ನವದೆಹಲಿ:
ಭಾರತೀಯ ಜನತಾ ಪಕ್ಷ ಬುಧವಾರ ದೆಹಲಿಯ ಹೊಸ ಮುಖ್ಯಮಂತ್ರಿಯಾಗಿ ಶಾಲಿಮಾರ್ ಬಾಗ್ ಶಾಸಕಿ ರೇಖಾ ಗುಪ್ತಾಅವರನ್ನು ಘೋಷಿಸಿತು. ಕೇಸರಿ ಪಕ್ಷವು ಘೋಷಣೆ ಮಾಡಿದ ಬೆನ್ನಲ್ಲೇ ಅವರ ಹಳೆಯ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ಭಾರೀ ವೈರಲ್ ಆಗುತ್ತಿದೆ. ಸಾರ್ವಜನಿಕ ವೇದಿಕೆಯೊಂದರಲ್ಲಿ ರೇಖಾ ಗುಪ್ತಾ ಸಿಟ್ಟಿಗೆದ್ದು, ಮೈಕ್ ಕಿತ್ತು, ಪೋಡಿಯಂ ಅನ್ನು ಪುಡಿಗಟ್ಟಿರುವ ವಿಡಿಯೊವೊಂದು ಹರಿದಾಡುತ್ತಿದೆ. ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಸ್ಥಾಯಿ ಸಮಿತಿ ಸದಸ್ಯರ ಚುನಾವಣೆಯ ಸಂದರ್ಭದಲ್ಲಿ ನಡೆದ ಘಟನೆ ಇದಾಗಿದ್ದು, ಇದೀಗ ರೇಖಾ ಗುಪ್ತಾ ಮುಂದಿನ ಸಿಎಂ ಎಂದು ಘೋಷಣೆ ಆಗ್ತಿದ್ದಂತೆ ಈ ವಿಡಿಯೊ ಸದ್ದು ಮಾಡ್ತಿದೆ.
2023ರಲ್ಲಿ ಮುನ್ಸಿಪಲ್ ಕಾರ್ಪೊರೇಷನ್ ಸ್ಥಾಯಿ ಸಮಿತಿ ಸದಸ್ಯರ ಚುನಾವಣೆಯ ವೇಳೆ ರಹಸ್ಯ ಮತದಾನದ ಸಮಯದಲ್ಲಿ ಕೌನ್ಸಿಲರ್‌ಗಳು ತಮ್ಮ ಮೊಬೈಲ್‌ಗಳ ಮೂಲಕ ಮತಪತ್ರಗಳ ಫೊಟೋ ತೆಗೆದುಕೊಳ್ಳುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದಾಗ ಗಲಾಟೆ ನಡೆದಿತ್ತು. ಆಮ್ ಆದ್ಮಿ ಪಕ್ಷ ಮತ್ತು ಭಾರತೀಯ ಜನತಾ ಪಕ್ಷದ ಕೌನ್ಸಿಲರ್‌ಗಳ ನಡುವೆ ಮಾರಾಮಾರಿಯೇ ನಡೆದಿತ್ತು. ಕೊನೆಗೆ ಅಂದು ಬಿಜೆಪಿ ಮೇಯರ್ ಆಗಿದ್ದ ರೇಖಾ ಗುಪ್ತ ವೇದಿಕೆಗೆ ಹತ್ತಿ ಮೈಕ್ ಕಿತ್ತೆಸೆದು, ಪೋಡಿಯಂ ಅನ್ನು ಧ್ವಂಸಗೊಳಿಸಿದ್ದಾರೆ. ಅಷ್ಟೇ ಅಲ್ಲದೇ ಮತಪತ್ರಗಳನ್ನು ಹರಿದು ಮತಪೆಟ್ಟಿಗೆಯನ್ನು ಎಸೆದಿದ್ದಾರೆ.
ಅಂದು ಆಪ್ ಈ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿತ್ತು. ಸೋಲಿನ ನಂತರ ಬಿಜೆಪಿ ಮೇಯರ್ ಅಭ್ಯರ್ಥಿ ರೇಖಾ ಗುಪ್ತಾ ಅವರ ಹತಾಶೆಯನ್ನು ನೋಡಿ. ಸುಪ್ರೀಂ ಕೋರ್ಟ್‌ನ ತೀರ್ಪಿನ ಹೊರತಾಗಿಯೂ, ಸದನದಲ್ಲಿ ರಾತ್ರಿಯಿಡೀ ಗದ್ದಲ ನಡೆಯಿತು. ಧ್ವಂಸಗೊಳಿಸಲಾಯಿತು. ಹಲ್ಲೆ ಮತ್ತು ಗೂಂಡಾಗಿರಿ ಮತ್ತು ಸ್ಥಾಯಿ ಸಮಿತಿಯ ಚುನಾವಣೆ ನಡೆಯಲು ಅವಕಾಶ ನೀಡಲಾಗಿಲ್ಲ ಎಂದಿತ್ತು.
ದೆಹಲಿಯಲ್ಲಿ ಇಂದು ನೂತನ ಮುಖ್ಯಮಂತ್ರಿ ರೇಖಾ ಗುಪ್ತಾ ಹಾಗೂ ಅವರ ಸಚಿವ ಸಂಪುಟ ಆರು ಸಚಿವರ ಪ್ರಮಾಣವಚನ ಕಾರ್ಯಕ್ರಮ ನಡೆಯಲಿದೆ. ರಾಮ್‌ಲೀಲಾ ಮೈದಾನದಲ್ಲಿ ಅದ್ದೂರಿ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ಆಯೋಜಿಸಲಾಗಿದ್ದು, ಪ್ರಧಾನಿ ನರೇಂದ್ರ ಮೋದಿ, ಬಾಲಿವುಡ್ ಸೆಲೆಬ್ರಿಟಿಗಳ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದಾರೆ.
ಇಂದು ರೇಖಾ ಗುಪ್ತಾ ಅವರ ಜೊತೆ ಮಂಜಿಂದರ್ ಸಿರ್ಸಾ, ಆಶಿಶ್ ಸೂದ್, ಪಂಕಜ್ ಕುಮಾರ್ ಸಿಂಗ್, ರವೀಂದರ್ ಇಂದ್ರಜ್ ಸಿಂಗ್, ಕಪಿಲ್ ಮಿಶ್ರಾ ಮತ್ತು ಪರ್ವೇಶ್ ವರ್ಮಾ ಸಂಪುಟ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಸಾಮಾನ್ಯ ಜನರಲ್ಲಿ ದೆಹಲಿಯ ರೈತರು ಮತ್ತು ಲಾಡ್ಲಿ ಬೆಹೆನ್ ಸೇರಿದಂತೆ ಕೇಂದ್ರ ಸರ್ಕಾರದ ಯೋಜನೆಗಳ ಫಲಾನುಭವಿಗಳು ಇರುತ್ತಾರೆ ಮತ್ತು ಸಾಮಾನ್ಯ ಜನರನ್ನು ಸಹ ಸಮಾರಂಭಕ್ಕೆ ಆಹ್ವಾನಿಸಲಾಗಿದೆ. ದೆಹಲಿ ಚುನಾವಣಾ ಫಲಿತಾಂಶಗಳು ಘೋಷಣೆಯಾದ 11 ದಿನಗಳ ನಂತರ ಬಿಜೆಪಿ ಶಾಲಿಮಾರ್ ಬಾಗ್‌ನಿಂದ ಮೊದಲ ಬಾರಿಗೆ ಶಾಸಕಿಯಾಗಿರುವ ರೇಖಾ ಗುಪ್ತಾ ಅವರನ್ನು ಆಯ್ಕೆ ಮಾಡಿದೆ. ಬುಧವಾರ ಸಂಜೆ ಅವರನ್ನು ಶಾಸಕಾಂಗ ಪಕ್ಷದ ನಾಯಕಿಯಾಗಿ ಆಯ್ಕೆ ಮಾಡಲಾಯಿತು.
