ಮತಾಂತರ ನಿಷೇಧಕ್ಕೆ ಕೆಳಮನೆ ಅಸ್ತು

ಬೆಳಗಾವಿ:


ಬಹುಚರ್ಚಿತ ಮತಾಂತರ ನಿಷೇಧ ಕಾಯ್ದೆ ವಿಧಾನಸಭೆಯಲ್ಲಿ ಅಂಗೀಕಾರವಾಗಿದ್ದು ಪ್ರತಿಪಕ್ಷಗಳ ಭಾರೀ ಪ್ರತಿಭಟನೆ ನಡುವೆಯೂ ಧ್ವನಿ ಮತದ ಮುಖಾಂತರ ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ವಿಧೇಯಕ 2021ಕ್ಕೆ ಅನುಮೋದನೆ ದೊರೆತಿದೆ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಖಾತ್ರಿ ಪಡಿಸಿದ್ದು ಇಂದೇ ವಿಧಾನಪರಿಷತ್‍ನಲ್ಲಿ ವೀಧೇಯಕಕ್ಕೆ ಅನುಮೋಧನೆ ದೊರೆಯುವ ವಿಶ್ವಾಸವನ್ನು ಸರ್ಕಾರ ವ್ಯಕ್ತಪಡಿಸಿದೆ.

ಡಿಸಂಬರ್ 21 ರಂದು ವಿಧಾನಸಭೆಯಲ್ಲಿ ಗೃಹಸಚಿವ ಅರಗ ಜ್ಞಾನೇಂದ್ರ ವಿಧೇಯಕ ಮಂಡಿಸಿದ್ದರು ಅಂದಿನಿಂದ ಆರಂಭವಾಗಿದ್ದ ವಾದ ಪ್ರತಿವಾದಗಳು ಗುರುವಾರ ಕೂಡ ಮುಂದುವರೆದು ಅಂತಿಮವಾಗಿ ವಿಧೇಯಕ ಅಂಗೀಕಾರವಾಗಿದೆ. ಇಂದು ಚಳಿಗಾಲದ ಅಧಿವೇಶನದ ಕೊನೆಯ ದಿನವಾಗಿದ್ದು ವೀಧೇಯಕವನ್ನು ಪರಿಷತ್‍ನಲ್ಲಿ ಮಂಡಿಸುವ ಸಾಧ್ಯತೆ ಇದೆ.

ಆರ್ ಎಸ್‍ಎಸ್ ಪ್ರಸ್ತಾಪಿಸಿದ ಸಿದ್ಧರಾಮಯ್ಯ:

ಕಲಾಪ ಆರಂಭದಿಂದಲೇ ಮಾತನಾಡಿದ ಸಿದ್ಧರಾಮಯ್ಯ ವಿಧೇಯಕದ ಕುರಿತು ತಮ್ಮ ಅಸಮಧಾನ ವ್ಯಕ್ತಪಡಿಸುತ್ತಾ ಬಂದಿದ್ದರು. ವಿಧೇಯಕದ ಹಿಂದೆ ಕಾಣದ ಕೈಗಳ ಕೈವಾಡವಿದೆ ಎಂದು ಸರ್ಕಾರವನ್ನು ಕುಟುಕಿದರು. 2009 ರಲ್ಲಿ ಬಿ.ಎಸ್. ಯಡಿಯೂರಪ್ಪ ರಾಜ್ಯದ ಮುಖ್ಯಮಂತ್ರಿ ಆಗಿದ್ದಾಗ ಬಿಜೆಪಿ ಬೆಂಬಲಿತ ಚಿಂತಕರು ಮಧ್ಯಪ್ರದೇಶ ಮಾದರಿಯಲ್ಲಿ ಮತಾಂತರ ನಿಷೇಧ ವಿಧೇಯಕ ಜಾರಿಗೆ ತರುವಂತೆ ಕೋರಿದ್ದರು.

ಮಧ್ಯಪ್ರದೇಶ ತೆಗೆದು ಕರ್ನಾಟಕ ಎಂದು ಸೇರಿಸಿದರೆ ಸಾಕು ಎಂದು ಮನವಿ ಪತ್ರದಲ್ಲೇ ಉಲ್ಲೇಖಿಸಲಾಗಿತ್ತು, ಹೀಗಾಗಿ ಮತಾಂತರ ನಿಷೆಧ ವಿಧೇಯಕ ಜಾರಿಯ ಹಿಂದೆ ಆರ್ ಎಸ್‍ಎಸ್ ಕೈವಾಡ ಇದೆ ಎಂದು ಆರೋಪಿಸಿದರು. ಇಂಥ ಅಮಾನವೀಯ ಕಾನೂನು ಜಾರಿಗೆಗೆ ನಮ್ಮ ವಿರೋಧ ಎಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಬಿಎಸ್‍ವೈ ತಿರುಗೇಟು:
ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಯಡಿಯೂರಪ್ಪ ಹೌದು, ಸಿದ್ದರಾಮಯ್ಯ ಮಾಡುತ್ತಿರುವ ಆರೋಪ ನೂರಕ್ಕೆ ನೂರರಷ್ಟು ಸತ್ಯವಿದೆ. 2009ರಲ್ಲೇ ಕೆಲ ಚಿಂತಕರು ನನಗೆ ಮನವಿ ಸಲ್ಲಿಸಿದ್ದು ನಿಜ. ಆಗಿನಿಂದಲೂ ಈ ವಿಧೇಯಕ ಜಾರಿಗೆ ತರಲು ನಾವು ಚಿಂತನೆ ನಡೆಸುತ್ತಿದ್ದೇವೆ. ಆದರೆ ಸಿದ್ದರಾಮಯ್ಯನವರು ಕೂಡ 2016ರಲ್ಲಿ ಈ ಕಾನೂನು ಜಾರಿಗೆಗೆ ಕರಡು ಸಿದ್ದಪಡಿಸಲು ಸೂಚಿಸಿ, ಸಹಿ ಕೂಡ ಮಾಡಿದ್ದರು.

ಸಚಿವ ಸಂಪುಟ ಸಭೆಯ ಮುಂದೆ ಬರುವ ತನಕ ಎಲ್ಲ ಪ್ರಕ್ರಿಯೆಗಳು ಮುಗಿದಿದ್ದವು. ಕೊನೆ ಕ್ಷಣದಲ್ಲಿ ಈ ವಿಧೇಯಕವನ್ನು ಒಯ್ಯದೇ ಡ್ರಾಪ್ ಮಾಡಿದ್ದೀರಿ. ನೀವೇ ಸಿದ್ಧಪಡಿಸಿರುವ ವಿಧೇಯಕದಲ್ಲಿ ಕೆಲವು ಅಂಶಗಳನ್ನು ನಾವು ಸೇರಿಸಿ, ಇದೀಗ ಮಂಡನೆ ಮಾಡಿದ್ದೇವೆ. ಸರ್ವ ಸದಸ್ಯರು ಅಂಗೀಕಾರ ಮಾಡಬೇಕು ಎಂದು ಕೋರಿದರು.

 

ಸಿದ್ಧರಾಮಯ್ಯ ಆರೋಪಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಸಚಿವ ಈಶ್ವರಪ್ಪ ಬಿಜೆಪಿ ಆರ್‍ಎಸ್ ಎಸ್ ಎರಡೂ ಕೂಡ ಒಂದೇ, ನಾವು ಆರ್‍ಎಸ್‍ಎಸ್ ಹೇಳಿದ್ದನ್ನೇ ಮಾಡುತ್ತೇವೆ ನಾವು ಯಾರ ತಂಟೆಗೆ ಹೋಗುವುದಿಲ್ಲ ನಮ್ಮ ತಂಟೆಗೆ ಬಂದವರನ್ನು ಚಿಂದಿ ಚಿಂದಿ ಮಾಡಿಯೇ ತೀರುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇನ್ನು ಚರ್ಚೆಗೆ ಉತ್ತರ ಕೊಡುವಂತೆ ಗೃಹಸಚಿವರಿಗೆ ಸ್ಪೀಕರ್ ಸೂಚಿಸಿದರು. ಸದನದಲ್ಲಿ ಭಾರತ್ ಮಾತಾ ಕೀ ಜೈ, ಜೈ ಶ್ರೀ ರಾಂ ಘೋಷಣೆಗಳನ್ನು ಬಿಜೆಪಿ ಸದಸ್ಯರು ಮೊಳಗಿಸಿದರು.

ಈ ಹಂತದಲ್ಲಿ ಮಧ್ಯಪ್ರವೇಶಿಸಿದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಚರ್ಚೆ ಮಾಡಲು ಇನ್ನೇನೂ ಉಳಿದಿಲ್ಲ. ಮುಖ್ಯಮಂತ್ರಿ ಉತ್ತರ ಕೇಳಿ, ವಿಧೇಯಕ ಪಾಸ್ ಮಾಡಿ ಎಂದು ಆಗ್ರಹಿಸಿದರು. . ‘ಪ್ರತಿಪಕ್ಷಗಳು ಸಭಾತ್ಯಾಗ ಮಾಡಲೆಂದೇ ಬಾವಿಗೆ ಇಳಿದಿದ್ದಾರೆ. ನೀವು ಯಾಕೆ ಅವರ ಬಗ್ಗೆ ತಲೆ ಕೆಡಿಸಿಕೊಳ್ತೀರಾ ಎಂದು ಸ್ಪೀಕರ್‍ಗೆ ಯಡಿಯೂರಪ್ಪ ಹೇಳಿದರು.ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ಹಾಗೂ ಅನುಮೋದನೆ ಕೋರಿಕೆಯ ನಂತರ ವಿಧೇಯಕವನ್ನು ಸ್ಪೀಕರ್ ಮತಕ್ಕೆ ಹಾಕಿದರು. ಗದ್ದಲ, ಕೋಲಾಹಲದ ನಡುವೆಯೇ ವಿಧಾನಸಭೆಯಲ್ಲಿ ಧ್ವನಿಮತದ ಮೂಲಕ ವಿಧೇಯಕ ಅಂಗೀಕಾರವಾಯಿತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap