ಬೆಂಗಳೂರು,
ಇತ್ತೀಚಿಗೆ ಬಿಎಂಟಿಸಿ ಬಸ್ ಚಾಲಕ ಮತ್ತು ನಿರ್ವಾಹಕರ ಮೇಲೆ ನಿರಂತರವಾಗಿ ಹಲ್ಲೆ ಆಗಿದ್ದವು. ಇದಕ್ಕೆ ಪ್ರಮುಖ ಕಾರಣ ಚಾಲಕರಿಗೆ ನೀಡಿದ್ದ ಟೈಮ್ ಬಾಂಡ್ ಎಂದು ತಿಳಿದು ಬಂದಿದೆ. ಇದೀಗ, ಬಿಎಂಟಿಸಿ ಅಧಿಕಾರಿಗಳು ಪ್ರತಿ ಮಾರ್ಗದಲ್ಲೂ ಬಸ್ ಸಂಚಾರದ ಸಮಯ ಹೆಚ್ಚಳ ಮಾಡುವ ಮೂಲಕ ಚಾಲಕರ ಟೆನ್ಷನ್ ಕಡಿಮೆ ಮಾಡಿದ್ದಾರೆ.
ಬಿಎಂಟಿಸಿ ಬಸ್ ಸಂಚಾರ ಸಮಯವನ್ನು ಅಧಿಕಾರಿಗಳು ಏರಿಕೆ ಮಾಡಿದ್ದಾರೆ. ಇದರಿಂದ, ಕಡಿಮೆ ಸಮಯದಲ್ಲಿ ವೇಗವಾಗಿ ತೆರಳಲಿ ನಿಗದಿತ ನಿಲ್ದಾಣ ತಲುಪಬೇಕೆಂಬ ಟೆನ್ಷನ್ನಿಂದ ಚಾಲಕರು ನಿರಾಳರಾಗಿದ್ದಾರೆ. ಬಿಎಂಟಿಸಿ ಬಸ್ಗಳು ಸಂಚಾರ ಮಾಡುವ 1800 ಮಾರ್ಗಳಲ್ಲೂ ಟೈಮ್ ಲಿಮಿಟ್ ಕಡಿಮೆ ಮಾಡಲಾಗಿದೆ.
ಈ ಹಿಂದೆ ಮೆಜೆಸ್ಟಿಕ್ ನಿಲ್ದಾಣದಿಂದ ಉತ್ತರಹಳ್ಳಿಗೆ ಸಂಚಾರ ಮಾಡಲು 55 ನಿಮಿಷಗಳ ಕಾಲಾವಕಾಶ ನೀಡಲಾಗಿತ್ತು. ಇನ್ಮುಂದೆ ಈ ಸಮಯವನ್ನು 01 ಗಂಟೆ 15 ನಿಮಿಷ ಏರಿಸಲಾಗಿದೆ. ಈ ಮಾರ್ಗದಲ್ಲಿ 20 ನಿಮಿಷಗಳ ಕಾಲ ಹೆಚ್ಚಿನ ಸಮಯ ನೀಡಲಾಗಿದೆ ಎಂದು ಬಿಎಂಟಿಸಿ ಚೀಫ್ ಟ್ರಾಫಿಕ್ ಮ್ಯಾನೇಜರ್ ಪ್ರಭಾಕರ್ ರೆಡ್ಡಿ ತಿಳಿಸಿದರು.
ಪ್ರತಿಯೊಂದು ಮರ್ಗಾದಲ್ಲೂ 15 ರಿಂದ 20 ನಿಮಿಷಗಳ ಕಾಲ ಹೆಚ್ಚಿನ ಸಮಯ ನೀಡಲಾಗುತ್ತದೆ. ಇದರಿಂದ ನಗರದಲ್ಲಿ ಆಗುತ್ತಿರುವ ಚಾಲಕ, ನಿರ್ವಾಹಕರ ಮೇಲಿನ ಹಲ್ಲೆ ಮತ್ತು ಅಪಘಾತಗಳು ಕಡಿಮೆ ಆಗಲಿವೆ. ಈ ಹಿಂದೆ ನಡೆದಿರುವ ಸಾಕಷ್ಟು ಹಲ್ಲೆ ಮತ್ತು ಅಪಘಾತಗಳಲ್ಲಿ ಬಿಎಂಟಿಸಿಯ ಚಾಲಕರು ಟೈಮ್ ಕವರ್ ಮಾಡಲು, ವೇಗವಾಗಿ ಬಸ್ ಚಲಾಯಿಸುತ್ತಿದ್ದರು. ಇದರಿಂದ ಅಪಘಾತಗಳು ಸಂಭವಿಸುತ್ತಿದ್ದವು.ಬಿಎಂಟಿಸಿಯ 58 ಸಾವಿರ ಟ್ರಿಪ್ಗಳಲ್ಲೂ ಟೈಮ್ ಲಿಮಿಟ್ ಹೆಚ್ಚು ಮಾಡಲು ಬಿಎಂಟಿಸಿ ಮುಂದಾಗಿದೆ. ಈ ವಿಚಾರ ತಿಳಿದು ಪ್ರಯಾಣಿಕರು ಸಂತಸ ವ್ಯಕ್ತಪಡಿಸಿದ್ದಾರೆ.
ಒಟ್ಟಿನಲ್ಲಿ ಬಿಎಂಟಿಸಿಯ ಚಾಲಕ ಮತ್ತು ನಿರ್ವಾಹಕರಿಗೆ ಇಂತಿಷ್ಟು ಸಮಯದಲ್ಲಿ ಈ ರೂಟ್ ಕ್ಲಿಯರ್ ಮಾಡಬೇಕು ಅನ್ನೋ ಅಧಿಕಾರಿಗಳ ರೂಲ್ಸ್ನಿಂದ ಬಿಎಂಟಿಸಿ ಬಸ್ಸುಗಳು ವೇಗವಾಗಿ ಸಂಚಾರ ಮಾಡುತ್ತಿದ್ದವು. ಆದರೆ ಈ ಟೈಮ್ ಲಿಮಿಟ್ ಹೆಚ್ಚಳದಿಂದ ಹಲ್ಲೆ ಮತ್ತು ಅಪಘಾತ ಕಡಿಮೆ ಆಗುತ್ತಾ ಎಂದು ಕಾದು ನೋಡಬೇಕಿದೆ.