ಬಿಜೆಪಿ ರಾಜ್ಯಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟ ಪ್ರಭಾವಿಗಳು…!

ಬೆಂಗಳೂರು

     ಬದಲಾದ ರಾಜಕೀಯ ವಿದ್ಯಮಾನಗಳ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಗೆ ಲಿಂಗಾಯತ ಸಮುದಾಯದ ನಾಯಕರನ್ನು ತರಲು ಒಲವು ವ್ಯಕ್ತವಾಗತೊಡಗಿದ್ದು ಮಾಜಿ ಸಚಿವ ವಿ.ಸೋಮಣ್ಣ ಮತ್ತು ಬಸವನಗೌಡ ಪಾಟೀಲ್ ಯತ್ನಾಳ್ ಅವರ ಹೆಸರುಗಳು ರೇಸಿಗೆ ಬಂದಿವೆ. ರಾಜ್ಯಾಧ್ಯಕ್ಷ ಹುದ್ದೆಗೆ ಕೇಂದ್ರ ಸಚಿವೆ,ಒಕ್ಕಲಿಗ ಸಮುದಾಯದ ಶೋಭಾ ಕರಂದ್ಲಾಜೆ ಅವರ ಹೆಸರು ಕೇಳಿ ಬರುತ್ತಿತ್ತಾದರೂ,ಈ ಜಾಗಕ್ಕೆ ಲಿಂಗಾಯತ ಸಮುದಾಯದ ನಾಯಕರನ್ನು ತರಬೇಕು ಎಂಬ ಕುರಿತು ಒಲವು ಹೆಚ್ಚಾಗತೊಡಗಿದೆ.

    ಕೇಂದ್ರದ ಬಿಜೆಪಿ ನಾಯಕರು ಇತ್ತೀಚೆಗೆ ಮಾಡಿಸಿದ ಎರಡು ಸರ್ವೇಗಳು,ಕರ್ನಾಟಕದಲ್ಲಿ ಲಿಂಗಾಯತ ಸಮುದಾಯದ ನಾಯಕರನ್ನು ರಾಜ್ಯಾಧ್ಯಕ್ಷ ಹುದ್ದೆಗೆ ತರಬೇಕು ಎಂದು ಶಿಫಾರಸು ಮಾಡಿದ್ದು,ಈ ಹಿನ್ನೆಲೆಯಲ್ಲಿ ಸೋಮಣ್ಣ ಮತ್ತು ಯತ್ನಾಳ್ ಹೆಸರುಗಳು ಮುಂಚೂಣಿಗೆ ಬಂದಿವೆ. ಇವತ್ತು ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದಲ್ಲಿ ಒಕ್ಕಲಿಗ ಸಮುದಾಯದ ಡಿ.ಕೆ.ಶಿವಕುಮಾರ್ ಇದ್ದಾರೆ,ಅದೇ ರೀತಿ ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷರಾಗಿ ಒಕ್ಕಲಿಗ ಸಮುದಾಯದ ಹೆಚ್.ಡಿ.ಕುಮಾರಸ್ವಾಮಿ ನೇಮಕವಾಗಿದ್ದಾರೆ.

    ಈ ಹಿನ್ನೆಲೆಯಲ್ಲಿ ನಾವು ಕೂಡಾ ಒಕ್ಕಲಿಗ ಸಮುದಾಯದ ನಾಯಕರನ್ನು ರಾಜ್ಯಾಧ್ಯಕ್ಷ ಹುದ್ದೆಗೆ ತರುವುದು ದುಬಾರಿಯಾಗಬಹುದು.ಹೀಗಾಗಿ ಬದಲಾದ ರಾಜಕೀಯ ವಿದ್ಯಮಾನಗಳ ಹಿನ್ನೆಲೆಯಲ್ಲಿ ಲಿಂಗಾಯತ ಸಮುದಾಯದ ನಾಯಕರನ್ನು ರಾಜ್ಯಾಧ್ಯಕ್ಷ ಹುದ್ದೆಗ ತರುವುದು ಪಕ್ಷಕ್ಕೆ ಪ್ಲಸ್ ಆಗಲಿದೆ ಎಂಬುದು ಈ ಸರ್ವೆಯ ಶಿಫಾರಸು.

    ಹೀಗೆ ಕೇಂದ್ರದ ನಾಯಕರ ಕೈಲಿರುವ ಸರ್ವೆ ವರದಿಯ ಹಿನ್ನೆಲೆಯಲ್ಲಿ ಲಿಂಗಾಯತ ಸಮುದಾಯದ ನಾಯಕರಾದ,ಮಾಜಿ ಸಚಿವ ವಿ.ಸೋಮಣ್ಣ ಮತ್ತು ಮಾಜಿ ಕೇಂದ್ರ ಸಚಿವ ಬಸವನಗೌಡ ಪಾಟೀಲ್ ಯತ್ನಾಳ್ ಅವರ ಹೆಸರುಗಳು ಮುಂಚೂಣಿಗೆ ಬಂದಿವೆ.

    ಈ ಪೈಕಿ ಸೋಮಣ್ಣ ಅವರ ಹೆಸರಿಗೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಒಲವು ವ್ಯಕ್ತಪಡಿಸಿದ್ದರೆ,ರಾಜ್ಯದ ಕೆಲ ನಾಯಕರು ಬಸವನಗೌಡ ಪಾಟೀಲ್ ಯತ್ನಾಳ್ ಅವರ ಹೆಸರನ್ನು ಮುಂದೆ ತರಲು ಪ್ರಯತ್ನಿಸುತ್ತಿದ್ದಾರೆ.

   ಈ ಮಧ್ಯೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಮ್ಮ ಪುತ್ರ ಬಿ.ವೈ.ವಿಜಯೇಂದ್ರ ಅವರನ್ನು ರಾಜ್ಯಧ್ಯಕ್ಷ ಹುದ್ದೆಗೆ ತರಲು ಕಸರತ್ತು ನಡೆಸಿದ್ದಾರಾದರೂ ವರಿಷ್ಟರು,ಸಧ್ಯಕ್ಕೆ ವಿಜಯೇಂದ್ರ ಬೇಡ ಎಂಬ ನಿಲುವು ತಳೆದಿದ್ದಾರೆ ಎಂದು ಮೂಲಗಳು ಹೇಳಿವೆ. ಇವೇ ಮೂಲಗಳ ಪ್ರಕಾರ,ಕಳೆದ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಸಮುದಾಯದ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾಗುತ್ತಾರೆ ಎಂಬ ನಿರೀಕ್ಷೆಯಿಂದ ಹಳೆ ಮೈಸೂರು ಭಾಗದ ಒಕ್ಕಲಿಗರು ದೊಡ್ಡ ಮಟ್ಟದಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದರು.

   ಆದರೆ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಡಿ.ಕೆ.ಶಿವಕುಮಾರ್ ಅವರು ಉಪಮುಖ್ಯಮಂತ್ರಿ ಹುದ್ದೆಗೆ ತೃಪ್ತಿ ಪಡಬೇಕಾಯಿತು.ಈ ಮಧ್ಯೆ ಅವರಿಗೆ ಪರ್ಯಾಯವಾಗಿ ಹಲವು ಉಪಮುಖ್ಯಮಂತ್ರಿಗಳನ್ನು ತರುವ ಕಸರತ್ತು ಕಾಂಗ್ರೆಸ್ ನಲ್ಲಿ ಆರಂಭವಾಗಿದ್ದು,ಇದು ಡಿಕೆಶಿಯನ್ನು ದುರ್ಬಲಗೊಳಿಸುವ ಹುನ್ನಾರು ಎಂಬ ಭಾವನೆ ಒಕ್ಕಲಿಗ ಪಾಳಯದಲ್ಲಿ ಹರಡಿದೆ.

     ಇದರ ಪರಿಣಾಮವಾಗಿ ಒಕ್ಕಲಿಗ ಸಮುದಾಯ ಕಾಂಗ್ರೆಸ್ ವಿರುದ್ಧ ದೊಡ್ಡ ಮಟ್ಟದಲ್ಲಿ ತಿರುಗಿ ಬೀಳಲಿದ್ದು, ಇದನ್ನು ದೇವೇಗೌಡ-ಕುಮಾರಸ್ವಾಮಿಯವರ ವೇತೃತ್ವದ ಜೆಡಿಎಸ್ ಎನ್ ಕ್ಯಾಶ್ ಮಾಡಿಕೊಳ್ಳಲಿದೆ.ಹೀಗಾಗಿ ಈ ಸಂದರ್ಭದಲ್ಲಿ ನಾವು ಒಕ್ಕಲಿಗ ಸಮುದಾಯದವರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಿದರೆ ಲಿಂಗಾಯತ ಸಮುದಾಯದ ವಿಶ್ವಾಸ ಗಳಿಸುವಲ್ಲಿ ವಿಫಲ ರಾಗುತ್ತೇವೆ.

    ಸಧ್ಯದ ಪರಿಸ್ಥಿತಿಯಲ್ಲಿ ಲಿಂಗಾಯತ ಸಮುದಾಯದ ನಾಯಕರನ್ನು ರಾಜ್ಯಾಧ್ಯಕ್ಷ ಹುದ್ದೆಗೆ ತಂದರೆ ಮುಂಬರುವ ಸಂಸತ್ ಚುನಾವಣೆಯಲ್ಲಿ ಅದರ ಸಂಪೂರ್ಣ ಲಾಭ ಪಡೆಯಬಹುದು ಎಂದು ಈ ವರದಿ ಸ್ಪಷ್ಟವಾಗಿ ಹೇಳಿದ್ದು,ಈ ಹಿನ್ನೆಲೆಯಲ್ಲಿ ಸೋಮಣ್ಣ ಮತ್ತು ಯತ್ನಾಳ್ ಹೆಸರುಗಳು ಮುಂದೆ ಬಂದಿವೆ.

    ಈ ಪೈಕಿ ಯತ್ನಾಳ್ ಹೆಸರನ್ನು ರಾಜ್ಯದ ಕೆಲ ನಾಯಕರು ಪ್ರಸ್ತಾಪಿಸಿದ್ದರೂ,ಅವರ ಟೆರರ್ ಗುಣ ಪಕ್ಷಕ್ಕೆ ಹಾನಿಯುಂಟು ಮಾಡಬಹುದು ಎಂಬ ಲೆಕ್ಕಾಚಾರ ವರಿಷ್ಟರಲ್ಲಿದೆ.ಯತ್ನಾಳ್ ಪಕ್ಷದ ಆಸ್ತಿ,ಆದರೆ ಅವರ ಅಗ್ರೆಸಿವ್ ಗುಣ ಪಕ್ಷಕ್ಕೆ ಹಾನಿಯುಂಟು ಮಾಡಬಹುದು ಎಂಬುದು ವರಿಷ್ಟರ ಯೋಚನೆ.

   ಇದೇ ಕಾರಣಕ್ಕಾಗಿ ಸೋಮಣ್ಣ ಅವರ ಹೆಸರು ಮುಂಚೂಣಿಗೆ ಬಂದಿದ್ದು,ರಾಜ್ಯದ ಎಲ್ಲ ಮಠ-ಮಾನ್ಯಗಳ ವಿಶ್ವಾಸಕ್ಕೆ ಪಾತ್ರರಾಗಿರುವ ಸೋಮಣ್ಣ,ಅಭಿವೃದ್ಧಿಯ ವಿಷಯದಲ್ಲೂ ನಿಖರ ನೋಟ ಇಟ್ಟುಕೊಂಡವರೆಂಬುದು ವರಿಷ್ಟರ ಗಮನ ಸೆಳೆದಿದೆ.

   ಕುತೂಹಲದ ಸಂಗತಿ ಎಂದರೆ,ಲಿAಗಾಯತ ಸಮುದಾಯದ ವಿ.ಸೋಮಣ್ಣ ಅಧ್ಯಕ್ಷರಾದರೆ ಜೆಡಿಎಸ್-ಬಿಜೆಪಿ ಮೈತ್ರಿಕೂಟಕ್ಕೆ ಹೊಸ ಬಲ ಸಿಗಲಿದೆ ಎಂದು ಮಾಜಿ ಪ್ರಧಾನಿ,ಜೆಡಿಎಸ್ ನಾಯಕ ಹೆಚ್.ಡಿ.ದೇವೇಗೌಡರು ದಿಲ್ಲಿಯ ಬಿಜೆಪಿ ವರಿಷ್ಟರಿಗೆ ಹೇಳಲು ಬಯಸಿದ್ದು,ಈ ಬೆಳವಣಿಗೆ ಸಹಜವಾಗಿಯೇ ಸೋಮಣ್ಣ ಅವರಿಗೆ ಬಲ ತಂದಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap