ಒಡಿಶಾ
ನೇಪಾಳದ ಎಂಜಿನಿಯರಿಂಗ್ ವಿದ್ಯಾರ್ಥಿನಿಯ ಅಸಹಜ ಸಾವು ಮತ್ತು ನೆರೆಯ ದೇಶದ ವಿದ್ಯಾರ್ಥಿಗಳ ಮೇಲೆ ದಾಳಿ ನಡೆದ ಕೆಲವು ದಿನಗಳ ಬಳಿಕ ಕಳಿಂಗ ಇನ್ಸ್ಟಿಟ್ಯೂಟ್ ಆಫ್ ಇಂಡಸ್ಟ್ರಿಯಲ್ ಟೆಕ್ನಾಲಜಿ ಸಂಸ್ಥಾಪಕ ಅಚ್ಯುತ್ ಸಮಂತ ನೇಪಾಳದ ವಿದ್ಯಾರ್ಥಿಗಳ ಪೋಷಕರಲ್ಲಿ ಕ್ಷಮೆ ಯಾಚಿಸಿದ್ದಾರೆ. ಹಾಗೆಯೇ ಕ್ಯಾಂಪಸ್ಗೆ ಹಿಂದಿರುಗುವಂತೆ ಮನವಿ ಮಾಡಿದ್ದಾರೆ.
ಈ ಘಟನೆಯ ಕುರಿತು ತನಿಖೆ ನಡೆಸುತ್ತಿರುವ ಒಡಿಶಾ ಸರ್ಕಾರದ ಉನ್ನತ ಮಟ್ಟದ ಸಮಿತಿಯು ಶುಕ್ರವಾರ ತನ್ನ ಮುಂದೆ ಹಾಜರಾಗುವಂತೆ ಅಚ್ಯುತ್ ಸಮಂತ ಅವರಿಗೆ ಸಮನ್ಸ್ ನೀಡಿದ ಗಂಟೆಗಳ ನಂತರ, ಘಟನೆಯ ಕುರಿತು ಸಮಂತ ಅವರ ಮೊದಲ ಸಾರ್ವಜನಿಕ ಹೇಳಿಕೆಯ ವೀಡಿಯೊವನ್ನು ಪೋಸ್ಟ್ ಮಾಡಲಾಗಿದೆ.
ಫೆಬ್ರವರಿ 16 ರಂದು ರಾತ್ರಿ ನಡೆದ ದುರದೃಷ್ಟಕರ ಘಟನೆಯ ಬಗ್ಗೆ ನಾವೆಲ್ಲರೂ ತುಂಬಾ ವಿಷಾದಿಸುತ್ತೇವೆ ಮತ್ತು ದುಃಖಿತರಾಗಿದ್ದೇವೆ. ನನಗೂ ವೈಯಕ್ತಿಕವಾಗಿ ದುಃಖವಾಗಿದೆ. ನಾವು ಕೆಲವು ಜನರ ವಿರುದ್ಧ ಕ್ರಮ ಕೈಗೊಂಡಿದ್ದೇವೆ ಎಂದರು. ವಿದ್ಯಾರ್ಥಿನಿ ಆತ್ಮಹತ್ಯೆ ನಂತರ ನ್ಯಾಯಕ್ಕಾಗಿ ಆಗ್ರಹಿಸಿ 500ಕ್ಕೂ ಹೆಚ್ಚು ನೇಪಾಳಿ ವಿದ್ಯಾರ್ಥಿಗಳು KIIT ಆಡಳಿತ ಮಂಡಳಿ ವಿರುದ್ಧ ಪ್ರತಿಭಟನೆ ನಡೆಸಿದ್ದರು.
ಇದರಿಂದ ಕುಪಿತಗೊಂಡ KIIT ಆಡಳಿತ ಮಂಡಳಿ, ಪ್ರತಿಭಟನೆ ನಡೆಸಲು ಮುಂದಾದ ನೇಪಾಳಿ ವಿದ್ಯಾರ್ಥಿಗಳನ್ನು ಕ್ಯಾಂಪಸ್ ಖಾಲಿ ಮಾಡಿಸಿ ಹೊರಹಾಕಿದ್ದಾರೆ. ಇದರಿಂದ ವಿದ್ಯಾರ್ಥಿಗಳು ಆತಂಕಗೊಂಡಿದ್ದಾರೆ. ನೇಪಾಳಿ ವಿದ್ಯಾರ್ಥಿಗಳ ಮೇಲೆ ಆಡಳಿತ ಮಂಡಳಿ ದೌರ್ಜನ್ಯ ಎಸಗುತ್ತಿದೆ ಎಂದು ಮೃತ ವಿದ್ಯಾರ್ಥಿನಿಯ ತಂದೆ ಗಂಭೀರ ಆರೋಪ ಮಾಡಿದ್ದಾರೆ. ಈ ಖಾಸಗಿ ಎಂಜಿನಿಯರಿಂಗ್ ಸಂಸ್ಥೆ ನೇಪಾಳದ ವಿದ್ಯಾರ್ಥಿಗಳೊಂದಿಗೆ ಕೆಟ್ಟದಾಗಿ ನಡೆಸಿಕೊಂಡಿದೆ ಎಂದು ಮೃತಳ ಸಂಬಂಧಿ ದೂರಿದ್ದಾರೆ.
ಮೃತರ ತಂದೆ ಸುನಿಲ್ ಲಾಮ್ಸಲ್ ಮಂಗಳವಾರ ಬೆಳಿಗ್ಗೆ ಭುವನೇಶ್ವರ ತಲುಪಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ನಾನು ನನ್ನ ಮಗಳನ್ನು ಕಳೆದುಕೊಂಡಿದ್ದೇನೆ. ಇನ್ನೂ ಅನೇಕ ಮಕ್ಕಳು ಇಲ್ಲಿ ಓದುತ್ತಿದ್ದಾರೆ. ಕೆಲವು ವಿದ್ಯಾರ್ಥಿಗಳನ್ನು ಹಾಸ್ಟೆಲ್ನಿಂದ ಹೊರಹಾಕಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಇದು ಸರಿಯಲ್ಲ. ಇಂತಹ ಘಟನೆ ಮತ್ತೆ ಸಂಭವಿಸಬಾರದು. ಆಡಳಿತ ಮಂಡಳಿ ನೇಪಾಳಕ್ಕೆ ಬಂದು ವಿದ್ಯಾರ್ಥಿಗಳನ್ನು ಇಲ್ಲಿ ಅಧ್ಯಯನ ಮಾಡಲು ಕರೆಯುತ್ತಾರೆ. ಸಂಸ್ಥೆಯು ಅವರನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತದೆ. ಕೆಐಐಟಿ ಆಡಳಿತದಿಂದ ಯಾವುದೇ ಪ್ರತಿಕ್ರಿಯೆ ಸಿಗಲಿಲ್ಲ ಎಂದು ಹೇಳಿದರು.
ನೇಪಾಳಿ ವಿದ್ಯಾರ್ಥಿಗಳನ್ನು ಹಾಸ್ಟೆಲ್ ನಿಂದ ಹೊರಹಾಕಿರುವುದಕ್ಕೆ ಭಾರತದಲ್ಲಿನ ನೇಪಾಳಿ ರಾಯಭಾರ ಕಚೇರಿ ಅಧಿಕಾರಿಗಳೊಂದಿಗೆ ಸಭೆ ನಡೆಸಿರುವ ನೇಪಾಳ ಪ್ರಧಾನಿ ಕೆ.ಪಿ. ಶರ್ಮಾ ಓಲಿ ಅವರು, KIITಯಲ್ಲಿ ನಡೆದ ದುರಾದೃಷ್ಟಕರ ಘಟನೆ ಮಾಧ್ಯಮಗಳ ಮೂಲಕ ಗಮನಕ್ಕೆ ಬಂದಿದ್ದು, ನಮ್ಮ ರಾಯಭಾರ ಕಚೇರಿಯ ಇಬ್ಬರು ಅಧಿಕಾರಿಗಳನ್ನು ಭುವನೇಶ್ವರಕ್ಕೆ ಕಳುಹಿಸಿ ಕೊಡಲಾಗಿದೆ ಎಂದಿದ್ದಾರೆ.
