ಬೆಂಗಳೂರು
ಏತ ನೀರಾವರಿ ಮೂಲಕ ತುಂಬಿಸುವ ಕೆರೆಗಳಲ್ಲಿ ಮೀನು ಸಾಕಾಣಿಕೆಯನ್ನು ಆರಂಭಿಸಲು ಗಂಭೀರ ಚಿಂತನೆ ನಡೆಸಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿಧಾನಸಭೆಯಲ್ಲಿಂದು ತಿಳಿಸಿದ್ದಾರೆ.
ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿಯ ಸುರೇಶ್ ಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಉಪಮುಖ್ಯಮಂತ್ರಿ, ಏತ ನೀರಾವರಿ ಯೋಜನೆಗಳಿಂದ ಇಂಧನ ಇಲಾಖೆಗೆ ಸುಮಾರು 4 ಸಾವಿರ ಕೋಟಿ ರೂಪಾಯಿ ವಿದ್ಯುತ್ ಬಿಲ್ ಬಾಕಿ ಇದೆ. ಕೆರೆಗಳನ್ನು ತುಂಬಿಸಲು ವಿದ್ಯುತ್ ಆಧಾರಿತ ಮೋಟಾರ್ ಗಳನ್ನು ಬಳಸಲಾಗುತ್ತಿದೆ.
ಆದರೆ ಇದರಿಂದ ಸರ್ಕಾರಕ್ಕೆ ಯಾವುದೇ ಆದಾಯವೂ ಬರುವುದಿಲ್ಲ. ಮತ್ತು ವಿದ್ಯುತ್ ಬಿಲ್ ಪಾವತಿ ಮಾಡಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಕೆರೆಗಳನ್ನು ತುಂಬಿಸಿ ಅಲ್ಲಿ ಮೀನು ಸಾಕಾಣಿಕೆ ವ್ಯವಸ್ಥೆಯನ್ನು ಮಾಡಿ ಮೀನುಗಳನ್ನು ಹರಾಜು ಹಾಕುವ ಮೂಲಕ ಅದರಿಂದ ಬರುವ ಆದಾಯದಲ್ಲಿ ವಿದ್ಯುತ್ ಬಿಲ್ ಪಾವತಿ ಸೇರಿದಂತೆ ಇನ್ನಿತರೆ ಖರ್ಚು-ವೆಚ್ಚಗಳನ್ನು ಭರಿಸಬಹುದಾಗಿದೆ.
ಇದಕ್ಕೆ ಸಂಬಧಿಸಿದ ಸಚಿವರೊಂದಿಗೆ ಚರ್ಚಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದರು. ಇದಕ್ಕೆ ಪೂರಕವಾಗಿ ಉತ್ತರಿಸಿದ ಇಂಧನ ಸಚಿವ ಕೆ.ಜೆ. ಜಾರ್ಜ್, ಏತ ನೀರಾವರಿ ಸೇರಿದಂತೆ ವಿವಿಧ ಸಣ್ಣ ನೀರಾವರಿ ಯೋಜನೆಗಳು ಇರುವ ಸನಿಹದಲ್ಲಿ 15ರಿಂದ 20 ಮೆಗಾವ್ಯಾಟ್ ಸೋಲಾರ್ ವಿದ್ಯುತ್ ಉತ್ಪಾದನಾ ಘಟಕಗಳನ್ನು ಆರಂಭಿಸುವ ಉದ್ದೇಶವಿದೆ.
ಇದರಿಂದ ಸಾಂಪ್ರದಾಯಿಕ ವಿದ್ಯುತ್ ಬಳಕೆ ಪ್ರಮಾಣ ಮತ್ತು ವೆಚ್ಚ ಪ್ರಮಾಣವು ಕಡಿಮೆಯಾಗಲಿದೆ ಎಂದರು. ಸದಸ್ಯ ಬಿ.ಆರ್. ಪಾಟೀಲ್ ಅವರ ಪ್ರಶ್ನೆಗೆ ಉತ್ತರಿಸಿದ ಡಿ.ಕೆ. ಶಿವಕುಮಾರ್, ಏತ ನೀರಾವರಿ ಯೋಜನೆಗಳಲ್ಲಿ ಲೋಪವೆಸಗಿರುವುದು ಕಂಡುಬAದಲ್ಲಿ ಅಂತಹ ಗುತ್ತಿಗೆದಾರರನ್ನು ಕಪುö್ಪಪಟ್ಟಿಗೆ ಸೇರಿಸಲಾಗುವುದು ಎಂದು ತಿಳಿಸಿದರು.