ಚಳ್ಳಕೆರೆ:
ರಾಷ್ಟ್ರದ ಜನಮೆಚ್ಚಿದ ಪ್ರಧಾನ ಮಂತ್ರಿ ನರೇಂದ್ರಮೋದಿ ಹಗಲಿರುಳು ಶ್ರಮಿಸಿ ಕೊರೋನಾಕ್ಕೆ ಹೆಚ್ಚು ಜನ ಬಲಿಯಾಗದಂತೆ ದೇಶವನ್ನು ರಕ್ಷಣೆ ಮಾಡಿದರು. ಆದರೆ, ಈ ಬಗ್ಗೆ ಅರಿಯದ ಕಾಂಗ್ರೆಸ್ ಹಾಗೂ ಕೆಲ ವಿರೋಧ ಪಕ್ಷಗಳು ಪ್ರಧಾನಿಯವರನ್ನು ಟೀಕಿಸುವ ಮೂಲಕ ಅಪಹಾಸ್ಯಕ್ಕೆ ಗುರಿಯಾಗುತ್ತಿವೆ ಎಂದು ಸೇವಾ ಯಜ್ಞದಲ್ಲಿ ಸಮರ್ಪಿತ ಜೀವನ ಕಾರ್ಯಕ್ರಮದ ಪ್ರಚಾರ ಕಾರ್ಯ ರಾಜ್ಯ ಸಂಚಾಲಕ, ಧ್ಯೇಯ ಕಮಲ ಸಂಪಾದಕ ಅಜಿತ್‍ಶೆಟ್ಟಿ ತಿಳಿಸಿದರು.
ಅವರು ಇಲ್ಲಿನ óಛೇಂಬರ್ ಆಫ್ ಕಾರ್ಮಸ್ ಸಭಾಂಗಣದಲ್ಲಿ ಬಿಜೆಪಿ ಚಳ್ಳಕೆರೆ ಮಂಡಲ ಹಮ್ಮಿಕೊಂಡಿದ್ದ ಸೇವಾ ಯಜ್ಞದಲ್ಲಿ ಸಮರ್ಪಿತ ಜೀವನ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕರ್ತರ ಸಭೆಗೆ ಚಾಲನೆ ನೀಡಿ ಮಾತನಾಡಿದರು. ರಾಷ್ಟ್ರದಲ್ಲಿ ಇದುವರೆಗೂ 80 ಕೋಟಿ ಜನರಿಗೆ ಕೇಂದ್ರ ಸರ್ಕಾರದ ವತಿಯಿಂದ ಉಚಿತ ಲಸಿಕೆ ನೀಡಲಾಗಿದೆ. ಲಸಿಕೆಯನ್ನು ವಿತರಣೆ ಮಾಡಲು ಸೇನೆಯ ವಿಮಾನವನ್ನು ಬಳಸಿಕೊಳ್ಳಲಾಗಿದೆ.
ಪ್ರಧಾನ ಮಂತ್ರಿ ನರೇಂದ್ರಮೋದಿಯವರ ದೂರದೃಷ್ಠಿ ಫಲವಾಗಿ ಲಕ್ಷಾಂತರ ಜನರು ಸುರಕ್ಷಿತವಾಗಿದ್ದಾರೆ. ಇಂದಿಗೂ ಸಹ ರಾಷ್ಟ್ರದ ಅತಿಹೆಚ್ಚು ಜನರು ವಿಶ್ವಾಸ ಗೌರವವನ್ನು ನರೇಂದ್ರಮೋದಿಯವರ ಮೇಲೆ ಇಟ್ಟಿದ್ದಾರೆಂದರು.
ಜಿಲ್ಲಾಧ್ಯಕ್ಷ ಎ.ಮುರಳಿ ಮಾತನಾಡಿ, ಪ್ರಧಾನ ಮಂತ್ರಿ ನರೇಂದ್ರಮೋದಿ ಯಾವುದೇ ವಿರೋಧ ಪಕ್ಷಗಳ ಆರೋಪಗಳ ಬಗ್ಗೆ ತಲೆಕೆಡಿಸಿಕೊಳ್ಳದೆ ಜನರ ಹಿತಕ್ಕಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ರೈತ ಸರ್ವತೋಮುಖ ಅಭಿವೃದ್ಧಿಗಾಗಿ ರೈತರಿಗೆ ಹೆಚ್ಚು ಲಾಭದಂತುಕೊಡುವ ನಿಟ್ಟಿನಲ್ಲಿ ಮೂರು ಹೊಸ ಕಾಯ್ದೆಗಳನ್ನು ಜಾರಿಗೆ ತಂದಿದ್ದಾರೆ. ಆದರೆ, ಈಬಗ್ಗೆ ರೈತರು ವಿರೋಧ ವ್ಯಕ್ತಪಡಿಸಿದ್ದು, ಇದರಲ್ಲಿ ಕಾಂಗ್ರೆಸ್ ಪಕ್ಷವೂ ಸೇರಿದಂತೆ ವಿವಿಧ ವಿರೋಧ ಪಕ್ಷಗಳ ಪಾತ್ರವಿದೆ. ರಾಷ್ಟ್ರದ ಸರ್ವತೋಮುಖ ಅಭಿವೃದ್ಧಿಗೆ ಪ್ರಧಾನ ಮಂತ್ರಿಯವರು ಕಾರ್ಯನಿರ್ವಹಿಸುತ್ತಿದ್ದು, ವಿರೋಧ ಪಕ್ಷಗಳ ಟೀಕೆಗಳಬಗ್ಗೆ ಸಾರ್ವಜನಿಕರು ಗಂಭೀರವಾಗಿ ಪರಿಗಣಿಸಬಾರದು ಎಂದು ಮನವಿ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಂಡಲಾಧ್ಯಕ್ಷ ಸೂರನಹಳ್ಳಿ ಶ್ರೀನಿವಾಸ್ ಮಾತನಾಡಿ, 2014 ಮತ್ತು 2019ರ ಲೋಕಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಅತಿ ಹೆಚ್ಚು ಸ್ಥಾನ ಗಳಿಸುವ ಮೂಲಕ ಜನರ ಇಚ್ಚೆಯಂತೆ ಆಡಳಿತ ನಡೆಸುತ್ತಿದೆ. ಪ್ರಧಾನ ಮಂತ್ರಿ ನರೇಂದ್ರಮೋದಿಯವರ 7 ವರ್ಷಗಳ ಕಾಲದಲ್ಲಿ ಇಡೀ ದೇಶದಲ್ಲಿ ಯಾವುದೇ ಕೋಮುಗಲಭೆಯಾಗಲಿ, ಉಗ್ರಗಾಮಿ ಚಟುವಟಿಕೆಯಾಗಲಿ ನಡೆದಿಲ್ಲ. ಆದರೂ ಸಹ ಕಾಂಗ್ರೆಸ್ ಪಕ್ಷ ಸುಳ್ಳು ಪ್ರಚಾರ ಮೂಲಕ ಮೋದಿಯರ ಜನಪ್ರಿಯತೆಯನ್ನು ನಿಯಂತ್ರಿಸಲು ಹರಸಾಹಸ ಪಡುತ್ತಿದೆ. ಆದರೆ, ರಾಷ್ಟ್ರದ ಎಲ್ಲಾ ವರ್ಗದ ಜನರ ಅಚ್ಚುಮೆಚ್ಚಿನ ನಾಯಕನಾಗಿ ನರೇಂದ್ರಮೋದಿ ಹೊರಹೊಮ್ಮಿದ್ದಾರೆಂದರು.
ಪ್ರಾಸ್ತಾವಿಕವಾಗಿ ಮಾತನಾಡಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜೆ.ಪಿ.ಜಯಪಾಲಯ್ಯ, ಕಾರ್ಯಕ್ರಮದಲ್ಲಿ ಜಿಲ್ಲಾ ಉಪಾಧ್ಯಕ್ಷ ಬಾಳೆಮಂಡಿರಾಮದಾಸ್, ಜಿಲ್ಲಾ ಕಾರ್ಯದರ್ಶಿ ಎ.ರೇಖಾ, ಮಂಡಲ ಉಸ್ತುವಾರಿ ರಘುನಂದನ್, ಪ್ರವೀಣ್‍ಕುಮಾರ್, ಮಾಜಿ ಮಂಡಲಾಧ್ಯಕ್ಷರಾದ ಬಿ.ವಿ.ಸಿರಿಯಣ್ಣ, ಸೋಮಶೇಖರ್ ಮಂಡಿಮಠ, ಎಂ.ಎಸ್.ಜಯರಾಂ, ಶಶಿಧರಶೆಟ್ಟಿ, ನಗರಸಭಾ ಸದಸ್ಯ ಎಸ್.ಜಯಣ್ಣ, ವೆಂಕಟೇಶ್, ಮಹಿಳಾ ಮೋರ್ಚಾಅಧ್ಯಕ್ಷೆ ಇಂಧುಮತಿ, ಬಡಕ್ಕ, ಜಗದಾಂಭ, ಕಾರ್ಯಾಲಯ ಕಾರ್ಯದರ್ಶಿ ಮೋಹನ್, ದಿನೇಶ್‍ರೆಡ್ಡಿ ಮುಂತಾದವರು ಉಪಸ್ಥಿತರಿದ್ದರು.
ಚಳ್ಳಕೆರೆ ನಗರದ ಛೇಂಬರ್ ಆಫ್ ಕಾರ್ಮಸ್‍ನಲ್ಲಿ ಬಿಜೆಪಿ ಮಂಡಲ ಆಯೋಜಿಸಿದ್ದ ಸೇವಾ ಯಜ್ಞದಲ್ಲಿ ಸಮರ್ಪಿತ ಜೀವನ ಕಾರ್ಯಕ್ರಮದ ಕಾರ್ಯಕರ್ತರ ಸಭೆಗೆ ಪ್ರಚಾರ ಕಾರ್ಯ ರಾಜ್ಯ ಸಂಚಾಲಕ, ಧ್ಯೇಯ ಕಮಲ ಸಂಪಾದಕ ಅಜಿತ್‍ಶೆಟ್ಟಿ ಚಾಲನೆ ನೀಡಿ, ಮಾತನಾಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ