ಡೆಂಘಿ ಜ್ವರ : ತಡೆಗೆ ಬೃಹತ್‌ ಅಭಿಯಾನ : ದಿನೇಶ್‌ ಗುಂಡೂರಾವ್‌

ಮಂಗಳೂರು:

    ಡೆಂಘಿ ಜ್ವರಕ್ಕೆ ಕಾರಣವಾಗುವ ಈಡಿಸ್ ಸೊಳ್ಳೆ ಉತ್ಪತ್ತಿ ತಾಣಗಳ ನಾಶಪಡಿಸುವ ಬೃಹತ್ ಅಭಿಯಾನಕ್ಕೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಂಗಳೂರಿನಲ್ಲಿ ಇಂದು ಚಾಲನೆ ನೀಡಿದರು. ಮಂಗಳೂರಿನಲ್ಲಿ ಆರೋಗ್ಯ ಕಾರ್ಯಕರ್ತರೊಂದಿಗೆ ಮನೆಗಳಿಗೆ ಭೇಟಿ ನೀಡಿದ ಸಚಿವರು, ನೀರು ನಿಂತ ಸ್ಥಳಗಳಲ್ಲಿ ಈಡಿಸ್ ಸೊಳ್ಳೆಯ ಉತ್ಪತ್ತಿ ತಾಣಗಳನ್ನ ಪರಿಶೀಲಿಸಿದರು.‌

    ಮನೆಗಳ ಅಕ್ಕಪಕ್ಕದಲ್ಲಿರುವ ತೆಂಗಿನ ಚಿಪ್ಪು, ಟಬ್ ಗಳು, ಟಯರ್ ಸೇರಿದಂತೆ ಮನೆಯ ಮಹಡಿ ಮೇಲೆ ನಿಂತಿರುವ ನೀರಿನಲ್ಲಿ ಈಡಿಸ್ ಸೊಳ್ಳೆಯ ಲಾರ್ವಾಗಳು ಉತ್ಪತ್ತಿಯಾಗಿರುವ ಸ್ಥಳಗಳನ್ನ ಪರಿಶೀಲಿಸಿದ ಸಚಿವರು, ಲಾರ್ವಾ ನಾಶಪಡಿಸಲು ಆರೋಗ್ಯ ಇಲಾಖೆ ಸಿಬ್ಬಂದಿಗಳು ಕೈಗೊಳ್ಳುತ್ತಿರುವ ಕ್ರಮಗಳನ್ನ ವೀಕ್ಷಿಸಿದರು. ಈ ಬಗ್ಗೆ ಎಚ್ಚರಿಕೆ ವಹಿಸುವಂತೆ ಸ್ಥಳೀಯ ನಿವಾಸಿಗಳಿಗೆ ಸಲಹೆ ನೀಡಿದರು.‌  

    ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ದಿನೇಶ್ ಗುಂಡೂರಾವ್, ಡೆಂಗಿ ನಿಯಂತ್ರಣಕ್ಕೆ ಈಡಿಸ್ ಸೊಳ್ಳೆಯ ಉತ್ಪತ್ತಿ ತಾಣಗಳನ್ನ ನಾಶಪಡಿಸುವ ನಿಟ್ಟಿನಲ್ಲಿ ಪ್ರತಿ ಶುಕ್ರವಾರ ಆರೋಗ್ಯ ಇಲಾಖೆ ಅಭಿಯಾನದ ರೀತಿಯಲ್ಲಿ ಕಾರ್ಯಕ್ರಮವನ್ನ ಹಾಕಿಕೊಂಡಿದೆ.ಸಾರ್ವಜನಿಕರು ಇಲಾಖೆಯೊಂದಿಗೆ ಕೈಜೋಡಿಸಬೇಕು. ಆರೋಗ್ಯ ಸಿಬ್ಬಂದಿಗಳು ಪ್ರತಿ ಮನೆಗಳಿಗೆ ತೆರಳಿ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಜನರು ತಮ್ಮ ಮನೆಯ ಸುತ್ತಮುತ್ತಲಿನ ಸ್ಥಳಗಳಲ್ಲಿ ನೀರು ನಿಲ್ಲದಂತೆ ಎಚ್ವರಿಕೆ ವಹಿಸುವುದು ಅಗತ್ಯ. ಈಡಿಸ್ ಸೊಳ್ಳೆಯ ಉತ್ಪತ್ತಿ ತಾಣಗಳನ್ನ ಪತ್ತೆ ಹಚ್ಚಿ ಅದನ್ನ ನಾಶಪಡಿಸುವ ಕಾರ್ಯ ನಡೆಯುತ್ತಿದೆ ಎಂದರು.

   ಡೆಂಗಿ ಜ್ವರ ಹೆಚ್ಚು ಕಂಡುಬಂದಿರುವ ಹಾಟ್ ಸ್ಪಾಟ್ ಗಳನ್ನ ಗುರುತಿಸಿ, ಫೀವರ್ ಕ್ಲಿನಿಕ್ ಗಳನ್ನ ತೆರಯಲು ಸೂಚಿಸಲಾಗಿದೆ. ಇಂಥಹ ಸ್ಥಳಗಳಲ್ಲಿ ಯಾರಿಗೆ ಜ್ವರ ಬಂದರು ಡೆಂಗಿ ಟೆಸ್ಟಿಂಗ್ ನಡೆಸಿ ಸಾಧ್ಯವಾದಷ್ಟು ಮುಂಚಿತವಾಗಿಯೇ ಪತ್ತೆ ಮಾಡಿ ಚಿಕಿತ್ಸೆ ಒದಗಿಸಲು ಸೂಚಿಸಲಾಗಿದೆ. ಇದರಿಂದ ಸಾವುಗಳನ್ನ ತಡೆಯಲು ಸಾಧ್ಯ. ಡೆಂಗಿ ನಿಯಂತ್ರಣದಲ್ಲಿ ಆರೋಗ್ಯ ಇಲಾಖೆ ಜೊತೆಗೆ ಗ್ರಾಮೀಣಾಭಿವೃದ್ದಿ ಇಲಾಖೆ, ಜಿಲ್ಲಾಡಳಿತ, ಸ್ಥಳೀಯ ಪಾಲಿಕೆ ಅಧಿಕಾರಿಗಳು ಹಾಗೂ ಶಿಕ್ಷಕರನ್ನ ಬಳಸಿಕೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು.‌

Recent Articles

spot_img

Related Stories

Share via
Copy link
Powered by Social Snap