ಮುಂಬೈ:
ನನ್ನ ಅವಧಿಯಲ್ಲಿ ಮಹಾರಾಷ್ಟ್ರವು ಅಭಿವೃದ್ಧಿಯ ಮತ್ತು ಬದಲಾವಣೆಯ ರಾಜಕೀಯವನ್ನು ನೋಡಲಿದೆ, ಸೇಡಿನ ರಾಜಕೀಯವನ್ನಲ್ಲ ಎಂದು ದೇವೇಂದ್ರ ಫಡ್ನವಿಸ್ ತಿಳಿಸಿದ್ದಾರೆ. ಮೂರನೇ ಅವಧಿಗೆ ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
“ನಮ್ಮ ಮಹಾಯುತಿ ಸರ್ಕಾರವು ಜನಪರ ಆಡಳಿತವನ್ನು ನೀಡುತ್ತದೆ. ನಾವು ಪಾರದರ್ಶಕತೆಯಿಂದ ಕೆಲಸ ಮಾಡುತ್ತೇವೆ. ರಾಜ್ಯವನ್ನು ಅತ್ಯಂತ ವೇಗವಾಗಿ ಅಭಿವೃದ್ಧಿಯ ಪಥದತ್ತ ಕೊಂಡೊಯ್ಯುತ್ತೇವೆ” ಎಂದು ಫಡ್ನವಿಸ್ ಹೇಳಿದ್ದಾರೆ. “2019ರಿಂದ 2022ರವರೆಗೆ ಸಾಕಷ್ಟು ಬದಲಾವಣೆಗಳನ್ನು ನೋಡಿದ್ದೇವೆ. ಮುಂದಿನ ದಿನಗಳಲ್ಲಿ ಆ ರೀತಿಯ ಆಘಾತಗಳಾಗದಂತೆ ಸರ್ಕಾರ ನಡೆಸುವ ಭರವಸೆಯನ್ನು ನೀಡುತ್ತೇನೆ” ಎಂದಿದ್ದಾರೆ.
2019ರಲ್ಲಿ ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಯುವ ಮೊದಲು ‘ನಾನು ಪುನಃ ಬರುತ್ತೇನೆ’ ಎಂದು ಹೇಳಿದ್ದ ದೇವೇಂದ್ರ ಫಡ್ನವಿಸ್ ಗುರುವಾರ (ಡಿ. 5) 3ನೇ ಬಾರಿಗೆ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಮುಂಬೈನ ಆಜಾದ್ ಮೈದಾನದಲ್ಲಿ ಪ್ರಮಾಣ ವಚನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವರಾದ ಅಮಿತ್ ಶಾ, ಜೆಪಿ ನಡ್ಡಾ ಮತ್ತು ನಿತಿನ್ ಗಡ್ಕರಿ ಉಪಸ್ಥಿತರಿದ್ದರು. ಬಾಲಿವುಡ್ ನಟರಾದ ಸಲ್ಮಾನ್ ಖಾನ್, ಶಾರುಖ್ ಖಾನ್, ರಣವೀರ್ ಸಿಂಗ್, ರಣಬೀರ್ ಕಪೂರ್, ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್, ಕೈಗಾರಿಕೋದ್ಯಮಿಗಳಾದ ಮುಖೇಶ್ ಅಂಬಾನಿ ಮತ್ತು ಗೌತಮ್ ಅದಾನಿ ಕೂಡ ಭಾಗಿಯಾಗಿದ್ದರು.
ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೇ ಮೂಳೆ ಮಜ್ಜೆಯ ಕಸಿಗಾಗಿ ಕಾಯುತ್ತಿರುವ ರೋಗಿಗಳಿಗೆ ತಲಾ 5 ಲಕ್ಷ ರೂಪಾಯಿ ಬಿಡುಗಡೆ ಮಾಡುವ ಪ್ರಸ್ತಾವನೆಯ ಕಡತಕ್ಕೆ ಫಡ್ನವಿಸ್ ಸಹಿ ಹಾಕಿದ್ದಾರೆ. ಪುಣೆ ಮೂಲದ ಚಂದ್ರಕಾಂತ್ ಕುರ್ಹಾಡೆ ಅವರ ಪತ್ನಿ ಪತಿಯ ಚಿಕಿತ್ಸೆಗಾಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ನೆರವು ಕೋರಿದ್ದರು. ಮೊದಲ ಸಂಪುಟ ಸಭೆಯ ಅಧ್ಯಕ್ಷತೆ ವಹಿಸುವ ಮುನ್ನ ಮುಖ್ಯಮಂತ್ರಿ ಕಡತಕ್ಕೆ ಸಹಿ ಹಾಕಿದ್ದಾರೆ.
ದೇವೇಂದ್ರ ಫಡ್ನವಿಸ್ 2014ರ ಅಕ್ಟೋಬರ್ನಿಂದ 2019ರ ತನಕ 5 ವರ್ಷಗಳ ಕಾಲ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದರು. 2019ರ ಚುನಾವಣೆ ಬಳಿಕ 2019ರ ನವೆಂಬರ್ 23ರಿಂದ ನವೆಂಬರ್ 28ರ ತನಕ 2ನೇ ಬಾರಿಗೆ ಮುಖ್ಯಮಂತ್ರಿಯಾಗಿದ್ದರು. ಆದರೆ ಶಿವಸೇನೆ ನಾಯಕ ಉದ್ಧವ್ ಠಾಕ್ರೆ ಕಾಂಗ್ರೆಸ್ ಜೊತೆ ಕೈ ಜೋಡಿಸಿದ ಕಾರಣ ಸರ್ಕಾರ ಪತನಗೊಂಡಿತ್ತು.
ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಮಾಡಲು 145 ಸ್ಥಾನಗಳನ್ನು ಗೆಲ್ಲಬೇಕಿತ್ತು. ಚುನಾವಣೆಯಲ್ಲಿ ‘ಮಹಾಯತಿ’ ಮೈತ್ರಿಕೂಟ 230 ಸ್ಥಾನಗಳನ್ನುಗಳಿಸಿದೆ. ಚುನಾವಣೆಯಲ್ಲಿ 132 ಸೀಟುಗಳನ್ನು ಗೆದ್ದಿರುವ ಬಿಜೆಪಿಗೆ ಮುಖ್ಯಮಂತ್ರಿ ಸ್ಥಾನ ಸಿಕ್ಕಿದೆ. ‘ಮಹಾಯತಿ’ ಮೈತ್ರಿಕೂಟದಲ್ಲಿ ಶಿವಸೇನೆ (ಏಕನಾಥ್ ಶಿಂಧೆ ಬಣ) 57, ಎನ್ಸಿಪಿ (ಅಜಿತ್ ಪವಾರ್ ಬಣ) 41 ಸೀಟುಗಳನ್ನು ಗೆದ್ದಿದ್ದವು.