ಡಿಸಿಎಂ ಕ್ಷಮೆಯಾಚನೆಗೆ ಸಾಹಿತಿಗಳ ಆಗ್ರಹ ….!!

ಬೆಂಗಳೂರು:

    ಕೆಪಿಸಿಸಿ ಕಚೇರಿಯಲ್ಲಿ ಸಾಹಿತ್ಯ, ಸಂಸ್ಕೃತಿ ಮತ್ತು ಇತರ ಅಕಾಡೆಮಿಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳನ್ನು ಕರೆಸಿಕೊಂಡು ಸಭೆ ನಡೆಸಿದ ಬಳಿಕ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ನೀಡಿದ ಹೇಳಿಕೆಯನ್ನು ಸಾಹಿತಿಗಳ ಗುಂಪೊಂದು ಖಂಡಿಸಿದೆ.

    ಸಭೆಯ ನಂತರ ಮಾತನಾಡಿದ್ದ ಶಿವಕುಮಾರ್, ಸಾಹಿತಿಗಳು ಕೂಡ ರಾಜಕಾರಣಿಗಳು, ಸರ್ಕಾರದಿಂದ ನೇಮಕಗೊಂಡವರು. ಹೀಗಾಗಿ, ಪಕ್ಷದ ಕಚೇರಿಯಲ್ಲಿ ಸಭೆ ನಡೆಸುವುದರಲ್ಲಿ ಯಾವುದೇ ತಪ್ಪಿಲ್ಲ. ಅವರು (ಸಾಹಿತಿ–ಕಲಾವಿದರು) ರಾಜಕಾರಣಿಗಳೇ ಆಗಿದ್ದಾರೆ ಮತ್ತು ಅವರು ರಾಜಕೀಯಕ್ಕೆ ಪ್ರವೇಶಿಸಬಾರದು ಅನ್ನುವುದೇನಿಲ್ಲ ಎಂದಿದ್ದರು.

    ಈ ಕುರಿತು ಬಹಿರಂಗ ಪತ್ರ ಬರೆದಿರುವ 20 ಲೇಖಕರು ಮತ್ತು ಸಾಹಿತಿಗಳ ಗುಂಪು ಶಿವಕುಮಾರ್ ಅವರ ಹೇಳಿಕೆಯನ್ನು ಖಂಡಿಸಿದೆ ಮತ್ತು ಅವರು ಕ್ಷಮೆಯಾಚಿಸಬೇಕೆಂದು ಕೋರಿದೆ.

    ‘ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಹೇಳಿಕೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಇತರ ಸಚಿವರು ಒಪ್ಪುತ್ತಾರೆಯೇ ಎಂಬುದನ್ನು ತಿಳಿಯಲು ನಾವು ಬಯಸುತ್ತೇವೆ. ಈ ಹೇಳಿಕೆ ಆಘಾತಕಾರಿಯಾಗಿದೆ’ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.

    ಅವರು (ಡಿಕೆಎಸ್) ಕ್ಷಮೆ ಕೇಳಬೇಕು. ಬರಹಗಾರರು ಮತ್ತು ಸಾಹಿತಿಗಳು ಯಾವುದೇ ರಾಜಕೀಯ ಪಕ್ಷದ ಅನುಯಾಯಿಗಳಲ್ಲ. ಪ್ರಗತಿಪರ ಚಿಂತಕರು ಸರ್ಕಾರದ ಮುಲಾಜಿಗೆ ಒಳಗಾಗಿದ್ದಾರೆ ಎಂದು ಅವರು ಭಾವಿಸಿದರೆ ಅದು ಅವರ ಮೂರ್ಖತನ. ಉಪ ಮುಖ್ಯಮಂತ್ರಿಗಳ ಇದೇ ಧೋರಣೆ ಮುಂದುವರಿದರೆ ಪ್ರಗತಿಪರ ಚಿಂತಕರು ಮೋದಿ ಸರ್ಕಾರಕ್ಕೆ ಅಸಹಕಾರ ತೋರಿದಂತೆ ರಾಜ್ಯ ಸರ್ಕಾರಕ್ಕೂ ಅಸಹಕಾರ ವ್ಯಕ್ತಪಡಿಸುವ ಅನಿವಾರ್ಯತೆ ಎದುರಾಗಲಿದೆ ಎಂದಿದ್ದಾರೆ. 

   ‘ಅಕಾಡೆಮಿಗಳು ಮಂಡಳಿಗಳು ಮತ್ತು ನಿಗಮಗಳಂತಲ್ಲ. ಅವು ಸ್ವಾಯತ್ತ ಸಂಸ್ಥೆಗಳಾಗಿದ್ದು, ಸರ್ಕಾರವೇ ಅವುಗಳ ಮುಖ್ಯಸ್ಥರು ಮತ್ತು ಸದಸ್ಯರನ್ನು ನೇಮಿಸಿದರೂ, ಆಯಾ ಕ್ಷೇತ್ರಗಳಲ್ಲಿ ಅವರ ಸಾಧನೆಗಳ ಆಧಾರದ ಮೇಲೆ ನೇಮಕಾತಿಗಳನ್ನು ಮಾಡಲಾಗುತ್ತದೆ’ ಎಂದು ಅವರು ಹೇಳಿದರು.

   ಪತ್ರಕ್ಕೆ ಎಚ್ಎಸ್ ಅನುಪಮಾ, ರೆಹಮತ್ ತರೀಕೆರೆ, ಎಚ್ಎಸ್ ರಾಘವೇಂದ್ರ ರಾವ್, ಕೇಸರಿ ಹರವು, ಚಂದ್ರಶೇಖರ್ ವಡ್ಡು, ಬಿ ಸುರೇಶ ಮತ್ತು ವಿಪಿ ನಿರಂಜನಾರಾಧ್ಯ ಸೇರಿದಂತೆ ಹಲವು ಸಾಹಿತಿಗಳು ಮತ್ತು ಶಿಕ್ಷಣ ತಜ್ಞರು ಸಹಿ ಮಾಡಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap