ಬೆಂಗಳೂರು:
ರಾಜ್ಯಾದ್ಯಂತ ತೀವ್ರ ಸದ್ದು ಮಾಡಿದ್ದ ಬಿಟ್ ಕಾಯಿನ್ ಹಗರಣದ ಪ್ರಮುಖ ಆರೋಪಿ ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿಯನ್ನು ವಿಶೇಷ ತನಿಖಾ ದಳದ (ಎಸ್‌ಐಟಿ) ಅಧಿಕಾರಿಗಳು ಮಂಗಳವಾರ ಬಂಧನಕ್ಕೊಳಪಡಿಸಿದ್ದಾರೆ.
ತುಮಕೂರಿನಲ್ಲಿರುವ ಯೂನೊಕಾಯಿನ್ ಟೆಕ್ನಾಲಜೀಸ್ ಕಂಪನಿಯ ಸರ್ವರ್ ಹ್ಯಾಕ್ ಮಾಡಿ 60.6 ಬಿಟ್ ಕಾಯಿನ್‌ಗಳನ್ನು (ಸದ್ಯದ ಮಾರುಕಟ್ಟೆ ಮೌಲ್ಯ ರೂ.32.48 ಕೋಟಿ ಮೌಲ್ಯ) ಶ್ರೀಕಿ ಕಳ್ಳತನ ಮಾಡಿದ್ದನೆಂಬುದನ್ನು ತಾಂತ್ರಿಕವಾಗಿ ಪತ್ತೆ ಮಾಡಿರುವ ಎಸ್‌ಐಟಿ ಅಧಿಕಾರಿಗಳು, ಆತನನ್ನು ಮಂಗಳವಾರ ಬಂಧಿಸಿದ್ದಾರೆ.
ಆರೋಪಿ ಶ್ರೀಕಿ, 2017ರಲ್ಲಿ ಕೃತ್ಯ ಎಸಗಿದ್ದ. ಈ ಸಂಬಂಧ ಯೂನೊಕಾಯಿನ್ ಟೆಕ್ನಾಲಜೀಸ್ ಕಂಪನಿ ನಿರ್ದೇಶಕ ಬಿ.ವಿ. ಹರೀಶ್ ಅವರು ತುಮಕೂರಿನ ನ್ಯೂ ಎಕ್ಸ್‌ಟೆನ್ಶನ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರ ಹಿನ್ನೆಲೆಯಲ್ಲಿ ಅಪರಿಚಿತರ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು.
ಪ್ರಕರಣದ ತನಿಖೆ ಕೈಗೆತ್ತಿಕೊಂಡು ಪುರಾವೆಗಳನ್ನು ಪರಿಶೀಲಿಸಿದಾಗ, ಶ್ರೀಕಿಯೇ ಆರೋಪಿ ಎಂಬುದು ತಿಳಿದುಬಂದಿತ್ತು.
ಎಸ್ಐಟಿ ಅಧಿಕಾರಿಗಳು ಶ್ರೀಕೃಷ್ಣ ಅಲಿಯಾಸ್ ಶ್ರೀಕಿಯಿಂದ ವಶಪಡಿಸಿಕೊಂಡ ಲ್ಯಾಪ್ ಟಾಪ್ ಅನ್ನು ವೈಜ್ಞಾನಿಕ ವಿಶ್ಲೇಷಣೆಗೆ ಒಳಪಡಿಸಿ ಅದರಲ್ಲಿ ರಹಸ್ಯವಾಗಿ ಅಡಗಿಸಿಟ್ಟಿದ್ದ ಕ್ರಿಪ್ಟೋ ವಿಳಾಸಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದರು. ಈ ವೇಳೆ ಶ್ರೀಕಿ ಎಸಗಿದ ಆರೋಪ ಈ ಮೂಲಕ ಸಾಬೀತಾಗಿತ್ತು.