ಇತ್ತ ಎರಡು ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್,ಬಿಜೆಪಿ ಹಾಗೂ ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಗೆ ಈ ಬಾರಿಯ ಚುನಾವಣೆ ಪ್ರತಿಷ್ಠೆಯ ಕಣವಾಗಿದ್ದು, ಹಲವು ತಂತ್ರಗಾರಿಕೆ ಹಾಗೂ ಬೃಹತ್ ರೋಡ್ ಶೋ ಮೂಲಕ ಘಟಾನುಘಟಿ ರಾಜಕೀಯ ನಾಯಕರು ನಾಮಪತ್ರ ಸಲ್ಲಿಸಿದ್ದಾರೆ.
ಈ ಬಾರಿಯ ಚುನಾವಣೆಯನ್ನ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ರಾಮನಗರ ಜಿಲ್ಲೆಯ ಕನಕಪುರದಲ್ಲಿ ಸೋಮವಾರ ನಾಮಪತ್ರ ಸಲ್ಲಿಸಿದ್ದಾರೆ. ಈ ವೇಳೆ ಜನಸಾಗರವೇ ಹರಿದು ಬಂದಿದೆ. ಕನಪುರದಲ್ಲಿ ನಾಮಪತ್ರ ಸಲ್ಲಿಕೆಗೂ ಮೊದಲು ಪ್ರಸಿದ್ದ ಕೆಂಕೇರಮ್ಮ ದೇವಸ್ಥಾನದಲ್ಲಿ ಡಿಕೆ ಶಿವಕುಮಾರ್, ಸಂಸದ ಡಿಕೆ ಸುರೇಶ್ ಹಾಗೂ ಕುಟುಂಬಸ್ಥರು ವಿಶೇಷ ಪೂಜೆ ಸಲ್ಲಿಸಿದರು.
ಬಿಜೆಪಿಯಿಂದ ಆರ್ ಅಶೋಕ್ ಅವರನ್ನ ಕಣಕ್ಕಿಳಿಸಿರುವ ರಾಜ್ಯ ಬಿಜೆಪಿ ನಾಯಕರ ವಿರುದ್ದ ಡಿ ಕೆ ಶಿವಕುಮಾರ್ ಅವರು ತಮ್ಮ ಶಕ್ತಿ ಪ್ರದರ್ಶನವನ್ನ ತೋರಿಸಿದ್ದು, ಬೃಹತ್ ರೋಡ್ ಶೋ ಮೂಲಕ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ನೆರೆದಿದ್ದ ಅಪಾರ ಜನಸ್ತೋಮ ಡಿಕೆಶಿ ಪರ ಘೋಷಣೆಯನ್ನು ಕೂಗಿದ್ದಾರೆ. ವರುಣಾದಿಂದ ವಿ ಸೋಮಣ್ಣ ನಾಮಪತ್ರ ಸಲ್ಲಿಕೆ ಮೈಸೂರಿನಲ್ಲಿ ವರುಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ವಿ. ಸೋಮಣ್ಣ ನಾಮಪತ್ರ ಸಲ್ಲಿಸಿದರು. ಇದಕ್ಕೂ ಮುನ್ನಾ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ, ಚಾಮುಂಡೇಶ್ವರಿ ತಾಯಿಯ ಆಶೀರ್ವಾದ ಪಡೆಯಲಾಯಿತು. ಈ ವೇಳೆ ಮೈಸೂರು ಸಂಸದರಾದ ಪ್ರತಾಪ್ ಸಿಂಹ ಮತ್ತಿತರರು ಉಪಸ್ಥಿತರಿದ್ದರು.
ಈ ವೇಳೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸೋಮಣ್ಣ ಅವರಿಗೆ ಸಾಥ್ ನೀಡಿದರು. ಹೈವೋಲ್ಟೇಜ್ ಕ್ಷೇತ್ರವಾದ ವರುಣಾದಲ್ಲಿ ಪಕ್ಷದ ಅಭ್ಯರ್ಥಿ ಪರ ಬೊಮ್ಮಾಯಿ ಮತಯಾಚನೆ ಮಾಡಿದರು