ನಡುಬೀದಿಯಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ: ಖಾಸಗಿ ಕಂಪನಿ ಉದ್ಯೋಗಿ ಬಂಧನ

ಬೆಂಗಳೂರು:

     ನಡುರಸ್ತೆಯಲ್ಲಿ ಹೆಣ್ಣು ಮಕ್ಕಳಿಗೆ ಲೈಂಗಿಕ ಕಿರುಕುಳ  ನೀಡುವವರಲ್ಲಿ ಬೀದಿ ರೌಡಿಗಳು ಮಾತ್ರವಲ್ಲ, ಒಳ್ಳೆಯ ಉದ್ಯೋಗದಲ್ಲಿ ಇರುವವರು ಕೂಡ ಇದ್ದಾರೆ ಎಂದು ಮತ್ತೆ ಮತ್ತೆ ರುಜುವಾತಾಗುತ್ತಿದೆ. ದೇವರಬೀಸನಹಳ್ಳಿಯ ಇಕೋ ವರ್ಲ್ಡ್ ಟೆಕ್ ಪಾರ್ಕ್‌ನ ಮುಖ್ಯ ದ್ವಾರದ ಬಳಿ ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಮಾರತ್ತಹಳ್ಳಿ ಪೊಲೀಸರು  ಎಂಬಿಎ ಪದವಿಧರ, ಖಾಸಗಿ ಕಂಪನಿಯ ಉದ್ಯೋಗಿಯನ್ನು ಭಾನುವಾರ ಬಂಧನಕ್ಕೊಳಪಡಿಸಿದ್ದಾರೆ.

    ಆರೋಪಿಯನ್ನು ದೇವರಬೀಸನಹಳ್ಳಿ ನಿವಾಸಿ ಶ್ರೀಕಾಂತ್ (32) ಎಂದು ಗುರುತಿಸಲಾಗಿದೆ. ಈತ ಎಂಬಿಎ ಪದವೀಧರನಾಗಿದ್ದು, ನಗರದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾನೆಂದು ತಿಳಿದುಬಂದಿದೆ. ಏಪ್ರಿಲ್ 30ರಂದು ಭೋಗನಹಳ್ಳಿ ನಿವಾಸಿ 26 ವರ್ಷದ ಮಹಿಳೆಯೊಬ್ಬರು ಟೆಕ್ ಪಾರ್ಕ್‌ನ ಮುಖ್ಯ ದ್ವಾರದ ಬಳಿ ನಡೆದುಕೊಂಡು ಹೋಗುತ್ತಿದ್ದಾಗ ಘಟನೆ ನಡೆದಿತ್ತು.

   ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ಶ್ರೀಕಾಂತ್ ಹಿಂದಿನಿಂದ ಬಂದು ಮಹಿಳೆಗೆ ಬೆನ್ನಿಗೆ ಕೆಳಗೆ ಹೊಡೆದಿದ್ದಾನೆ. ನಂತರ ಮುಂದೆ ಹೋಗಿ ಮತ್ತೆ ಯೂಟರ್ನ್ ತೆಗೆದುಕೊಂಡು ಮತ್ತೊಮ್ಮೆ ಮಹಿಳೆಗೆ ಕಿರುಕುಳ ನೀಡಿ, ಪರಾರಿಯಾಗಿದ್ದಾನೆ. ಈ ವೇಳೆ ಸ್ಥಳೀಯರಾರೂ ನೆರವಿಗೆ ಬರಲಿಲ್ಲ ಎಂದು ದೂರಿನಲ್ಲಿ ಮಹಿಳೆ ಹೇಳಿದ್ದರು. ದೂರ ಹಿನ್ನೆಲೆಯಲ್ಲಿ ಮಾರತಹಳ್ಳಿ ಪೊಲೀಸರು ಆರೋಪಿ ಬಂಧಿಸಲು ವಿಶೇಷ ತಂಡಗಳನ್ನು ರಚಿಸಿದ್ದರು. ಇದರಂತೆ ಸ್ಥಳೀಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಆರೋಪಿಗಾಗಿ ಹುಡುಕಾಟ ನಡೆಸಿದ್ದ ಅಧಿಕಾರಿಗಳು, ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

   ಈ ವ್ಯಕ್ತಿ ಅಪರಾಧ ಪ್ರವೃತ್ತಿಯವನೇ, ಈ ಹಿಂದೆ ಇಂಥ ಕೃತ್ಯ ಎಸಗಿದ್ದಾನೆಯೇ ಎಂದು ತಿಳಿಯಲು ತನಿಖೆ ನಡೆಸಲಾಗುತ್ತಿದೆ ಎಂದು ವೈಟ್‌ಫೀಲ್ಡ್ ವಿಭಾಗದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Recent Articles

spot_img

Related Stories

Share via
Copy link