀಕ್ಷೆಯಿತ್ತು. ಆದರೆ, ಅಷ್ಟು ಕಡಿಮೆ ಅಂತರ ಬಂದಿದ್ದನ್ನು ನಿರೀಕ್ಷಿಸಿರಲಿಲ್ಲ. ಈ ಫಲಿತಾಂಶದ ಮೂಲಕ ಜನರು ನೀಡಿರುವ ಸಂದೇಶವನ್ನು ಅರಿಯುತ್ತೇನೆ. ಪ್ರಜ್ಞಾವಂತ ಮತದಾರರ ತೀರ್ಪನ್ನು ಒಪ್ಪುತ್ತೇನೆ ಎಂದರು.