ಸೋಲಿಗೆ ಆಡಳಿತ ವೈಫಲ್ಯ ಕಾರಣ

ಬೆಂಗಳೂರು:


ರಾಜ್ಯದಲ್ಲಿ ಇತ್ತೀಚೆಗೆ ನಡೆದ ವಿವಿಧ ಚುನಾವಣಾ ಫಲಿತಾಂಶಗಳು ಆಡಳಿತರೂಢ ಬಿಜೆಪಿಗೆ ವ್ಯತಿರಕ್ತವಾಗಿದ್ದು, ಇದಕ್ಕೆ ಆಡಳಿತ ವೈಫಲ್ಯ ಕಾರಣ, ಮುಖ್ಯಮಂತ್ರಿಗಳ ಬದಲಾಗುತ್ತಾರೆಂಬ ಗುಸುಗುಸು ಏರ್ಪಟ್ಟ ಹಿನ್ನೆಲೆಯಲ್ಲಿ ಎಚ್ಚೆತ್ತಿರುವ ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ಹುದ್ದೆಯನ್ನು ಭದ್ರವಾಗಿರಿಸಿಕೊಳ್ಳಲು ಆಡಳಿತ ಸುಧಾರಣೆಯ ಪಾಶುಪತಾಸ್ತ್ರ ಪ್ರಯೋಗಿಸಿದ್ದಾರೆ.

ಆಡಳಿತ ಪ್ರಮುಖಸ್ಥಾನದಲ್ಲಿರುವ ಡಿಸಿ, ಸಿಇಓಗಳ ಕಾರ್ಯವೈಖರಿಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಕಳೆದ ಎರಡು ದಿನಗಳ ಕಾಲ ರಾಜ್ಯದ ಎಲ್ಲಾ ಜಿಲ್ಲೆಗಳ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಜಿಲ್ಲಾಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ ಮುಖ್ಯಮಂತ್ರಿಗಳು ಬಾಸಿಸಂ ಬಿಟ್ಟು ಜನ ಸೇವಕರಂತೆ ಕೆಲಸ ಮಾಡಿ.

ಜನಪರ ಕೆಲಸ ಮಾಡುವಾಗ ವಿಳಂಬ, ನಿರ್ಲಕ್ಷ್ಯ, ಅಸಡ್ಡೆಯನ್ನು ಸಹಿಸಲ್ಲ. ಸಬೂಬು, ನೆಪಗಳನ್ನು ಹೇಳುತ್ತಾ ಕೂರಬೇಡಿ. ಜನರ ಕೆಲಸವನ್ನು ನಿಷ್ಠೆಯಿಂದ ಮಾಡಿ. ಬಾಸ್ ರೀತಿ ನಡೆದುಕೊಳ್ಳುವುದನ್ನು ಬಿಟ್ಟು, ವಿನಯತೆ, ವಿನಮ್ರತೆಯಿಂದ ಜನರ ಕೆಲಸ ಮಾಡಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿಗೆ ಬಡವರು, ರೈತರು, ಶೋಷಿತರು, ದುರ್ಬಲರು ಬರಲು ಅಪ್ಪಣೆ ಕೇಳುವ ಪರಿಸ್ಥಿತಿಯನ್ನು ಜಾರಿ ಮಾಡಬೇಡಿ. ಶ್ರೀಮಂತರ ಕೆಲಸಗಳನ್ನು ಪಕ್ಕಕ್ಕಿಟ್ಟು, ಮೊದಲು ಬಡವರ ಕೆಲಸಗಳನ್ನು ಮಾಡಿ ವಿನಾ ಕಾರಣ ನೆಪಗಳು, ಸಬೂಬುಗಳನ್ನು ಹೇಳುತ್ತಾ ಕೂರಬೇಡಿ ಎಂದು ಅಧಿಕಾರಿಗಳಿಗೆ ಮಾತಿನ ಚಾಟಿ ಬೀಸಿದರು.

ಆಡಳಿತ ನಿಯಂತ್ರಿಸಿ, ಇಲ್ಲದಿದ್ದರೆ ನಾವೇ ನಿಯಂತ್ರಿಸಬೇಕಾಗುತ್ತದೆ: ಸರ್ಕಾರದ ಕಾರ್ಯಕ್ರಮಗಳನ್ನು ಸರಿಯಾಗಿ ಅನುಷ್ಠಾನಗೊಳಿಸಿ. ನಿಮ್ಮ ವಿವೇಚನೆ ಬಳಸಿ ಕೆಲಸ ಮಾಡಿ. ಕೆಳ ಹಂತದ ಅಧಿಕಾರಿಗಳನ್ನು ನಿಯಂತ್ರಿಸಿ ಅವರೇ ನಿಮ್ಮನ್ನು ನಿಯಂತಿಸುವಂತಹ ಪರಿಸ್ಥಿತಿಗಳಿಗೆ ಅವಕಾಶ ಕೊಡಬೇಡಿ ಎಂದು ಮುಖ್ಯಮಂತ್ರಿಗಳು ಸಭೆಯಲ್ಲಿ ಜಿಲ್ಲಾಧಿಕಾರಿಗಳಿಗೆ ಹೇಳಿದರು.
ಜನಪರ ಕೆಲಸ ಮಾಡುವಾಗ ವಿಳಂಬ ಮಾಡುವುದು ಸರಿಯಲ್ಲ.

ಈ ವ್ಯವಸ್ಥೆ ಸರಿಯಲ್ಲ, ಆ ವ್ಯವಸ್ಥೆ ಸರಿ ಇಲ್ಲ ಎಂದು ನೆಪ ಹೇಳುತ್ತಾ ಕಾಲಹರಣ ಮಾಡಬೇಡಿ. ವ್ಯವಸ್ಥೆ ಸರಿ ಇಲ್ಲದಿದ್ದರೆ ಸರ್ಕಾರದ ಗಮನಕ್ಕೆ ತನ್ನಿ ಸರಿ ಮಾಡೋಣ ಸುಮ್ಮನೆ ಕೂತರೆ ಅದರಿಂದ ಪ್ರಯೋಜನವಿಲ್ಲ ಎಂದರು.ಯಾವುದೂ ಶಾಶ್ವತವಲ್ಲ. ಜನರ ಸೇವೆ ಮಾಡಿದರೆ ಅವರು ಆಡುವ ನಾಲ್ಕು ಒಳ್ಳೆಯ ಮಾತುಗಳೇ ಶಾಶ್ವತ. ಇದನ್ನು ಅರ್ಥ ಮಾಡಿಕೊಂಡು ಒಳ್ಳೆಯ ಕೆಲಸ ಮಾಡಿ. ಬಡವರ, ರೈತರ ಕೆಲಸಗಳಿಗೆ ಆದ್ಯತೆ ಕೊಡಿ .

ಸರಿಯಾಗಿ ಕೆಲಸ ಮಾಡಿ ಇಲ್ಲದಿದ್ದರೆ ನಾವಂತೂ ನಿಮ್ಮನ್ನು ಸುಮ್ಮನೆ ಬಿಡಲ್ಲ. ಸರ್ಕಾರಕ್ಕೆ ಒಳ್ಳೆಯ ಹೆಸರು ಬರುವುದು ನಿಮ್ಮ ಒಳ್ಳೆಯ ಕೆಲಸದಿಂದ. ನಿಮ್ಮ ನಿರ್ಲಕ್ಷ್ಯ, ಬೇಜವಾಬ್ದಾರಿಯಿಂದ ಸರ್ಕಾರಕ್ಕೆ ಕೆಟ್ಟ ಹೆಸರು ಬರುವುದನ್ನು ಸಹಿಸುವುದಿಲ್ಲ ಎಂದು ಗುಡುಗಿದರು.

ಬೆಳೆ ಹಾನಿ ಪರಿಹಾರ ವಿಳಂಬಕ್ಕೆ ತರಾಟೆ:

ಮಳೆ ಮತ್ತು ಅತಿವೃಷ್ಠಿಯಿಂದ ಬೆಳೆ ಹಾನಿಯಾಗಿರುವ ರೈತರಿಗೆ ಪರಿಹಾರ ನೀಡುವಲ್ಲಿ ಕೆಲ ಜಿಲ್ಲಾಧಿಕಾರಿಗಳು ವಿಳಂಬ ಮಾಡಿರುವುದಕ್ಕೆ ಅಂತಹ ಜಿಲ್ಲಾಧಿಕಾರಿಗಳನ್ನು ಸಭೆಯಲ್ಲಿ ತರಾಟೆಗೆ ತೆಗೆದುಕೊಂಡ ಮುಖ್ಯಮಂತ್ರಿಗಳು, ಪರಿಹಾರ ಆಪ್‍ನಲ್ಲಿ ಜಂಟಿ ಸರ್ವೆಯ ಮಾಹಿತಿಗಳು ಅಪ್‍ಲೋಡ್ ಆದ 48 ಗಂಟೆಗಳಲ್ಲಿ ಪರಿಹಾರ ನೀಡಬೇಕು.

ತಡ ಮಾಡಿರುವುದು ಏಕೆ ಎಂದು ನೇರವಾಗಿ ಅಧಿಕಾರಿಗಳನ್ನು ಪ್ರಶ್ನಿಸಿ, ಮುಂದೆ ಇಂತಹದ್ದೆಲ್ಲಾ ಆಗದ ಹಾಗೆ ನೋಡಿಕೊಳ್ಳಿ ಮುಂದೆ ಏನು ಮಾಡಬೇಕು ಎಂಬುದು ನಮಗೂ ಗೊತ್ತಿದೆ ಎಂದು ಗರಂ ಆದರು.ಹಿಂದಿನದು ಗೊತ್ತಿಲ್ಲ, ಮುಂz Éಸರಿಯಿರಬೇಕು
ಹಿಂದೆಲ್ಲಾ ಏನೆನಾಗಿದಿಯೋ ನನಗೆ ಗೊತ್ತಿಲ್ಲ. ಮುಂದೆಯಂತೂ ಸರಿಯಾದ ಕೆಲಸ ಕಾರ್ಯಗಳು ಆಗಬೇಕು. ಕಚೇರಿಯಲ್ಲಿ ಕೂರದೆ ಹಳ್ಳಿಗಳಿಗೆ, ತಾಲ್ಲೂಕುಗಳಿಗೆ, ಹೋಬಳಿ ಕೇಂದ್ರಗಳಿಗೆ ಭೇಟಿ ನೀಡಿ ಜನರ ಸಮಸ್ಯೆಗಳನ್ನು ಆಲಿಸಿ ಎಂದು ಮುಖ್ಯಮಂತ್ರಿಗಳು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.

ಮ್ಯಾಜಿಸ್ಟ್ರೇಟ್‍ಗಳಂತೆ ವರ್ತಿಸಬೇಡಿ

ಜಿಲ್ಲಾಧಿಕಾರಿಗಳು ಇರುವುದು ಸಾಮಾನ್ಯ ಜನರ ಕೆಲಸ ಮಾಡಲು. ಇದನ್ನು ಅರ್ಥ ಮಾಡಿಕೊಳ್ಳಿ. ಬಡವರು ಮತ್ತು ರೈತರನು ವೃಥ್ನಾ ಅಲೆದಾಡಿಸಬೇಡಿ. ಮೊದಲು ಬಡವರು ಹಾಗೂ ರೈತರ ಕೆಲಸ ಮಾಡಿಕೊಡಿ ನಂತರ ಶ್ರೀಮಂತರ, ಬಲಾಢ್ಯರ ಕೆಲಸಗಳತ್ತ ಗಮನಹರಿಸಿ.

ಜಿಲ್ಲಾಧಿಕಾರಿಗಳು ಜಿಲ್ಲೆಯ ಮ್ಯಾಜಿಸ್ಟ್ರೇಟರ್ ರೀತಿ ನಡೆದುಕೊಳ್ಳಬೇಡಿ. ಅಧಿಕಾರ ಇರುವುದು ಜನರ ಕೆಲಸ ಮಾಡಲಿಕ್ಕೆ. ದರ್ಪದಿಂದ ನಡೆದುಕೊಳ್ಳುವುದಕ್ಕಲ್ಲ. ಅರ್ಥ ಮಾಡಿಕೊಳಿ

-ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap