ಕಲೆ ರೂಪದಲ್ಲಿ ಕೋಮು ಸಾಮರಸ್ಯ ಅಭಿವ್ಯಕ್ತಿ!

ತುಮಕೂರು:  ತುಮಕೂರಿನ ಚಿಕ್ಕಪೇಟೆಯ ಗಂಗಾಧರೇಶ್ವರ ದೇವಸ್ಥಾನ ಮುಂಭಾಗದ ಗೋಡೆ ಮೇಲೆ ಹಿಂದೂ ದೇವತೆಗಳ ಚಿತ್ರ ಬಿಡಿಸಿ ಬಣ್ಣ ತುಂಬುತ್ತಿದ್ದ ಕಲಾವಿದ ನಯಾಜ್.

ಮುಸ್ಲಿಂ ಕಲಾವಿದನಿಂದ ಕುಂಚದಲ್ಲಿ ಅನಾವರಣಗೊಂಡ ಹಿಂದೂ ದೇವರು

ಒಂದೆಡೆ ಹಿಜಾಬ್ ಗದ್ದಲ, ಮತ್ತೊಂದೆಡೆ ಭಜರಂಗದಳ ಕಾರ್ಯಕರ್ತನ ಹತ್ಯೆಯ ರೋಷಾಗ್ನಿಯ ಪರಿಸ್ಥಿತಿಯಲ್ಲಿ ತುಮಕೂರಿನಲ್ಲಿ ಕೋಮು ಸಾಮರಸ್ಯ ಕಲೆರೂಪದಲ್ಲಿ ಅಭಿವ್ಯಕ್ತಿಗೊಂಡಿದ್ದು ಗಮನಸೆಳೆಯಿತು.

ಚಿಕ್ಕಪೇಟೆಯ ಗಂಗಾಧರೇಶ್ವರ ದೇವಸ್ಥಾನದ ಮುಂಭಾಗದ ಗೋಡೆ ಮೇಲೆ ಶಿವ-ಪಾರ್ವತಿ ಪರಿವಾರ ದೇವರ ಚಿತ್ರಗಳನ್ನು ಬಿಡಿಸುತ್ತಿದ್ದ ಕಲಾವಿದ ನಯಾಜ್ ಅವರು ಕೋಮು ಸಾಮರಸ್ಯದ ಪ್ರತೀಕವಾಗಿ ಗೋಚರಿಸಿದರು.

ಯಾವುದೇ ಧರ್ಮ, ಕೋಮಿನ ಭಾವನೆಯನ್ನು ಮನದಲ್ಲಿ ತಾಳದೆ ಕಾಯಕ ಶ್ರದ್ಧೆಯಿಂದ ಹಿಂದೂ ದೇವರುಗಳಾದ ಶಿವ-ಪಾರ್ವತಿ, ಗಣೇಶ-ಸುಬ್ರಹ್ಮಣ್ಯ ಪರಿವಾರ ಚಿತ್ರಗಳನ್ನು ಕುಂಚದಲ್ಲಿ ಬಿಡಿಸಿ ಬಣ್ಣ ತುಂಬುತ್ತಿದ್ದರು.

ಅನ್ಯಧರ್ಮೀಯರಾದರೂ ಅವರಲ್ಲಿನ ಕಲೆಯನ್ನು ಗುರುತಿಸಿ ದೇವರಚಿತ್ರ ಬಿಡಿಸಲು ಅವಕಾಶ ಮಾಡಿಕೊಟ್ಟ ಶ್ರೀಗಂಗಾಧರೇಶ್ವರ ದೇವಸ್ಥಾನ ಆಡಳಿತ ಮಂಡಳಿ ಹಾಗೂ ಪ್ರಧಾನ ಅರ್ಚಕರ ವಿಶಾಲ ಮನಸ್ಸು ಈ ಸಂದರ್ಭದಲ್ಲಿ ಶ್ಲಾಘನೀಯ.

ಕಲೆಗೆ ಧರ್ಮದ ಹಂಗಿಲ್ಲ:ವರ್ಣಕಲೆ ನಮ್ಮ ತಂದೆಯಿಂದ ಬಳುವಳಿಯಾಗಿ ನನಗೆ ಬಂದಿದೆ ಎಂದ ಅರಕೆರೆಯ ವಾಸಿಯೂ ಆದ ನಯಾಜ್ ಅವರು ದೇವರು ದೇವರೇ. ಕಲೆಗೆ ಧರ್ಮದ ಹಂಗಿಲ್ಲ.

ಹಲವು ವರ್ಷಗಳಿಂದ ಅನೇಕ ದೇವಾಲಯಗಳು, ಗಣಪತಿ ಪೆಂಡಾಲ್, ಗೋಡಿ, ಮಹಾದ್ವಾರಗಳ ಮೇಲೆ ಹಿಂದೂ ದೇವರ ಚಿತ್ರ ಬಿಡಿಸುತ್ತಿದ್ದು, ಇದು ನನ್ನ ಕಲೆ, ಕಾಯಕ ಎರಡೂ ಆಗಿದೆ.

ನಮ್ಮ ಧರ್ಮದ ಕಲಾಕೃತಿಗಳಿಗಿಂತ ಅನ್ಯಧರ್ಮೀಯರ ದೇವರು, ಕಲಾಕೃತಿಗಳನ್ನೇ ಹೆಚ್ಚಾಗಿ ಬಿಡಿಸಿದ್ದೇನೆ. ನಯಾಜ್ ಆರ್ಟ್ಸ್ ಹೆಸರಲ್ಲಿ ಕಳೆದ ನಾಲ್ಕು ದಶಕಗಳಿಂದ ಈ ಕಲಾಕಾಯಕದಲ್ಲಿ ತೊಡಗಿದ್ದು, ನನಗೆ ಆತ್ಮತೃಪ್ತಿ, ಸಂತೋಷ ತಂದುಕೊಟ್ಟಿದೆ ಎಂದು ಪ್ರಜಾಪ್ರಗತಿಗೆ ಪ್ರತಿಕ್ರಿಯಿಸಿದರು.

ಕೋಮು ಸಂಘರ್ಷಕ್ಕೆ ಕಾರಣವಾಗುವವರ ಮಧ್ಯೆ ಕೋಮುಸಾಮರಸ್ಯದ ಬೆಸುಗೆಯಾಗಿ ಕಂಡುಬರುವ ನಯಾಜ್ ಅಂತಹ ಕಲಾವಿದರನ್ನು ಗುರುತಿಸಿ ಗೌರವಿಸುವ ಕಾರ್ಯ ಜಿಲ್ಲೆಯಲ್ಲಿ ಆಗಬೇಕಿದೆ. ನಯಾಜ್ ಅವರ ಸಂಪರ್ಕ ಮೊ.9916122445.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link