ಬೆಂಗಳೂರು
ಹದಿನಾರನೇ ವಿಧಾನಸಭೆಗೆ ಬುಧವಾರ ಮತದಾನ ನಡೆಯಲಿದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ,ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ,ಮಾಜಿ ಉಪಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸೇರಿದಂತೆ ಘಟಾನುಘಟಿ ನಾಯಕರು ಮತ್ತಿತರ ಸ್ಪರ್ಧಿಗಳ ಭವಿಷ್ಯ ಮತಪೆಟ್ಟಿಗೆ ಸೇರಲಿದೆ. ಬುಧವಾರ ಬೆಳಿಗ್ಗೆ 7 ಮತದಾನ ಆರಂಭವಾಗಲಿದ್ದು ಸಂಜೆ 6 ಗಂಟೆಗೆ ಮುಕ್ತಾಯವಾಗಲಿದೆಯಲ್ಲದೆ,ಆ ಮೂಲಕ ವಿಧಾನಸಭೆಯ ಇನ್ನೂರಾ ಇಪ್ಪತ್ನಾಲ್ಕು ಕ್ಷೇತ್ರಗಳ ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆ ಸೇರಲಿದೆ.
ಸೋಮವಾರ ಬಹಿರಂಗ ಪ್ರಚಾರ ಅಂತ್ಯಗೊAಡ ಹಿನ್ನೆಲೆಯಲ್ಲಿ ಮಂಗಳವಾರ ಅಭ್ಯರ್ಥಿಗಳು ಮನೆ ಮನೆ ಮನೆಗೆ ತೆರಳಿ ಪ್ರಚಾರ ಕಾರ್ಯ ನಡೆಸಿದರಲ್ಲದೆ,ಗೆಲುವಿಗಾಗಿ ಕೊನೆಯ ಘಳಿಗೆಯ ಪ್ರಯತ್ನ ನಡೆಸಿದರು. ಬಿಜೆಪಿ ವಿರುದ್ದ ಬಂಡಾಯವೆದ್ದು ಕಾಂಗ್ರೆಸ್ ಕಡೆ ಹೋದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್,ಮಾಜಿ ಉಪಮುಖ್ಯಮಂತ್ರಿ ಲಕ್ಷ÷್ಮಣ ಸವದಿ ಅವರ ಭವಿಷ್ಯ ಮತಪೆಟ್ಟಿಗೆ ಸೇರಲಿದ್ದು,ಇದೇ ರೀತಿ ಪಕ್ಷದ ವಿರುದ್ಧ ಬಂಡಾಯವೆದ್ದು ಬೇರೆ ಬೇರೆ ನೆಲೆ ತಲುಪಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಅಭ್ಯರ್ಥಿಗಳ ಭವಿಷ್ಯವೂ ಬುಧವಾರ ಮತಪೆಟ್ಟಿಗೆ ಸೇರಲಿದೆ.
ಚುನಾವಣೆಯಲ್ಲಿ ಗೆಲ್ಲಲು ಮೂರು ಪ್ರಮುಖ ರಾಜಕೀಯ ಪಕ್ಷಗಳು ಹರಸಾಹಸ ನಡೆಸಿದ್ದು,ಈ ಮಧ್ಯೆ ಕೇಜ್ರೀವಾಲ್ ನೇತೃತ್ವದ ಅಮ್ ಆದ್ಮಿ ಪಕ್ಷ,ಗಾಲಿ ಜನಾರ್ಧನ ರೆಡ್ಡಿ ಅವರ ಕರ್ನಾಟಕ ರಾಜ್ಯ ಪ್ರಗತಿ ವಿಕಾಸ ಪಕ್ಷ ಸೇರಿದಂತೆ ಹಲವು ಶಕ್ತಿಗಳು ತಮ್ಮ ತಮ್ಮ ಅಸ್ತಿತ್ವಕ್ಕಾಗಿ ಹೋರಾಟ ನಡೆಸಿವೆ. ಇನ್ನೂರಾ ಇಪ್ಪತ್ನಾಲ್ಕು ಕ್ಷೇತ್ರಗಳಿಗೆ ನಡೆಯಲಿರುವ ಚುನಾವಣೆಯಲ್ಲಿ ನೂರಾ ಹದಿಮೂರು ಸ್ಥಾನಗಳನ್ನು ಗೆದ್ದು ಯಾವ ಪಕ್ಷ ಅಧಿಕಾರ ಹಿಡಿಯಲಿದೆ ಎಂಬ ಕುತೂಹಲ ವ್ಯಾಪಕವಾಗಿದ್ದು,ಒಂದು ವೇಳೆ ಯಾವ ಪಕ್ಷವೂ ಬಹುಮತ ಗಳಿಸದಿದ್ದರೆ ಅತಂತ್ರ ವಿಧಾನಸಭೆ ಅಸ್ತಿತ್ವಕ್ಕೆ ಬರಲಿದೆ.
ಆಡಳಿತಾರೂಢ ಬಿಜೆಪಿ ಸ್ವಯಂಬಲದ ಮೇಲೆ ಗೆದ್ದು ಅಧಿಕಾರ ಹಿಡಿಯುವ ವಿಶ್ವಾಸದಲ್ಲಿದ್ದು ಈ ಬಾರಿ ಗೆದ್ದು ಅಧಿಕಾರ ಹಿಡಿದರೆ ಅದು ಮೂವತ್ತೆಂಟು ವರ್ಷಗಳಿಂದ ಉಳಿದಿರುವ ದಾಖಲೆಯನ್ನು ಮುರಿದಂತಾಗಲಿದೆ.
1983 ರಲ್ಲಿ ಅಧಿಕಾರಕ್ಕೆ ಬಂದಿದ್ದ ಜನತಾಪಕ್ಷ ಎರಡೇ ವರ್ಷಗಳಲ್ಲಿ ವಿಸರ್ಜನೆಯಾಗಿದ್ದಲ್ಲದೆ 1985 ರಲ್ಲಿ ಮರಳಿ ಗೆದ್ದು ಅಧಿಕಾರ ಹಿಡಿದಿತ್ತು. ಇದಾದ ನಂತರ ಕರ್ನಾಟಕದಲ್ಲಿ ಆಡಳಿತಾರೂಢ ಪಕ್ಷ ಮರಳಿ ಗೆದ್ದ ಉದಾಹರಣೆಯಿಲ್ಲ.ಆದರೆ ಈ ಬಾರಿ ಆ ದಾಖಲೆಯನ್ನು ನಾವು ಸರಿಗಟ್ಟುತ್ತೇವೆ.ನೂರಾ ಇಪ್ಪತ್ತಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ಬಿಜೆಪಿ ನಾಯಕರು ವಿಶ್ವಾಸ ವ್ಯಕ್ತಪಡಿಸತೊಡಗಿದ್ದಾರೆ.
ಪ್ರಧಾನಿ ನರೇಂದ್ರಮೋದಿ ಮತ್ತು ಕೇಂದ್ರದ ಇತರ ನಾಯಕರು ಕರ್ನಾಟಕಕ್ಕೆ ಬಂದು ಪ್ರಚಾರ ನಡೆಸಿದ ರೀತಿ ಮತದಾರರ ಮನ ಗೆದ್ದಿದ್ದು,ಇದರ ಫಲವಾಗಿ ಶೇಕಡಾ ನಾಲ್ಕರಿಂದ ಐದರಷ್ಟು ಹೆಚ್ಚುವರಿ ಮತಗಳು ಬಿಜೆಪಿಗೆ ದಕ್ಕಲಿವೆ ಎಂಬುದು ಈ ನಾಯಕರ ಆತ್ಮವಿಶ್ವಾಸ. ಕಳೆದ ಬಾರಿ ಚಲಾವಣೆಯಾದ ಮತಗಳ ಪೈಕಿ ಶೇಕಡಾ ಮೂವತ್ತಾರರಷ್ಟು ಮತಗಳನ್ನು ಗಳಿಸಿದ್ದ ಬಿಜೆಪಿ ನೂರಾ ನಾಲ್ಕು ಸ್ಥಾನಗಳನ್ನು ಗೆದ್ದಿತ್ತು.ಆದರೆ ಈ ಬಾರಿ ಪಕ್ಷದ ಗಳಿಕೆಯ ಪ್ರಮಾಣ ಶೇಕಡಾ ನಲವತ್ತನ್ನು ಮೀರಲಿದೆ ಎಂಬುದು ಈ ನಾಯಕರ ವಾದ.
ಇದರ ಪರಿಣಾಮವಾಗಿ ಸರ್ಕಾರ ರಚಿಸಲು ಅಗತ್ಯವಿರುವ 113 ರ ಮ್ಯಾಜಿಕ್ ಸಂಖ್ಯೆಯನ್ನು ತಲುಪುತ್ತೇವೆ .ಮರಳಿ ಸರ್ಕಾರ ರಚಿಸುತ್ತೇವೆ ಎಂಬುದು ಬಿಜೆಪಿ ನಾಯಕರ ಮಾತು. ಆದರೆ ಬಿಜೆಪಿ ಸರ್ಕಾರ ಕಡು ಭ್ರಷ್ಟ ಸರ್ಕಾರ ಎಂಬ ಹಣೆ ಪಟ್ಟಿ ಹೊತ್ತಿದ್ದು,ಜೀವನಾವಶ್ಯಕ ವಸ್ತುಗಳ ಬೆಲೆ ಏರಿಕೆಯಿಂದ ಹಿಡಿದು ಎಲ್ಲಿ ನೋಡಿದರೂ ವ್ಯಾಪಕವಾಗಿರುವ ಲಂಚಾವತಾರದಿಂದ ಮತದಾರರ ಆಕ್ರೋಶಕ್ಕೆ ಗುರಿಯಾಗಿದೆ.
ಇದೇ ರೀತಿ ಯಡಿಯೂರಪ್ಪ ಅವರ ಪದಚ್ಯುತಿ,ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಸವದಿ ಅವರಿಗೆ ಟಿಕೆಟ್ ತಪ್ಪಿದ ಕ್ರಮ ಮತ್ತು ನಮಗೆ ಲಿಂಗಾಯತರ ಮತಗಳು ಬೇಡ ಎಂದು ಬಿಜೆಪಿಯ ರಾಷ್ಟಿçÃಯ ಪ್ರಧಾನ ಕಾರ್ಯದರ್ಶಿಯೊಬ್ಬರು ಆಡಿದ್ದಾರೆನ್ನಲಾದ ಮಾತು,ಪ್ರಬಲ ಲಿಂಗಾಯತ ವರ್ಗದ ಅಸಮಾಧಾನಕ್ಕೆ ಕಾರಣವಾಗಿದ್ದು,ಇದರ ಪ್ರತಿಫಲವಾಗಿ ಕಾಂಗ್ರೆಸ್ ಕಳೆದ ಬಾರಿಗಿಂತ ಹೆಚ್ಚು ಮತ ಪಡೆಯುವುದು ಗ್ಯಾರಂಟಿ.
ಅಂದ ಹಾಗೆ ಕಳೆದ ಬಾರಿ ಚಲಾವಣೆಯಾದ ಮತಗಳ ಪೈಕಿ ಶೇಕಡಾ ಮೂವತ್ತೆಂಟರಷ್ಟು ಮತಗಳನ್ನು ಗಳಿಸಿದ್ದ ಕಾಂಗ್ರೆಸ್,ಇದೀಗ ಬಿಜೆಪಿ ಸರ್ಕಾರದ ವಿರುದ್ಧ ಜನವಿರೋಧಿ ಅಲೆ ಎದ್ದಿರುವುದರಿಂದ ಕೈ ಪಾಳಯಕ್ಕೆ ನೂರಾ ಮೂವತ್ತರಷ್ಟು ಸ್ಥಾನಗಳು ದಕ್ಕಲಿವೆ ಎಂದು ಕಾಂಗ್ರೆಸ್ ನಾಯಕರು ಹೇಳುತ್ತಾರೆ. ಈ ಮಧ್ಯೆ ದೇವೇಗೌಡರ ನೇತೃತ್ವದ ಜಾತ್ಯಾತೀತ ಜನತಾದಳ ಅರವತ್ತಕ್ಕಿಂತ ಹೆಚ್ಚು ಸ್ಥಾನಗಳನ್ನು ಪಡೆಯುವ ವಿಶ್ವಾಸ ಹೊಂದಿದ್ದು,ತನ್ನ ನೆರವಿಲ್ಲದೆ ಯಾವ ಪಕ್ಷವೂ ಸರ್ಕಾರ ರಚಿಸಲು ಸಾಧ್ಯವಿಲ್ಲ ಎಂದು ಬಲವಾಗಿ ನಂಬಿಕೊಂಡಿದೆ.
ಒಟ್ಟಿನಲ್ಲಿ ಹಲವು ಲೆಕ್ಕಾಚಾರಗಳ ಮಧ್ಯೆ ಬುಧವಾರ ಕರ್ನಾಟಕದ ಇನ್ನೂರಾ ಇಪ್ಪತ್ನಾಲ್ಕು ಕ್ಷೇತ್ರಗಳಿಗೆ ಮತದಾನ ನಡೆಯಲಿದ್ದು,ಗೆಲ್ಲುವವರು ಯಾರು?ಸೋಲುವವರು ಯಾರು?ಎಂಬ ಪ್ರಶ್ನೆಗೆ ಉತ್ತರ ಪತ್ರಿಕೆ ಸಿದ್ಧವಾಗಲಿದ್ದು,ಮತಪೆಟ್ಟಿಗೆಯಲ್ಲಿ ಭದ್ರವಾಗಲಿದೆ.
