ರಾಮನಗರಂ ಹೆಸರು ಬದಲಾವಣೆ : ಡಿ ಕೆ ಎಸ್‌ ಕನಸಿಗೆ ಕೇಂದ್ರದಿಂದ ತಣ್ಣೀರು …!

ಬೆಂಗಳೂರು: 

   ಮಹತ್ವದ ಬೆಳವಣಿಗೆಯೊಂದರಲ್ಲಿ ರಾಮನಗರವನ್ನು ‘ಬೆಂಗಳೂರು ದಕ್ಷಿಣ’ ಜಿಲ್ಲೆ ಎಂದು ಮರುನಾಮಕರಣ ಮಾಡುವ ರಾಜ್ಯ ಸರ್ಕಾರದ ಪ್ರಸ್ತಾಪವನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದೆ. ಇದರಿಂದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಕನಸಿಗೆ ಬ್ರೇಕ್‌ ಬಿದ್ದಂತಾಗಿದೆ. ರಾಮನಗರ ಜಿಲ್ಲೆಗೆ ಬೆಂಗಳೂರು ದಕ್ಷಿಣ ಎಂದು ಮರುನಾಮಕರಣ ಮಾಡಲು ಕರ್ನಾಟಕ ಸರ್ಕಾರ ಮುಂದಾಗಿತ್ತು. ಈ ಕುರಿತು ರಾಜ್ಯ ಸರ್ಕಾರ ಕೇಂದ್ರಕ್ಕೆ ಪ್ರಸ್ತಾವವನ್ನೂ ಕೂಡ ಸಲ್ಲಿಸಿತ್ತು. ಆದರೆ, ಇದೀಗ ಕೇಂದ್ರ, ರಾಜ್ಯ ಸರ್ಕಾರದ ನಿರ್ಧಾರವನ್ನು ತಿರಸ್ಕರಿಸಿದ್ದರಿಂದ ಡಿ.ಕೆ. ಶಿವಕುಮಾರ್ ಅವರ ಕನಸಿಗೆ ಹಿನ್ನಡೆಯಾಗಿದೆ.

   ಚನ್ನಪಟ್ಟಣ ಉಪ ಚುನಾವಣೆ ಸಂದರ್ಭದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ ಅವರು ರಾಮನಗರ ಜಿಲ್ಲೆಗೆ ಮರುನಾಮಕರಣ ಮಾಡುವುದಾಗಿ ಘೋಷಿಸಿದ್ದರು. ಇದು ಕೇಂದ್ರ ಸಚಿವ ಕುಮಾರಸ್ವಾಮಿ ಮತ್ತು ಡಿಕೆ ಶಿವಕುಮಾರ್​ ನಡುವೆ ಮತ್ತೊಂದು ಸುತ್ತಿನ ವಾಕ್ಸಮರಕ್ಕೆ ಕಾರಣವಾಗಿತ್ತು. ಡಿ.ಕೆ. ಶಿವಕುಮಾರ್ ಅವರ ಈ ಯೋಚನೆ ತಮ್ಮ ಬೇನಾಮಿ ಆಸ್ತಿ ಸಕ್ರಮ ಮಾಡಿಕೊಳ್ಳುವ ಪ್ಲಾನ್ ಆಗಿದೆ ಎಂದು ಎಚ್​.ಡಿ. ಕುಮಾರಸ್ವಾಮಿ ಅವರು ವಾಗ್ದಾಳಿ ನಡೆಸಿದ್ದರು.

   ರಾಮನಗರ ಮರುನಾಮಕರಣದ ಬಗ್ಗೆ ಈ ಹಿಂದೆ ಪ್ರತಿಕ್ರಿಯಿಸಿದ್ದ ಡಿಸಿಎಂ ಡಿಕೆಶಿ ಅವರು, ನಾವೆಲ್ಲಾ ಬೆಂಗಳೂರಿನವರೇ. ಮೊದಲು ಬೆಂಗಳೂರು ಜಿಲ್ಲೆಗೆ ರಾಮನಗರ ಸೇರಿತ್ತು. ನಂತರ ಪ್ರತ್ಯೇಕ ಜಿಲ್ಲೆಯನ್ನಾಗಿ ಮಾಡಲಾಯಿತು. ಈಗ ರಾಮನಗರ ಬದಲಿಗೆ ಬೆಂಗಳೂರು ದಕ್ಷಿಣ ಜಿಲ್ಲೆಯಾಗಿ ಹೆಸರು ಬದಲಿಸುವಂತೆ ನಿರ್ಧರಿಸಲಾಗಿದೆ. ಇದಕ್ಕೆ ಸಿಎಂ ಕೂಡ ಸಹಮತ ವ್ಯಕ್ತಪಡಿಸಿದ್ದಾರೆ. ಈಗಿರುವ ರಾಮನಗರವೇ ಜಿಲ್ಲಾ ಕೇಂದ್ರವಾಗಿರಲಿದೆ. ಮಾಗಡಿ, ಕನಕಪುರ, ಚನ್ನಪಟ್ಟಣ, ಹಾರೋಹಳ್ಳಿ ಬೆಂಗಳೂರು ದಕ್ಷಿಣ ವ್ಯಾಪ್ತಿಗೆ ಸೇರಲಿವೆ ಎಂದು ತಿಳಿಸಿದ್ದರು. 

   ಇನ್ನು ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣ ಮಾಡುವ ಚಿಂತನೆಗೆ 2024ರ ಜುಲೈನಲ್ಲಿ ಕರ್ನಾಟಕ ಸಚಿವ ಸಂಪುಟವೂ ಅನುಮೋದನೆ ನೀಡಿತ್ತು.

Recent Articles

spot_img

Related Stories

Share via
Copy link