2023ರ ಚುನಾವಣೆ; ಸಿದ್ದರಾಮಯ್ಯ, ಮಾಧುಸ್ವಾಮಿ ಎದುರಾಳಿಗಳು

   ತುಮಕೂರು:

         ತುಮಕೂರು, ಜನವರಿ 27; ವಿಧಾನಸಭೆಯಲ್ಲಿ ಪರಸ್ಪರ ಏಟು ಎದಿರೇಟು ನೀಡುವ ಸಿದ್ದರಾಮಯ್ಯ ಮತ್ತು ಕಾನೂನು ಸಚಿವ ಜೆ. ಸಿ. ಮಾಧುಸ್ವಾಮಿ 2023ರ ವಿಧಾನಸಭೆ ಚುನಾವಣೆಯಲ್ಲಿ ಎದುರಾಗಳಿಗಳು. ರಾಜ್ಯ ಮತ್ತು ತುಮಕೂರು ರಾಜಕೀಯದಲ್ಲಿ ಸಂಚಲನ ಮೂಡಿಸಿದ ಸುದ್ದಿ ಇದು.

ಬಾದಾಮಿ ಕ್ಷೇತ್ರದ ಹಾಲಿ ಶಾಸಕಸಿದ್ದರಾಮಯ್ಯಮುಂದಿನ ಚುನಾವಣೆಗೆ ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡಲಿದ್ದಾರೆ?.

  ಇದು ರಾಜ್ಯ ರಾಜಕೀಯದಲ್ಲಿನ ಬಹು ಚರ್ಚಿತ ವಿಷಯವಾಗಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಕುರಿತು ಇನ್ನೂ ಗುಟ್ಟುಬಿಟ್ಟುಕೊಟ್ಟಿಲ್ಲ.

ಕಳೆದ ಬಾರಿ ಮೈಸೂರಿನ ಚಾಮುಂಡೇಶ್ವರಿ ಮತ್ತು ಬಾಗಲಕೋಟೆ ಜಿಲ್ಲೆಯ ಬಾದಾಮಿಯಲ್ಲಿ ಕಣಕ್ಕಿಳಿದು. ಬಾದಾಮಿಯಲ್ಲಿ ಕಷ್ಟಪಟ್ಟು ಗೆದ್ದರು ಸಿದ್ದರಾಮಯ್ಯ. ಈ ಬಾರಿ ಸಿದ್ದರಾಮಯ್ಯ ಕ್ಷೇತ್ರ ಬದಲಾಣೆ ಮಾಡುತ್ತಾರೆ ಎಂಬ ಸುದ್ದಿ ಹಬ್ಬಿದೆ. ಆದರೆ ಯಾವ ಕ್ಷೇತ್ರದಿಂದ ಕಣಕ್ಕಿಳಿಯುತ್ತಾರೆ? ಎಂದು ಬಿಜೆಪಿ, ಜೆಡಿಎಸ್ ನಾಯಕರು ಸಹ ಕಾಯುತ್ತಿದ್ದಾರೆ.

ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯಿಂದ ಕಣಕ್ಕಿಳಿಯುವಂತೆ ಸಿದ್ದರಾಮಯ್ಯಗೆ ಆಹ್ವಾನ ಬಂದಿದೆ. ಈ ಕ್ಷೇತ್ರದ ಹಾಲಿ ಶಾಸಕರು ಜೆ. ಸಿ. ಮಾಧುಸ್ವಾಮಿ. ವಿಧಾನಸಭೆಯಲ್ಲಿ ಸಿದ್ದರಾಮಯ್ಯ ವಿರುದ್ಧ ಗುಡುಗುವ ಮಾಧುಸ್ವಾಮಿ, ಸಿದ್ದರಾಮಯ್ಯ ಎದುರಾಳಿಯಾದರೆ ರಾಜ್ಯದ ಚಿತ್ತ ಪೂರ್ತಿ ಅತ್ತ ಹೋಗುವುದರಲ್ಲಿ ಯಾವುದೇ ಸಂಶಯ ಉಳಿದಿಲ್ಲ. ಅಷ್ಟಕ್ಕೂ ಸಿದ್ದರಾಮಯ್ಯಗೆ ಆಹ್ವಾನ ಕೊಟ್ಟವರು ಯಾರು? ಮುಂದಿದೆ ವಿವರಗಳು…

ವೈ. ಸಿ. ಸಿದ್ದರಾಮಯ್ಯ ಪತ್ರ
          ಜಿಲ್ಲಾ ಪಂಚಾಯಿತಿ ಸದಸ್ಯ, ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೈ. ಸಿ. ಸಿದ್ದರಾಮಯ್ಯ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯಗೆ ಚಿಕ್ಕನಾಯಕನಹಳ್ಳಿಯಿಂದ ಕಣಕ್ಕಿಳಿಯುವಂತೆ ಆಹ್ವಾನ ನೀಡಿದ್ದಾರೆ. ಈ ಕುರಿತು ಪತ್ರವನ್ನು ಬರೆದಿದಿದ್ದಾರೆ. ಆದರೆ ಸಿದ್ದರಾಮಯ್ಯ ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ನನ್ನ ಕೋರಿಕೆಯಂತೆ ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸುವುದರಿಂದ ಇಡೀ ತುಮಕೂರು ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷ ನೆಲೆ ಕಳೆದುಕೊಳ್ಳುತ್ತದೆ ಎಂದು ವೈ. ಸಿ. ಸಿದ್ದರಾಮಯ್ಯ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಅಚ್ಚರಿ ಫಲಿತಾಂಶ ನಿರೀಕ್ಷಿಸಬಹುದು

ಸಿದ್ದರಾಮಯ್ಯ ಚಿಕ್ಕನಾಯಕನಹಳ್ಳಿಯಿಂದ ಕಣಕ್ಕಿಳಿದರೆ ತುಮಕೂರು ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳಲ್ಲಿ ಹಾಗೂ ಅಕ್ಕಪಕ್ಕದ ಜಿಲ್ಲೆಗಳಾದ ಹಾಸನ, ಚಿತ್ರದುರ್ಗ, ಮೈಸೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಕೂಡಾ ನಾವು ಅಚ್ಚರಿ ಫಲಿತಾಂಶವನ್ನು ನಿರೀಕ್ಷಿಸಬಹುದಾಗಿದೆ ಎಂದು ವೈ. ಸಿ. ಸಿದ್ದರಾಮಯ್ಯ ಪತ್ರದಲ್ಲಿ ವಿವರಣೆ ನೀಡಿದ್ದಾರೆ.

ಈ ಕ್ಷೇತ್ರವು ನಿಮಗೆ ಅತ್ಯಂತ ಸುರಕ್ಷಿತ ಕ್ಷೇತ್ರವಾಗಿದೆ. ಈ ಕ್ಷೇತ್ರದಲ್ಲಿ ಕುರುಬ, ಯಾದವ, ಮುಸ್ಲಿಂ, ನಾಯಕರ ಮತಗಳು ನಿರ್ಣಾಯಕವಾಗಿದೆ. ಈ ನಿರ್ಣಾಯಕ ಮತಗಳಿಂದ ತಾವು ಪ್ರಚಂಡ ಜಯಭೇರಿ ಪಡೆಯಬಹುದಾಗಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಚರ್ಚೆ ಆರಂಭವಾಗಿದೆ

ಈಗಾಗಲೇ ಕ್ಷೇತ್ರದಲ್ಲಿ ಮತದಾರರು ತಮ್ಮ ಸ್ಪರ್ಧೆಯ ನಿರೀಕ್ಷೆ ಇಟ್ಟುಕೊಂಡು ಚರ್ಚೆ ಪ್ರಾರಂಭ ಮಾಡಿರುತ್ತಾರೆ. ಒಟ್ಟಿನಲ್ಲಿ ತಾವು ಎಲ್ಲಾ ಮೂಲಗಳಿಂದ ಮಾಹಿತಿಯನ್ನು ಕ್ರೋಢಿಕರಿಸಿಕೊಂಡು ಇಲ್ಲಿ ಸ್ಪರ್ಧಿಸುವುದು ಜಿಲ್ಲೆ ಮತ್ತು ರಾಜ್ಯದ ಹಿತದೃಷ್ಟಿಯಿಂದ ಮತ್ತು ಕಾಂಗ್ರೆಸ್ ಪಕ್ಷದ ಭವಿಷ್ಯಕ್ಕೆ ಕೂಡಾ ಕಾರಣವಾಗುತ್ತದೆ ಎಂದು ವೈ. ಸಿ. ಸಿದ್ದರಾಮಯ್ಯ ಪತ್ರದಲ್ಲಿ ವಿವರಣೆ ನೀಡಿದ್ದಾರೆ.

ಬುಧವಾರ ಮುಂದಿನ ಚುನಾವಣೆ ಸ್ಪರ್ಧೆ ಬಗ್ಗೆ ಮಾತನಾಡಿದ್ದ ಸಿದ್ದರಾಮಯ್ಯ, “ಸ್ಪರ್ಧಿಸುವಂತೆ ಕೋಲಾರ, ಕೊಪ್ಪಳ, ಚಾಮರಾಜಪೇಟೆ, ಹೆಬ್ಬಾಳ, ಚಾಮುಂಡೇಶ್ವರಿ, ವರುಣಾ, ಬಾದಾಮಿ ಹೀಗೆ 10 ಕ್ಷೇತ್ರಗಳಿಂದ ಆಹ್ವಾನ ಬರುತ್ತಿದೆ. ಹೈಕಮಾಂಡ್ ಸೂಚಿಸಿದ ಕ್ಷೇತ್ರದಲ್ಲಿ ಸ್ಪರ್ಧಿಸುತ್ತೇನೆ” ಎಂದು ಹೇಳಿದ್ದರು.

2018ರ ಫಲಿತಾಂಶ 

2018ರ ಚುನಾವಣೆಯಲ್ಲಿ ಜೆ. ಸಿ. ಮಾಧುಸ್ವಾಮಿ 69,612 ಮತಗಳನ್ನು ಪಡೆದು ಚಿಕ್ಕನಾಯಕನಹಳ್ಳಿಯಲ್ಲಿ ಗೆಲುವು ಸಾಧಿಸಿದ್ದರು. ಯಡಿಯೂರಪ್ಪ ಸಂಪುಟದಲ್ಲಿಯೂ ಸಚಿವರಾಗಿದ್ದರು. ಈಗ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿಯೂ ಸಚಿವರು.

ಕ್ಷೇತ್ರದಲ್ಲಿ ಜೆಡಿಎಸ್ 2ನೇ ಸ್ಥಾನ ಪಡೆದಿತ್ತು. ಪಕ್ಷದ ಅಭ್ಯರ್ಥಿ ಸಿ. ಬಿ. ಸುರೇಶ್ ಬಾಬು 59,335 ಮತಗಳನ್ನು ಪಡೆದಿದ್ದರು. ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಸಂತೋಷ್ ಜಯಚಂದ್ರ 45,893 ಮತಗಳನ್ನು ಪಡೆದು 3ನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap