ಬೆಂಗಳೂರು:
ಬೆಂಗಳೂರಿನಲ್ಲಿ 2016ರಲ್ಲಿ ನಡೆದ ಆರ್‌ಎಸ್‌ಎಸ್ ಮುಖಂಡ ಆರ್ ರುದ್ರೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಸದಸ್ಯ ಘೌಸ್ ನಯಾಜಿಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಶುಕ್ರವಾರ ಬಂಧಿಸಿದೆ.
ತಲೆಮರೆಸಿಕೊಂಡಿದ್ದ ಘೌಸ್ ನಯಾಜಿಯನ್ನು ತಾಂಜಾನಿಯಾದ ದಾರ್-ಎಸ್-ಸಲಾಮ್‌ನಿಂದ ಆಗಮಿಸಿದಾಗ ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎನ್‌ಐಎ ತಂಡವು ಬಂಧಿಸಿತು. ಆತ ಆಗಮಿಸುವ ಬಗ್ಗೆ ಖಚಿತ ಮಾಹಿತಿ ಆಧರಿಸಿ ಎನ್‌ಐಎ ತಂಡವು ಕಾಯುತ್ತಿತ್ತು.
ಶಿವಾಜಿನಗರದ ಪ್ರಮುಖ ಆರ್‌ಎಸ್‌ಎಸ್ ಮುಖಂಡ ರುದ್ರೇಶ್ ಎಂಬುವವರನ್ನು ಈಗ ನಿಷೇಧಿತ ಪಿಎಫ್‌ಐನ ನಾಲ್ವರು ಸದಸ್ಯರು ಅಕ್ಟೋಬರ್ 16, 2016 ರಂದು ಕೊಂದಿದ್ದರು. ಈ ಪ್ರಕರಣದ ತನಿಖೆ ಕೈಗೊಂಡ ಎನ್‌ಐಎಗೆ ಈ ಕೊಲೆಯು ‘ಘೌಸ್, ಎಸ್‌ಡಿಪಿಐ ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಮತ್ತು ಅಸೀಮ್ ಶೆರೀಫ್ ರೂಪಿಸಿದ ದೊಡ್ಡ ಪಿತೂರಿಯ ಭಾಗವಾಗಿತ್ತು’ ಎಂಬುದು ತಿಳಿದುಬಂದಿತ್ತು ಎಂದು ಎನ್‌ಐಎ ಶನಿವಾರ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.
‘ಆರ್‌ಎಸ್‌ಎಸ್ ಸದಸ್ಯರು ಮತ್ತು ಸಮಾಜದಲ್ಲಿ ಭಯೋತ್ಪಾದನೆ ಭೀತಿಯನ್ನು ಉಂಟುಮಾಡುವ ಉದ್ದೇಶದಿಂದ ರುದ್ರೇಶ್‌ನನ್ನು ಕೊಲ್ಲಲು ಘೌಸ್ ಮತ್ತು ಶೆರೀಫ್ ಇತರ ನಾಲ್ವರು ಆರೋಪಿಗಳನ್ನು ಪ್ರೇರೇಪಿಸಿದ್ದರು. ಆರ್‌ಎಸ್‌ಎಸ್ ವಿರುದ್ಧದ ಹೋರಾಟವನ್ನು ‘ಪವಿತ್ರ ಯುದ್ಧ’ ಎಂದು ನಂಬುವಂತೆ ಕೊಲೆಗಾರರನ್ನು ಮನವೊಲಿಸಲಾಗಿತ್ತು ಎಂದು ಎನ್ಐಎ ತಿಳಿಸಿದೆ.
ಘೌಸ್ ಬಂಧನದೊಂದಿಗೆ ಪ್ರಕರಣದ ಎಲ್ಲಾ ಆರೋಪಿಗಳನ್ನು ಬಂಧಿಸಲಾಗಿದೆ. ಉಳಿದ ಆರೋಪಿಗಳ ವಿರುದ್ಧ ಬೆಂಗಳೂರಿನ ಎನ್‌ಐಎ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ಮುಂದುವರಿದಿದೆ.