ಚಂಡೀಗಢ:
ಶಂಭು ಮತ್ತು ಖಾನೌರಿ ಗಡಿಗಳಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯಲ್ಲಿ ಭಾಗವಹಿಸಲು ತೆರಳುತ್ತಿದ್ದ ರೈತ ನಾಯಕರ ಗುಂಪನ್ನು ಪಂಜಾಬ್ ಪೊಲೀಸರು ಬಂಧಿಸಿದ್ದಾರೆ. ಬಂಧಿತರಲ್ಲಿ ಸರ್ವಾನ್ ಸಿಂಗ್ ಪಂಧೇರ್ ಮತ್ತು ಜಗಜಿತ್ ಸಿಂಗ್ ದಲ್ಲೆವಾಲ್ ಸೇರಿದ್ದಾರೆ. ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದ ಕೇಂದ್ರ ನಿಯೋಗದೊಂದಿಗಿನ ಸಭೆಯ ನಂತರ ಶಂಭು ಗಡಿ ಪ್ರತಿಭಟನಾ ಸ್ಥಳಕ್ಕೆ ತೆರಳುತ್ತಿದ್ದ ರೈತರನ್ನು ಮೊಹಾಲಿಯಲ್ಲಿ ಬಂಧಿಸಲಾಗಿದೆ. ಪೊಲೀಸರು ಪಂಜಾಬ್-ಹರಿಯಾಣ ಶಂಭು ಮತ್ತು ಖಾನೌರಿ ಗಡಿಗಳಲ್ಲಿ ರೈತರು ನಡೆಸುತ್ತಿದ್ದ ಪ್ರತಿಭಟನೆಯನ್ನು ತಡೆದಿದ್ದಾರೆ. ರೈತರು ನಿರ್ಮಿಸಿದ್ದ ತಾತ್ಕಾಲಿಕ ವಸತಿಯನ್ನು ಕೆಡವಲಾಗಿದೆ.
ರೈತರು ಶಂಭು ಗಡಿಯಲ್ಲಿ ಬಹಳ ಸಮಯದಿಂದ ಪ್ರತಿಭಟನೆ ನಡೆಸುತ್ತಿದ್ದರು. ಇಂದು, ಕರ್ತವ್ಯ ನ್ಯಾಯಾಧೀಶರ ಸಮ್ಮುಖದಲ್ಲಿ, ಸರಿಯಾದ ಎಚ್ಚರಿಕೆ ನೀಡಿದ ನಂತರ ಪೊಲೀಸರು ಪ್ರದೇಶವನ್ನು ತೆರವುಗೊಳಿಸಿದರು” ಎಂದು ಪಟಿಯಾಲದ ಹಿರಿಯ ಪೊಲೀಸ್ ಅಧಿಕಾರಿ ನಾನಕ್ ಸಿಂಗ್ ಹೇಳಿದ್ದಾರೆ. ಹಲವಾರು ರೈತರು ಮನೆಗೆ ತೆರಳಿದ್ದಾರೆ. ಅವರು ನಿರ್ಮಿಸಿದ್ದ ವಸತಿ ಹಾಗೂ ಕೆಲ ತಡೆಗಳನ್ನು ತೆರವು ಮಾಡಲಾಗುತ್ತಿದೆ. ರಸ್ತೆಯನ್ನು ತೆರವುಗೊಳಿಸಿ ಸಂಚಾರಕ್ಕೆ ಮುಕ್ತಗೊಳಿಸಲಾಗುತ್ತದೆ. ಹರಿಯಾಣ ಪೊಲೀಸರು ಸಹ ತಮ್ಮ ಕಾರ್ಯಾಚರಣೆಯನ್ನು ಪ್ರಾರಂಭಿಸುತ್ತಾರೆ. ಯಾವುದೇ ಪ್ರತಿರೋಧವಿಲ್ಲದ ಕಾರಣ ನಾವು ಯಾವುದೇ ಬಲಪ್ರಯೋಗ ಮಾಡುವ ಅಗತ್ಯವಿರಲಿಲ್ಲ. ರೈತರು ಚೆನ್ನಾಗಿ ಸಹಕರಿಸಿದರು ಎಂದು ನಾನಕ್ ಸಿಂಗ್ ತಿಳಿಸಿದ್ದಾರೆ.
ಶಂಭು ಮತ್ತು ಖಾನೌರಿ ಗಡಿಗಳನ್ನು ತೆರೆಯಲು ಬಯಸಿದ್ದರಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪಂಜಾಬ್ ಸಚಿವ ಹರ್ಪಾಲ್ ಸಿಂಗ್ ಚೀಮಾ ಹೇಳಿದ್ದಾರೆ. “ನಾವು ಶಂಭು ಮತ್ತು ಖಾನೌರಿ ಗಡಿಗಳನ್ನು ತೆರೆಯಲು ಬಯಸುತ್ತೇವೆ. ರೈತರ ಬೇಡಿಕೆಗಳು ಕೇಂದ್ರ ಸರ್ಕಾರದ ವಿರುದ್ಧವಾಗಿದ್ದು, ಅವರು ದೆಹಲಿ ಅಥವಾ ಬೇರೆಡೆ ಪ್ರತಿಭಟನೆ ನಡೆಸಬೇಕು ಆದರೆ ಪಂಜಾಬ್‌ನ ರಸ್ತೆಗಳನ್ನು ನಿರ್ಬಂಧಿಸಬಾರದು” ಎಂದು ಹರ್ಪಾಲ್ ಚೀಮಾ ಹೇಳಿದರು.
ಗಡಿ ತೆರವಿನ ಬಳಿಕ ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್ ಸಂಸದ ಚರಣ್‌ಜಿತ್ ಸಿಂಗ್ ಚನ್ನಿ ಇದು ಕೃಷಿ ಕ್ಷೇತ್ರದ ಮೇಲೆ ನಡೆಸುತ್ತಿರುವ ದಾಳಿ ಎಂದು ಕರೆದಿದ್ದಾರೆ. ಶಿರೋಮಣಿ ಅಕಾಲಿ ದಳದ ನಾಯಕ ದಲ್ಜಿತ್ ಸಿಂಗ್ ಚೀಮಾ ಕೂಡ ಇದನ್ನು ಬಲವಾಗಿ ಖಂಡಿಸಿದ್ದಾರೆ. ಇದು ರೈತರಿಗೆ ಮಾಡುತ್ತಿರುವ ಅನ್ಯಾಯ, ಪ್ರಜಾಪ್ರಭುತ್ವ ವಿರೋಧಿ ಮತ್ತು ತರ್ಕಬದ್ಧವಲ್ಲದ ಕ್ರಮ ಎಂದು ಕರೆದಿದ್ದಾರೆ.
