ತುಮಕೂರು:
ಇದೂವರೆಗೂ ಇದ್ದ ಮೀಸಲಾತಿ ಸ್ವರೂಪ ಬದಲಾಯಿಸಿ ತೀರ್ಮಾನಿಸಿರುವ ರಾಜ್ಯ ಬಿಜೆಪಿ ಸರ್ಕಾರ ಮುಸ್ಲಿಂ ಸಮುದಾಯಕ್ಕೆ ಇದ್ದ ಮೀಸಲಾತಿ ಹಕ್ಕನ್ನು ಕಸಿದುಕೊಂಡು ಅನ್ಯಾಯ ಮಾಡಿದೆ. ಮಾನವ ಕಲ್ಯಾಣವನ್ನು ಕಡೆಗಣಿಸಿ ಮಾನವೀಯತೆ ಮರೆತ ಸರ್ಕಾರದ ಧೋರಣೆ ಖಂಡನೀಯ ಎಂದು ಕೆಪಿಸಿಸಿ ವೈದ್ಯಕೀಯ ಘಟಕದ ಕಾರ್ಯದರ್ಶಿ, ತುಮಕೂರು ನಗರ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಡಾ. ಫರ್ಹಾನಾ ಬೇಗಂ ಹೇಳಿದ್ದಾರೆ.
ಕೊರೊನಾ ಸಂದರ್ಭದಲ್ಲಿ ಸಂಕಷ್ಟ ಅನುಭವಿಸಿದ ಮುಸ್ಲಿಂ ಸಮುದಾಯ ಇನ್ನೂ ಚೇತರಿಸಿಕೊಂಡಿಲ್ಲ, ಅವರ ಬದುಕು ಕಷ್ಟದಲ್ಲಿದೆ. ಕೊರೊನಾ ವೇಳೆ ಎಷ್ಟೋ ಜನ ಮೃತರಾಗಿ ಅವರ ಮಕ್ಕಳು ತಬ್ಬಲಿಗಳಾಗಿವೆ. ಇಂತಹ ಮಕ್ಕಳ ಶಿಕ್ಷಣ, ಉದ್ಯೋಗದ ಭವಿಷ್ಯಕ್ಕೆ ರಾಜ್ಯ ಸರ್ಕಾರದ ಹೊಸ ಮೀಸಲಾತಿ ನೀತಿ ಮಾರಕವಾಗಿದೆ ಎಂದು ಹೇಳಿದ್ದಾರೆ.
ಮುಸ್ಲಿಂ ಸಮುದಾಯವನ್ನು ಗುರಿಯಾಗಿಟ್ಟುಕೊಂಡು ಮೀಸಲಾತಿ ನೀತಿ ರೂಪಿಸಲಾಗಿದೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಹಿಜಾಬ್, ಆಜಾನ್, ಹಲಾಲ್ ಬಗ್ಗೆ ಅಪಪ್ರಚಾರ ಮಾಡಿ ಮುಸ್ಲಿಂ ಸಮುದಾಯದ ಸಂಸ್ಕೃತ, ಆಚರಣೆ, ಆರ್ಥಿಕ ಚಟುವಟಿಕೆ ನಿಯಂತ್ರಿಸುವ ದುಷ್ಟ ಪ್ರಯತ್ನಗಳೇ ನಡೆದಿವೆ. ಮುಸ್ಲಿಂಮರು ಎಲ್ಲರೊಂದಿಗೆ ಬಾಳಲು ಬಿಡದೆ ಪ್ರತ್ಯೇಕಿಸುವ ಕುತಂತ್ರ ನಡೆದಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾಡುತ್ತಿರುವ ದ್ರೋಹ ಎಂದು ಆಪಾದಿಸಿದ್ದಾರೆ.
ರಾಜ್ಯದಲ್ಲಿ ಹಿಂದುಳಿದ ಜಾತಿಗಳ ಪ್ರವರ್ಗ 2ಬಿ ನಲ್ಲಿ ಶೇಕಡಾ 4ರಷ್ಟು ಮೀಸಲಾತಿ ಪಡೆಯುತ್ತಿದ್ದ ಮುಸ್ಲಿಂ ಸಮುದಾಯ ಆರ್ಥಿಕವಾಗಿ ಹಿಂದುಳಿದ (ಇ ಡಬ್ಲ್ಯೂ ಎಸ್) ನಲ್ಲಿ ಶೇಕಡಾ 10ರಷ್ಟು ಮೀಸಲಾತಿಯಲ್ಲಿ ನೀಡುವ ಭರವಸೆ ನೀಡಲಾಗಿದೆ. ಆದರೆ ಪ್ರಬಲ ಜಾತಿಗಳ ಪೈಪೋಟಿಯಲ್ಲಿ ಮುಸ್ಲಿಂ ಸಮುದಾಯದವರು ಇಲ್ಲಿ ಮೀಸಲಾತಿ ಸೌಲಭ್ಯ ಪಡೆಯುವುದು ಕಷ್ಟ. ಇದರೊಂದಿಗೆ ಮುಸ್ಲಿಮರನ್ನು ಆರ್ಥಿಕವಾಗಿ, ಶೈಕ್ಷಣಿಕವಾಗಿ ವಂಚಿಸುವ ಪ್ರಯತ್ನ ನಡೆದಿದೆ.
ಮೊದಲಿದ್ದ ಮೀಸಲಾತಿ ರದ್ದುಗೊಳಿಸಿದರೆ ಕೊರೊನಾ ಸಂದರ್ಭದಲ್ಲಿ ಮೃತಪಟ್ಟ ಪೋಷಕರ ಮಕ್ಕಳು ಹಾಗೂ ಬಡವರ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತದೆ. ಈ ನಷ್ಟವನ್ನು ಯಾರು ಭರಿಸುತ್ತಾರೆ? ಎಲ್ಲಾ ಸಮುದಾಯಗಳನ್ನು ಸಮಾನವಾಗಿ ಕಾಣುವ, ಸಮಾನ ಸೌಲಭ್ಯ ನೀಡಬೇಕೆಂಬ ಪ್ರಜಾಪ್ರಭುತ್ವದ ಆಶಯಗಳನ್ನು ಅನುಷ್ಠಾನಗೊಳಿಸಲು ಸರ್ಕಾರ ಕೂಡಲೇ ಹಿಂದಿನ ಮೀಸಲಾತಿ ನೀತಿಯನ್ನು ಮುಂದುವರೆಸಬೇಕು ಎಂದು ಡಾ.ರ‍್ಹಾನಾ ಬೇಗಂ ಒತ್ತಾಯಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ