ಧಾರಾವಾಡದ ರೈತರಿಗೂ ಶುರುವಾಯ್ತು ಕಾಲಂ ನಂ 11 ಭಯ….!

ಧಾರವಾಡ

   ದೇಶಾದ್ಯಂತ ಸದ್ದು ಮಾಡುತ್ತಿರುವ ವಕ್ಫ್ ಕಾಯ್ದೆಯ ಬಿಸಿ ಇದೀಗ ಧಾರವಾಡ ತಾಲೂಕಿನ ಉಪ್ಪಿನಬೆಟಗೇರಿ ಗ್ರಾಮಕ್ಕೂ ತಟ್ಟಿದೆ. ಇಲ್ಲಿನ ಕೆಲ ರೈತರ ಜಮೀನಿನ ಪಹಣಿಯಲ್ಲಿ ಕೆಲವು ವರ್ಷಗಳ ಹಿಂದೆಯೇ ವಕ್ಫ್ ಹೆಸರು ದಾಖಲಾಗಿರುವುದು ಬೆಳಕಿಗೆ ಬಂದಿದೆ. ನೂರಾರು ವರ್ಷಗಳಿಂದ ಪಿತ್ರಾರ್ಜಿತವಾಗಿ ಬಂದಿರುವ ರೈತರ ಹೊಲಗಳ ಪಹಣಿಯ 11ನೇ ಇತರ ಹಕ್ಕುಗಳು ಮತ್ತು ಋಣಗಳು ಕಾಲಂನಲ್ಲಿ ‘ಸದರಿ ಜಮೀನು ವಕ್ಫ್ ಆಸ್ತಿಗೆ ಒಳಪಟ್ಟಿರುತ್ತದೆ’ ಎಂದು ದಾಖಲಾಗಿದೆ. ತಮ್ಮ ಪಿತ್ರಾರ್ಜಿತ ಆಸ್ತಿಯಾದ ಜಮೀನಿನ ಪಹಣಿಯಲ್ಲಿ ‘ವಕ್ಫ್’ ಹೆಸರು ದಾಖಲಾಗಿರುವುದು ಸಂಬಂಧಪಟ್ಟ ರೈತರಿಗೆ ದಿಗಿಲು ಹುಟ್ಟಿಸಿದೆ.

   ಈ ಅವಾಂತರವನ್ನು ಸರಿಪಡಿಸುವ ಕುರಿತು ಈಗಾಗಲೇ ರೈತರು ತಹಶೀಲ್ದಾರ್ ಹಾಗೂ ಧಾರವಾಡ ಜಿಲ್ಲಾ ವಕ್ಫ್ ಅಧಿಕಾರಿಗಳಿಗೆ ಲಿಖಿತವಾಗಿ ದಾಖಲೆ ಸಮೇತ ಅರ್ಜಿ ಸಲ್ಲಿಸಿದ್ದಾರೆ. ಆದರೆ ಅದರಿಂದ ಯಾವುದೇ ಪ್ರಯೋಜನವಾಗಿಲ್ಲ. ತಹಶೀಲ್ದಾರ್ ಕಚೇರಿ ಸಂಪರ್ಕಿಸಿದರೆ ವಕ್ಫ್ ಕಚೇರಿಯಲ್ಲಿ ಕೇಳಿ ಎನ್ನುತ್ತಿದ್ದಾರೆ. ಇನ್ನು ಜಿಲ್ಲಾ ವಕ್ಫ್ ಕಚೇರಿ ಸಂಪರ್ಕಿಸಿದರೆ ತಹಶೀಲ್ದಾರ್ ಕಚೇರಿಯಲ್ಲಿ ವಿಚಾರಿಸಿ ಎನ್ನುತ್ತಿದ್ದಾರೆ. ಅವರನ್ನು ಕೇಳಿದರೆ ಇವರು, ಇವರನ್ನು ಕೇಳಿದರೆ ಅವರು ಎಂದು ತಮ್ಮನ್ನು ಅಲೆದಾಡಿಸುತ್ತಿದ್ದಾರೆ ಎಂಬುದು ರೈತರ ಆರೋಪ. ಪಿತ್ರಾರ್ಜಿತವಾಗಿ ಬಂದಿರುವ ಜಮೀನಿನ ಪಹಣಿಯಲ್ಲಿ ವಕ್ಫ್ ಹೆಸರು ನಮೂದಾದರೆ ಮುಂದೇನು ಮಾಡಬೇಕೆಂದು ತಿಳಿಯದೇ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
   ಇದು ಕೇವಲ ಈ ರೈತರದ್ದಷ್ಟೇ ಸಮಸ್ಯೆಯಲ್ಲ. ಬದಲಿಗೆ ಜಿಲ್ಲೆಯಲ್ಲಿ ಇಂಥ ಅನೇಕ ಪ್ರಕರಣಗಳು ನಡೆದಿದ್ದು, ಬಹುತೇಕ ಪ್ರಕರಣಗಳು ರೈತರ ಗಮನಕ್ಕೆ ಬಂದಿಲ್ಲ ಎನ್ನಲಾಗುತ್ತಿದೆ. ಇದೇ ಕಾರಣಕ್ಕೆ ಆತಂಕಗೊಂಡಿರುವ ರೈತರು ಇದೀಗ ತಮ್ಮ ಪಹಣಿಗಳನ್ನು ಪರಿಶೀಲಿಸಲು ಸಂಬಂಧಿಸಿದ ಕಚೇರಿಗಳತ್ತ ದೌಡಾಯಿಸುತ್ತಿದ್ದಾರೆ. ಒಟ್ಟಿನಲ್ಲಿ ತಮ್ಮದಲ್ಲದ ತಪ್ಪಿಗೆ ರೈತರು ಪರದಾಡುವಂತಾಗಿದೆ. 

ಪಹಣಿಯಲ್ಲಿ ವಕ್ಫ್‌ ಹೆಸರು ಬಂದಿರುವುದನ್ನೇ ಅಸ್ತ್ರ ಮಾಡಿಕೊಂಡಿರುವ ಬಿಜೆಪಿ, ಪರಿಶೀಲನೆಗೆಂದೇ ಒಂದು ತಂಡ ರಚಿಸಿದೆ. ಆ ತಂಡ ಇಂದು ವಿಜಯಪುರಕ್ಕೆ ಆಗಮಿಸಲಿದೆ. ತಂಡದಲ್ಲಿ ಸಂಸದ ರಮೇಶ್‌ ಜಿಗಜಿಣಗಿ ಹಾಗೂ ಶಾಸಕ ಯತ್ನಾಳ್‌ ಹೆಸರಿಲ್ಲ. ಇದರಿಂದ ಕೆರಳಿರುವ ಯತ್ನಾಳ್‌, ಇದು ವಿಜಯೇಂದ್ರ ಟೀಂ ಎಂದು ಟೀಕಿಸಿದ್ದಾರೆ. 

    ಯತ್ನಾಳ್ ಆಕ್ರೋಶದ ಬೆನ್ನಲ್ಲೇ ಪರಿಶೀಲನಾ ತಂಡವನ್ನ ಪುನರ್‌ ರಚಿಸಲಾಗಿದ್ದು, ಗೋವಿಂದ್ ಕಾರಜೋಳ, ಶಾಸಕ ಹರೀಶ್ ಪೂಂಜಾ, ಶಾಸಕ ಮಹೇಶ ಟೆಂಗಿನಕಾಯಿ ಹೆಸರಿನ ಜತೆಗೆ ಜಿಗಜಿಣಗಿ ಹಾಗೂ ಯತ್ನಾಳ್‌ ಹೆಸರು ಸೇರ್ಪಡೆ ಮಾಡಲಾಗಿದೆ. ವಕ್ಫ್‌ ವಿವಾದ ದಿನದಿಂದ ದಿನಕ್ಕೆ ದೊಡ್ಡದಾಗುತ್ತಿದ್ದಂತೆಯೇ ಸರ್ಕಾರ ಎಚ್ಚೆತ್ತುಕೊಂಡಿದೆ. ಕಂದಾಯ ಸಚಿವ ಕೃಷ್ಣೇಭೈರೇಗೌಡ, ಜಮೀರ್‌ ಅಹ್ಮದ್, ಎಂಬಿ ಪಾಟೀಲ್‌ ಸೋಮವಾರ ಸುದ್ದಿಗೋಷ್ಠಿ ನಡೆಸಿದರು. 121 ನೋಟಿಸ್​ಗಳನ್ನು ನೀಡಿರುವುದು ನಿಜ. ಇದನ್ನು ವಾಪಸ್ ಪಡೆಯುತ್ತೇವೆ ಎಂದರು.

 

Recent Articles

spot_img

Related Stories

Share via
Copy link