ಬೆಂಗಳೂರು:
ರಾಜ್ಯದಲ್ಲಿ ಪ್ರೀಮಿಯಂ ಮದ್ಯದ ದರ ಇಳಿಸಿ, ಬಿಯರ್ ದರ ಹೆಚ್ಚಿಸಿ ರಾಜ್ಯ ಸರ್ಕಾರ ಅಧಿಕೃತ ಅಧಿಸೂಚನೆ ಹೊರಡಿಸಿದೆ. ಮಂಗಳವಾರದಿಂದ ಕಡಿಮೆ ಬೆಲೆಯಲ್ಲಿ ಪ್ರೀಮಿಯಂ ಮದ್ಯಗಳು ಲಭ್ಯವಾಗಿವೆ. ಪ್ರೀಮಿಯಂ ಮದ್ಯದ ಮೇಲೆ ಗರಿಷ್ಠ 600 ರೂ.ವರೆಗೆ ದರ ಇಳಿಯಾಗಿದೆ.
ರಾಜ್ಯದಲ್ಲಿ 32ಕ್ಕಿಂತ ಅಧಿಕ ಮದ್ಯ ತಯಾರಿಕಾ ಕಂಪನಿಗಳು ಬ್ರ್ಯಾಂಡ್ನಡಿ ಮದ್ಯ ತಯಾರಿಸಿ ಸರ್ಕಾರಕ್ಕೆ ಮಾರಾಟ ಮಾಡುತ್ತಿವೆ. ಬ್ರ್ಯಾಂಡ್ಗಳ ಬೆಲೆಯ ಅನುಸಾರ 18 ಸ್ಲ್ಯಾಬ್ಗಳಾಗಿ ವಿಂಗಡಿಸಲಾಗಿದೆ. 1ರಿಂದ 5ನೇ ಸ್ಲ್ಯಾಬ್ವರೆಗಿನ ಶೇ.75, 6ರಿಂದ 12ನೇ ಸ್ಲ್ಯಾಬ್ವರೆಗಿನ ಸೆಮಿ ಪ್ರೀಮಿಯಂ ಮದ್ಯಗಳಿಂದ ಶೇ.20 ಹಾಗೂ 13ರಿಂದ 18ವರೆಗಿನ ಸ್ಲ್ಯಾಬ್ಗಳ ಪ್ರೀಮಿಯಂ ವಿದೇಶಿ ಮದ್ಯಗಳಿಂದ ಶೇ.5 ಆದಾಯ ಸರ್ಕಾರಕ್ಕೆ ಬರುತ್ತದೆ.
ನೆರೆ ರಾಜ್ಯಗಳಿಗೆ ಹೋಲಿಸಿದರೆ ರಾಜ್ಯದಲ್ಲಿ ಪ್ರೀಮಿಯಂ ಸ್ಲ್ಯಾಬ್ ಮದ್ಯದ ದರ ದುಬಾರಿಯಾಗಿತ್ತು. ಈ ಕಾರಣಕ್ಕೆ ದೊಡ್ಡ ಪ್ರಮಾಣದಲ್ಲಿ ನೆರೆಯ ರಾಜ್ಯಗಳಿಂದ ರಾಜ್ಯಕ್ಕೆ ಅಕ್ರಮವಾಗಿ ಮದ್ಯ ಪೂರೈಕೆಯಾಗುತ್ತಿತ್ತು. ಗಡಿ ಭಾಗದ ಜಿಲ್ಲೆಗಳ ಜನರು, ನೆರೆಯ ರಾಜ್ಯಗಳಿಗೆ ತೆರಳಿ ಖರೀದಿಸುತ್ತಿದ್ದರು. ಇದರಿಂದಾಗಿ ಸರ್ಕಾರಕ್ಕೆ ನೂರಾರು ಕೋಟಿ ನಷ್ಟವಾಗುತ್ತಿತ್ತು. ಮಾರಾಟ ಹೆಚ್ಚಿಸಿ ಆದಾಯ ಗಳಿಸುವ ಉದ್ದೇಶದಿಂದ ಸರ್ಕಾರ, ಹೆಚ್ಚುವರಿ ಅಬಕಾರಿ ಸುಂಕ (ಇಎಡಿ) ಪರಿಷ್ಕರಿಸಿ ಪ್ರೀಮಿಯಂ ಮದ್ಯದ ದರ ಇಳಿಸಿದೆ.
ಗರಿಷ್ಠ 600 ರೂ. ಇಳಿಕೆ
ಫುಲ್ ಬಾಟಲ್ ರಮ್, ವಿಸ್ಕಿ, ಬ್ರಾಂಡಿಗಳ ಮೇಲೆ ಗರಿಷ್ಠ 500-600 ರೂ.ವರೆಗೆ ದರ ಕಡಿಮೆ ಇತರ ಪ್ರೀಮಿಯಂ ಮದ್ಯದ ಬಾಟಲ್ಗಳ ಮೇಲೆ ಕನಿಷ್ಠ 400 ರೂ.ನಿಂದ ಗರಿಷ್ಠ 600 ರೂ. ಇಳಿಕೆ 18 ಸ್ಲ್ಯಾಬ್ಗಳ ಸಂಖ್ಯೆಯನ್ನು 16ಕ್ಕೆ ಇಳಿಸಲಾಗಿದೆ. ಮೊದಲ 3 ಸ್ಲ್ಯಾಬ್ಗಳಲ್ಲಿ ದರ ವ್ಯತ್ಯಸವಾಗಿಲ್ಲ 4ನೇ ಸ್ಲ್ಯಾಬ್ನಲ್ಲಿ ಮದ್ಯದ ದರ ಸ್ವಲ್ಪ ಏರಿಕೆ. 5ನೇ ಸ್ಲ್ಯಾಬ್ನಿಂದ 16ನೇ ಸ್ಲ್ಯಾಬ್ವರೆಗೆ ದರ ಇಳಿಕೆ
ಸತತ 4ನೇ ಬಾರಿ ಬಿಯರ್ ಬೆಲೆ ಹೆಚ್ಚಳ
ಕಾಂಗ್ರೆಸ್ ಸರ್ಕಾರ ಸತತ 4ನೇ ಬಾರಿ ಬಿಯರ್ ದರ ಹೆಚ್ಚಿಸಿದೆ. 2023ರ ಜುಲೈನಲ್ಲಿ ಮಂಡಿಸಿದ್ದ ಬಜೆಟ್ನಲ್ಲಿಯೂ ಐಎಂಎಲ್ ಮೇಲೆ ಶೇ.20 ಮತ್ತು ಬಿಯರ್ ಮೇಲೆ ಶೇ.10 ಸುಂಕ ಹೆಚ್ಚಿಸಿತ್ತು. ಇದಕ್ಕೂ ಮುನ್ನ ರಾಜ್ಯದಲ್ಲಿ ತಯಾರಿಸಲಾದ ಅಥವಾ ಆಮದು ಮಾಡಿಕೊಳ್ಳುವ ಬಿಯರ್ ಮೇಲೆ ಹೆಚ್ಚುವರಿ ಸುಂಕವನ್ನು ಶೇ.10 ಹೆಚ್ಚಿಸಲಾಗಿತ್ತು. ಇದೀಗ 180 ಎಂಎಲ್ ಬಿಯರ್ ಮೇಲೆ 20 ರೂ. ಹೆಚ್ಚಿಸಲಾಗಿದೆ. ಶೇ.5ಕ್ಕಿಂತ ಕೆಳಗೆ ಅಲ್ಕೋಹಾಲ್ ಪ್ರಮಾಣವಿದ್ದರೆ ಒಂದು ತೆರಿಗೆ, ಶೇ.5ರಿಂದ ಶೇ.6.5ರವರೆಗೆ ಮತ್ತು ಶೇ.6.5ರಿಂದ ಶೇ.8ರವರೆಗೆ ಅಲ್ಕೋಹಾಲ್ ಪ್ರಮಾಣದಲ್ಲಿ ಒಂದು ಬಗೆಯ ತೆರಿಗೆ ಇರಲಿದೆ.