ನೋಂದಣಿ ಮಾರ್ಗಸೂಚಿ ದರದಲ್ಲಾಗಲಿದೆ ಹೆಚ್ಚಳ

ತುಮಕೂರು:


ಕಳೆದ ಮೂರು ವರ್ಷದಿಂದ ಆಸ್ತಿ ಮಾರ್ಗಸೂಚಿ ದರವನ್ನು ಹೆಚ್ಚಳ ಮಾಡದ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಇದೀಗ ಬೊಕ್ಕಸ ತುಂಬಿಸಲು ಮತ್ತೆ ದರ ಹೆಚ್ಚಳದ ಪರಿಷ್ಕರಣೆ ಕಾರ್ಯಕ್ಕೆ ಮುಂದಾಗಿದ್ದು, ತುಮಕೂರು ತಾಲೂಕು ವ್ಯಾಪ್ತಿಯಲ್ಲಿ ಶೇ.10 ರಿಂದ 40%ಕ್ಕೂ ಮೇಲ್ಪಟ್ಟು ಸ್ಥಿರಾಸ್ತಿ ಮಾರ್ಗಸೂಚಿ ದರದಲ್ಲಿ ಹೆಚ್ಚಳ ಮಾಡಿ ಪ್ರಸ್ತಾವನೆಯನ್ನು ಸಾರ್ವಜನಿಕರ ಮುಂದಿಟ್ಟಿದೆ.

ಈ ದರ ಹೆಚ್ಚಳದ ಪ್ರಸ್ತಾವನೆಗೆ ಆಕ್ಷೇಪಣೆ ಸಲ್ಲಿಸಲು ತುಮಕೂರು ಉಪನೋಂದಣಾಧಿಕಾರಿಗಳು 2022 ಜ.1ರವರೆಗೆ ಕಾಲಾವಕಾಶ(ಡಿ.17 ರಿಂದ ಜ.1ರವರೆಗೆ) ನೀಡಿದ್ದು, ಆಕ್ಷೇಪಣೆ ಕುರಿತು ಯಾವುದೇ ತಕರಾರಿದ್ದರೂ ಲಿಖಿತವಾಗಿ ದಾಖಲೆ ಸಹಿತ ಸಲ್ಲಿಸಬೇಕು ಎಂದು ಸೂಚಿಸಿದ್ದಾರೆ. ಈ ಆಕ್ಷೇಪಣೆಗಳ ಆಧಾರದಲ್ಲಿ ತಹಸೀಲ್ದಾರ್, ಉಪನೋಂದಾಣಾಧಿಕಾರಿಗಳನ್ನೊಳಗೊಂಡ ಸಮಿತಿ ಅಂತಿಮ ಮಾರ್ಗಸೂಚಿ ದರ ನಿಗದಿ ಮಾಡಲಿದೆ.

ಈ ಹಿನ್ನೆಲೆಯಲ್ಲಿ ಆಸ್ತಿ ಖರೀದಿಸಬೇಕಿಂದಿರುವ ಜನಸಾಮಾನ್ಯರು, ಮನೆ ಜಮೀನು ಕ್ರಯ-ವಿಕ್ರಯದಲ್ಲಿ ತೊಡಗಿರುವವರು, ತ್ವರಿತ ಎಚ್ಚೆತ್ತು ಉಪನೋಂದಣಾಧಿಕಾರಿ ಕಚೇರಿ, ತಹಸೀಲ್ದಾರ್ ಕಚೇರಿಯಲ್ಲಿ ನೋಟಿಸ್‍ಬೋರ್ಡ್‍ನಲ್ಲಿ ಪ್ರಚುರಪಡಿಸಿರುವ ಮಾರ್ಗಸೂಚಿ ದರ ಹೆಚ್ಚಳವನ್ನು ಗಮನಿಸಿ, ಆಕ್ಷೇಪಣೆ ದಾಖಲಿಸದಿದ್ದರೆ ಮುಂದೆ ಮಾರ್ಗಸೂಚಿ ದರ ಹೆಚ್ಚಳದೊಂದಿಗೆ ಸ್ಮಾರ್ಟ್ ಸಿಟಿಯಾಗುತ್ತಿರುವ ತುಮಕೂರು ನಗರ ಹಾಗೂ ಹೊರವಲಯದಲ್ಲಿ ಸ್ವಂತ ನಿವೇಶನ, ಮನೆ, ತಾಲೂಕಿನಲ್ಲಿ ಜಮೀನು ಖರೀದಿಸುವುದು ದುಬಾರಿಯಾಗುವ ಜೊತೆಗೆ ರಿಜಿಸ್ಟ್ರೇಷನ್ ಶುಲ್ಕವು ಹೆಚ್ಚಳವಾಗಲಿದೆ ಎಂಬ ಅಭಿಪ್ರಾಯ ರಿಯಲ್ ಎಸ್ಟೇಟ್ ವಲಯದಿಂದಲೇ ವ್ಯಕ್ತವಾಗುತ್ತಿದೆ.

ಪ್ರಸ್ತಾವಿತ ಹೆಚ್ಚಳ( ಕೆಲವು ಉದಾಹರಣೆ): ಕ್ಯಾತ್ಸಂದ್ರ ಭಾಗದಲ್ಲಿ ಕೃಷಿ ಜಮೀನು ಖರೀದಿದರದಲ್ಲಿ ಶೇ 67 % ಹೆಚ್ಚಳದ ಪ್ರಸ್ತಾಪ ಇದ್ದು, ಹಾಲಿ ಇದ್ದ ಪ್ರತೀ ಎಕರೆ 1.20 ಕೋಟಿ ಮಾರ್ಗಸೂಚಿ ದರವನ್ನು ರಾಷ್ಟ್ರೀಯ ಹೆದ್ದಾರಿ ಸಮೀಪವೆಂಬ ಕಾರಣಕ್ಕೆ 2 ಕೋಟಿಗೆ ಹೆಚ್ಚಳ ಮಾಡಲಾಗಿದೆ. ಇನ್ನೂ ಇದೇ ಕ್ಯಾತ್ಸಂದ್ರ ವ್ಯಾಪ್ತಿ ಪ್ರತೀ ಚದರಡಿಗೆ 1486 ರೂ. ಇದ್ದ ನಿವೇಶನ ದರದಲ್ಲಿ 12% ಹೆಚ್ಚಳ ಪ್ರಸ್ತಾಪಿಸಿದ್ದು, 1664 ರೂ. ದರ ನಿಗದಿಪಡಿಸಲಾಗಿದೆ.

ಮೆಳೆಕೋಟೆಯಲ್ಲಿ ಶೇ.13 ಹೆಚ್ಚಳ: ಪ್ರಮುಖ ವಾಣಿಜ್ಯ ರಸ್ತೆ ಎಂ.ಜಿ.ರಸ್ತೆಯಲ್ಲಿ 6,968 ರೂ. ಪ್ರತೀ ಚದರಡಿಗೆ ದರವಿದ್ದು, ಪ್ರಸ್ತಾವಿತ ಹೆಚ್ಚಳ 10% ನಿಂದ ಚದರಡಿಗೆ ದರ 7,710 ರೂ. ಆಗಿದೆ. ಪ್ರತಿಷ್ಠಿತರ ಬಡಾವಣೆ ಗಾಂಧಿನಗರದಲ್ಲಿ ಚದರ ಮೀಟರ್‍ಗಿದ್ದ 25000ರೂ. ಮಾರ್ಗಸೂಚಿ ದರವನ್ನು 28,000ಕ್ಕೆ ಏರಿಸಲಾಗಿದ್ದು, ಮೆಳೆಕೋಟೆ ವೀರಸಾಗರ ಪ್ರದೇಶದಲ್ಲಿ ಪ್ರತೀ ಚದರಡಿಗಿದ್ದ 1394 ರೂ. ನಿವೇಶನ ದರವನ್ನು 13% ಹೆಚ್ಚಳ ಮಾಡಿ 1580 ರೂ.ಗೆ ನಿಗದಿ ಮಾಡಲಾಗಿದೆ.

ಹಾಗೆಯೇ ಬೆಳಗುಂಬ ವ್ಯಾಪ್ತಿಯಲ್ಲಿ ಹಾಲಿಯಿದ್ದ 762 ರೂ. ಪ್ರತೀ ಚದರಡಿ ದರ 836ರೂ.ಗಳಿಗೆ ಏರಿಕೆಯಾಗಿದ್ದು, ಶೆಟ್ಟಿಹಳ್ಳಿ ರಿಂಗ್ ರಸ್ತೆಯಲ್ಲಿ 1208ರೂ.ಗಳಿದ್ದ ಹಾಲಿ ಚದರಡಿ ದರ 15% ಪ್ರಸ್ತಾವಿತ ಹೆಚ್ಚಳದೊಂದಿಗೆ 1394 ರೂ.ಗಳಿಗೆ ದರ ನಿಗದಿಯಾಗಿದೆ.

ಹೆಗ್ಗೆರೆಯಲ್ಲಿ ಶೇ22ರಷ್ಟು ಹೆಚ್ಚಳದ ಪ್ರಸ್ತಾಪ:

ಅಂತರಸನಹಳ್ಳಿ ವ್ಯಾಪ್ತಿಯ ನಿವೇಶನಗಳಿಗೆ ಪ್ರತೀ ಚದರಡಿಗೆ 1022 ರೂ.ಗಳಿದ್ದ ದರವನ್ನು 1115 ರೂ.ಗೆ ಹೆಚ್ಚಳ ಮಾಡಿದ್ದು, ಶೇ.10ರಷ್ಟು ಹೆಚ್ಚುವರಿಯಾಗಿದೆ. ಹೆಗ್ಗೆರೆ ವ್ಯಾಪ್ತಿಯಲ್ಲಿ ಶೇ.22ರಷ್ಟು ಹೆಚ್ಚಳದ ಪ್ರಸ್ತಾಪ ಮಾಡಲಾಗಿದ್ದು, ಪರಿಷ್ಕøತ ದರ ಜಾರಿಗೊಂಡರೆ ಹಾಲಿ ದರ 837ರೂ.ಗಳಿಗಿಂತ 185 ರೂ. ಹೆಚ್ಚಳವಾಗಿ 1022 ರೂ.ಗಳಷ್ಟಾಗಲಿದೆ. ಇದೇ ರೀತಿ ತುಮಕೂರು ನಗರದ ವಾರ್ಡ್‍ಗಳಲ್ಲೂ ನಿವೇಶನ ದರದಲ್ಲಿ ಶೇ.10 ರಿಂದ 15ರವರೆಗೆ ಹೆಚ್ಚಳ ಮಾಡುವ ಪ್ರಸ್ತಾಪ ಮಾಡಲಾಗಿದೆ. ತುಮಕೂರು ತಾಲೂಕು, ಮಾತ್ರವಲ್ಲದೇ ಸಿರಾ ಸೇರಿ ಜಿಲ್ಲೆಯ ಇತರೆ ತಾಲೂಕುಗಳಲ್ಲೂ ಮಾರ್ಗಸೂಚಿ ದರ ಪರಿಷ್ಕರಣೆ ಮಾಡಲಾಗಿದ್ದು, ಸಾರ್ವಜನಿಕರು ಗಮನಹರಿಸಬೇಕಿದೆ.

ವೆಬ್‍ಸೈಟ್‍ನಲ್ಲಿ ಪ್ರಕಟಿಸುವುದು ಉತ್ತಮ: ಕೋವಿಡ್ ಸಂದರ್ಭದಲ್ಲಿ ಜನತೆ ಕಚೇರಿಗೆ ಬಂದು ದರ ಪರಿಷ್ಕರಣೆ ಮಾಹಿತಿ ತಿಳಿಯುವುದು ಕಷ್ಟಸಾಧ್ಯವಾಗಿದ್ದು, ಇಲಾಖೆಯ ಅಧಿಕೃತ ವೆಬ್‍ಸೈಟ್‍ನಲ್ಲಿ ಪ್ರಸ್ತಾವಿತ ಪರಿಷ್ಕರಣೆಯನ್ನು ದಾಖಲಿಸುವ ಕಾರ್ಯ ಆಗಿದ್ದರೆ ಉತ್ತಮವಾಗಿತ್ತು ಎಂಬ ಅಭಿಪ್ರಾಯ ಜನರದ್ದಾಗಿದೆ.

ಕೋವಿಡ್ ಹೊಡೆತದಿಂದ ಜನರ ಕೊಳ್ಳುವ ಶಕ್ತಿಯು ಕ್ಷೀಣಿಸಿದ್ದು, ಬ್ಯಾಂಕ್‍ನಲ್ಲಿ ಸುಲಭವಾಗಿಯೂ ಸಾಲಗಳು ಸಿಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ಮಾರ್ಗಸೂಚಿ ದರವನ್ನು ಪ್ರತೀವರ್ಷ ಹೆಚ್ಚಿಸುತ್ತಲೇ ಹೋದರೆ ಜನಸಾಮಾನ್ಯರು ಕೊಳ್ಳುವ ಆಸೆಯನ್ನೇ ಕೈ ಬಿಡಬೇಕಾಗುತ್ತದೆ. ಬೊಕ್ಕಸ ತುಂಬಿಸುವ ಉದ್ದೇಶದಿಂದ ದರ ಪರಿಷ್ಕರಣೆ ಶಾಶ್ವತ ಪರಿಹಾರವಲ್ಲ. ಹೀಗೆ ಹೆಚ್ಚಿಸುತ್ತಾ ಹೋದರೆ ನೋಂದಣಿಯ ಸಂಖ್ಯೆಯೂ ಇಳಿಕೆಯಾಗಿ ಹಾಲಿ ಆದಾಯಕ್ಕೂ ಕೊಕ್ಕೆಯಾಗಲಿದೆ. ಆಡಳಿತ, ಜನ ಪ್ರತಿನಿಧಿಗಳು ಇದನ್ನು ಗಂಭೀರವಾಗಿ ಯೋಚಿಸಬೇಕು.

-ಡಿ.ಎಂ.ಸತೀಶ್, ದೇವರಾಯಪಟ್ಟಣ.

ಆಕ್ಷೇಪಣೆ ಪರಿಗಣಿಸಿ ಪರಿಷ್ಕತ ದರ ನಿಗದಿ:

ತುಮಕೂರುತಾಲೂಕಿನ ಹಿರಿಯ ಉಪನೋಂದಣಾಧಿಕಾರಿ ಸುಭಾಷ್ ಹೊಸಳ್ಳಿ ಮಾರ್ಗಸೂಚಿ ದರ ಪರಿಷ್ಕರಣೆ ಕುರಿತು ಪ್ರತಿಕ್ರಿಯಿಸಿದ್ದು, ಕರ್ನಾಟಕ ಮುದ್ರಾಂಕ ಕಾಯ್ದೆ 1957ರ ನಿಬಂಧನೆಗಳು 2003ರನ್ವಯ ಪ್ರತೀ ವರ್ಷ ಮಾರ್ಗಸೂಚಿ ದರವನ್ನು ಮಾರುಕಟ್ಟೆ ದರ ಹೆಚ್ಚಳಕ್ಕನುಗುಣವಾಗಿ ಹೆಚ್ಚಳ ಮಾಡಬೇಕಿದ್ದು, ಕೋವಿಡ್ ಕಾರಣದಿಂದ ಕಳೆದ 3 ವರ್ಷಗಳಿಂದ ದರಹೆಚ್ಚಳವಾಗಿಲ್ಲ.

ಈ ಹಿನ್ನೆಲೆಯಲ್ಲಿ 2022ರಿಂದ ಅನ್ವಯವಾಗುವಂತೆ ದರ ಹೆಚ್ಚಳಕ್ಕೆ ತಹಸೀಲ್ದಾರ್ ನೇತೃತ್ವದ ಸಮಿತಿಯಲ್ಲಿ ಚರ್ಚಿಸಿ ಡಿ.17ರಿಂದ ಸಾರ್ವಜನಿಕವಾಗಿ ನಮ್ಮ ಕಚೇರಿ, ತಾಲೂಕು ಕಚೇರಿಯಲ್ಲಿ ಪ್ರಕಟಣಾ ಫಲಕದಲ್ಲಿ ಹಾಕಲಾಗಿದ್ದು, ಜ.1ರೊಳಗೆ ಸೂಕ್ತ ದಾಖಲೆಯೊಂದಿಗೆ ಆಕ್ಷೇಪಣೆ ಸಲ್ಲಿಸಬಹುದಾಗಿದೆ. ಆಕ್ಷೇಪಣೆಯನ್ನು ಆಧರಿಸಿಯೇ ಅಂತಿಮ ದರ ನಿರ್ಧಾರವಾಗಲಿದೆ.

ಮಾರ್ಗಸೂಚಿ ದರ ಪರಿಷ್ಕರಣೆಯನ್ನು ಅವೈಜ್ಞಾನಿಕವಾಗಿ ಮಾಡಲಾಗಿದೆ ಎಂಬ ಭಾವನೆ ಮೂಡುತ್ತಿದೆ. ತುಮಕೂರು ಹೊರವಲಯದ  ಲೇಔಟ್‍ಗಳಲ್ಲಿ ಎರಡು ವರ್ಷದ ಹಿಂದೆ ಏನು ದರವಿತ್ತೋ ಆ ದರದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಜನರಲ್ಲಿ ಕೋವಿಡ್ ಹೊಡೆತದಿಂದ ಕೊಳ್ಳುವ ಶಕ್ತಿಯು ಕ್ಷೀಣಿಸಿದೆ. ಇನ್ನೂ ಕೋವಿಡ್ ಆತಂಕ ದೂರವಾಗದಿರುವುದರಿಂದ ಈ ವರ್ಷವೂ ಹೆಚ್ಚಳ ಮಾಡದಿರುವುದೇ ಒಳಿತು. ಅಲ್ಲದೇ ದರ ಪರಿಷ್ಕರಣೆ ಸಂದರ್ಭದಲ್ಲಿ ಡೆವಲಪರ್ಸ್ ಗೃಹನಿರ್ಮಾಣ ಸಹಕಾರ ಸಂಘ, ಖರೀದಿದಾರ ಪ್ರತಿನಿಧಿಗಳೊಬ್ಬರನ್ನು ಖರೀದಿ ಚರ್ಚಿಸಿ ದರ ನಿಗದಿಮಾಡಬೇಕು.

-ಚಿದಾನಂದ್, ಸ್ಫೂರ್ತಿ ಡೆವಲಪರ್ಸ್.

  • ಎಸ್.ಹರೀಶ್ ಆಚಾರ್ಯ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link