ಬೆಂಗಳೂರು:
ಸಿಎಂ ಬೊಮ್ಮಾಯಿ ಬಜೆಟ್ ನಲ್ಲಿ ಇಂದಿರಾ ಕ್ಯಾಂಟೀನ್ ಗಳಿಗೆ ಹಣ ಮೀಸಲಿಡದೆ,ಬಡವರ ಪಾಲಿನ ಆಶಾ ಕಿರಣ ಎಂದೇ ಹೇಳಲಾಗಿದ್ದ ಇಂದಿರಾ ಕ್ಯಾಂಟೀನ್ ಗಳನ್ನು ಬಂದ್ ಮಾಡಲು ಸರ್ಕಾರ ಮುಂದಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ ಅವರು ಮಾತನಾಡಿ, ಬೆಂಗಳೂರಿನಲ್ಲಿ ಇಂದಿರಾ ಕ್ಯಾಂಟೀನ್ ನಡೆಸಲು ಬಿಜೆಪಿ ಸರ್ಕಾರ ಕಳೆದ ಮೂರು ವರ್ಷಗಳಿಂದ ಉದ್ದೇಶಪೂರ್ವಕವಾಗಿಯೇ ಬಜೆಟ್‌ನಲ್ಲಿ ಹಣ ಮೀಸಲಿಡುತ್ತಿಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ವಲಸೆ ಕಾರ್ಮಿಕರು, ಗ್ರೂಪ್ ಡಿ ನೌಕರರು ಮತ್ತು ಬಡವರಿಗೆ ಸಾರ್ವಜನಿಕ ಕ್ಯಾಂಟೀನ್‌ನಲ್ಲಿ ಮೂರು ಹೊತ್ತಿನ ಊಟ ನೀಡಲು ವರ್ಷಕ್ಕೆ 100 ಕೋಟಿ ವಿನಿಯೋಗಿಸಲಾಗುವುದು ಎಂದು ಹೇಳಿದರು.
ಬಿಬಿಎಂಪಿಯ ಮಾಜಿ ವಿರೋಧ ಪಕ್ಷದ ನಾಯಕ ಎನ್ ಶಿವರಾಜ್ ಮಾತನಾಡಿ, ಯಾವುದೇ ಮೊಬೈಲ್ ಕ್ಯಾಂಟೀನ್‌ಗಳಿಲ್ಲ, ಶೀಘ್ರದಲ್ಲೇ ಇಂದಿರಾ ಕ್ಯಾಂಟೀನ್’ನ್ನು ಸರ್ಕಾರ ಬಂದ್ ಮಾಡಲಿದೆ.ಆರ್‌ಆರ್‌ನಗರದಲ್ಲಿ ಮೊಬೈಲ್ ಕ್ಯಾಂಟೀನ್‌ಗಳಷ್ಟೇ ಅಲ್ಲ, ಸಾಮಾನ್ಯ ಕ್ಯಾಂಟೀನ್‌ಗಳನ್ನೂ ಮುಚ್ಚಲಾಗಿದೆ ಎಂದು ತಿಳಿಸಿದ್ದಾರೆ.
ಬಿಬಿಎಂಪಿ ನೀಡಿರುವ ಮಾಹಿತಿಗಳ ಪ್ರಕಾರ, ಒಟ್ಟಾರೆಯಾಗಿ ನಗರದಲ್ಲಿ 174 ಇಂದಿರಾ ಕ್ಯಾಂಟೀನ್ ಗಳಿದ್ದು , 15 ಮೊಬೈಲ್ ಕ್ಯಾಂಟೀನ್‌ಗಳಿದ್ದವು. ಆದರೆ, ಇದೀಗ ಮೊಬೈಲ್ ಕ್ಯಾಂಟೀನ್‌ಗಳನ್ನು ಬಂದ್ ಮಾಡಲಾಗಿದೆ ಎಂದು ತಿಳಿಸಿದೆ.
ಬಡವರು ಮತ್ತು ದೀನ ದಲಿತರಿಗೆ ಆಹಾರ ನೀಡಲು ಸರ್ಕಾರ ಯಾವುದೇ ರೀತಿಯ ಹಣವನ್ನು ಮೀಸಲಿಡುತ್ತಿಲ್ಲ. ಇದೀಗ ಸರ್ಕಾರಕ್ಕೆ ಜನರು ಹಿಡಿಶಾಪ ಹಾಕುತ್ತಿದ್ದಾರೆ. ನಾವು ಅಧಿಕಾರಕ್ಕೆ ಬಂದ ಕೂಡಲೇ ಸಾರ್ವಜನಿಕ ಕ್ಯಾಂಟೀನ್‌ಗಳನ್ನು ಬಡವರಿಗೆ ಸಮರ್ಪಿಸಲು ವಾರ್ಷಿಕ 100 ಕೋಟಿ ರೂ ಮೀಸಲಿಡುತ್ತೇವೆ. ಕೋವಿಡ್ ಸಮಯದಲ್ಲಿ ಇಂದಿರಾ ಕ್ಯಾಂಟೀನ್ ಮೂಲಕ ಸುಮಾರು ಎರಡು ಲಕ್ಷ ಬಡವರಿಗೆ ನೀಡಲಾಗಿತ್ತು ಎಂಬುದನ್ನು ಸ್ಮರಿಸಬೇಕಿದೆ ಎಂದು ರಾಮಲಿಂಗಾ ರೆಡ್ಡಿ ಅವರು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
