ತುಮಕೂರು:
ಪಾಸ್‌ಪೋರ್ಟ್ ಅವಧಿ ಮುಗಿದಿರುವ ವಿದೇಶಿ ನಿರಾಶ್ರಿತರಿಗೆ ಆಶ್ರಯ ನೀಡಿರುವ ದಿಬ್ಬೂರಿನ ಕೇಂದ್ರದಲ್ಲಿ ಕೆಲವು ವಿದೇಶಿ ಪ್ರಜೆಗಳು ಪುಂಡಾಟ ನಡೆಸಿದ್ದು, ಪಿಎಸ್ಐ ಸೇರಿ ನಾಲ್ವರ ಮೇಲೆ ಹಲ್ಲೆ ನಡೆಸಿರುವ ಘಟನೆ ಶುಕ್ರವಾರ ನಡೆದಿದೆ.
ವಿದೇಶಿಗರ ನಿರಾಶ್ರಿತರ ಕೇಂದ್ರದಲ್ಲಿ ಉಗಾಂಡ, ಬಾಂಗ್ಲಾದೇಶ, ನೈಜೀರಿಯ ಸೇರಿ 5 ದೇಶದ 27 ಪ್ರಜೆಗಳಿದ್ದಾರೆ. ಕೇಂದ್ರದಲ್ಲಿ ವಿದೇಶಿ ಮಹಿಳೆಯರು ಸ್ಟೌವ್ ಬಳಸಿಕೊಂಡು ಅಡುಗೆ ಮಾಡಿಕೊಳ್ಳುತ್ತಿದ್ದರು. ಇದು ಅಪಾಯಕಾರಿಯಾದ ಹಿನ್ನೆಲೆಯಲ್ಲಿ ಸ್ಥಳಕ್ಕೆ ತೆರಳಿದ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಇದಕ್ಕೆ ನಿರಾಕರಿಸಿದ್ದರು. ಈ ವೇಳೆ ಪಿಎಸ್ಐ ಸೇರಿ ನಾಲ್ವರ ಮೇಲೆ ದಾಳಿ ನಡೆಸಿದ್ದಾರೆಂದು ಎಸ್’ಪಿ ರಾಹುಲ್ ಕುಮಾರ್ ಶಹಪುರ್ವಾಡ್ ಅವರು ಹೇಳಿದ್ದಾರೆ.
ಘಟನೆಯಲ್ಲಿ ಪಿಎಸ್‌ಐ ಚಂದ್ರಕಲಾ, ಮಹಿಳಾ ಕಾನ್ಸ್‌ಟೇಬಲ್ ತಾಸೀನಾ ಬಾನು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.ಘಟನೆ ಬಳಿಕ ಎಸ್’ಪಿ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಈ ವೇಳೆ ಹಲ್ಲೆ ನಡೆಸಿದ ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದು, ಜೈಲಿಗಟ್ಟಿದ್ದಾರೆ. ಅಲ್ಲದೆ, ಮುಂಜಾಗ್ರತಾ ಕ್ರಮವಾಗಿ ಸ್ಥಳದಲ್ಲಿ ಹೆಚ್ಚಿನ ಸಿಬ್ಬಂದಿಗಳನ್ನೂ ನಿಯೋಜಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
