ತುಮಕೂರು:
ಬಿದ್ದು ಗಾಯಗೊಳ್ಳುತ್ತಿರುವವರ ಸಂಖ್ಯೆ ಹೆಚ್ಚಳ: ಜನರ ಆಕ್ರೋಶ
ತುಮಕೂರು ನಗರ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿ ದಿನೆ ದಿನೆ ಹೆಚ್ಚುತ್ತಿದ್ದು, ಇವುಗಳ ಉಪಟಳದಿಂದ ನಾಗರಿಕರು ಬೇಸತ್ತಿದ್ದಾರೆ. ಹಾಡಹಗಲೇ ನಾಯಿಗಳ ಗುಂಪು ದಾರಿ ಹೋಕರ ಮೇಲೆ ಎರಗುವ ಪ್ರವೃತ್ತಿ ಹೆಚ್ಚಳವಾಗುತ್ತಲೇ ಇದ್ದು, ಬಹಳಷ್ಟು ಮಂದಿ ಗಾಯಗೊಂಡಿದ್ದಾರೆ.
ಹಿಂದೆಲ್ಲ ವಾರಕ್ಕೆ, ತಿಂಗಳಿಗೆ ಒಂದೊಂದು ನಾಯಿ ದಾಳಿ ಪ್ರಕರಣಗಳು ಕಂಡುಬರುತ್ತಿದ್ದವು. ಈಗ ದಿನಂಪ್ರತಿ ದಾಳಿ ಪ್ರಕರಣಗಳು ವರದಿಯಾಗುತ್ತಲೇ ಇವೆ. ರಸ್ತೆಯಲ್ಲಿ ದ್ವಿಚಕ್ರ ವಾಹನಗಳ ಬೆನ್ನು ಹತ್ತುವ ಶ್ವಾನಪಡೆಯಿಂದಾಗಿ ಕೈಕಾಲು ಮುರಿದುಕೊಳ್ಳುವವರು ಹೆಚ್ಚಾಗಿದ್ದಾರೆ. ರಸ್ತೆಯ ಬದಿಯಲ್ಲಿ ಮಲಗಿರುವ ಅಥವಾ ಗುಂಪುಗೂಡಿರುವ ಈ ನಾಯಿಗಳು ಒಮ್ಮೊಮ್ಮೆ ದಿಢೀರ್ ಎರಗುವ ಪ್ರವೃತ್ತಿ ಬೆಳೆಸಿಕೊಂಡಿದ್ದು ಯಾವಾಗ, ಯಾರು ಈ ನಾಯಿಗಳಿಗೆ ಸಿಕ್ಕಿಬಿಡುತ್ತಾರೋ ಎಂಬ ಆತಂಕ ಸೃಷ್ಟಿಯಾಗಿದೆ. ಹೀಗಾಗಿ ಕೆಲವೊಂದು ಬಡಾವಣೆಯ ರಸ್ತೆಗಳಲ್ಲಿ ಜನ ಸಂಚರಿಸಲು ಹಿಂದು ಮುಂದು ನೋಡುವಂತಾಗಿದೆ.
ನವೆಂಬರ್ 23 ರಂದು ನಗರದ ಖ್ಯಾತ ಸಾಹಿತಿಯೊಬ್ಬರು ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ ನಾಯಿಗಳು ಅಡ್ಡ ಬಂದು ದಂಪತಿಗಳು ಗಾಯಗೊಂಡಿರುವ ಘಟನೆ ನಡೆದಿದೆ. ಸ್ಕೂಟರ್‍ನಲ್ಲಿ ಕೋತಿತೋಪಿನ ಬಳಿ ಹೋಗುತ್ತಿದ್ದಾಗ ನಾಯಿಗಳ ಗುಂಪೊಂದು ದಿಢೀರ್ ಸ್ಕೂಟರ್‍ನತ್ತ ಲಗ್ಗೆ ಹಾಕಿವೆ. ಇದರ ಪರಿಣಾಮವಾಗಿ ಸ್ಕೂಟರ್‍ನಲ್ಲಿದ್ದ ದಂಪತಿ ಕೆಳಗೆ ಬಿದ್ದಿದ್ದಾರೆ. ಇಬ್ಬರೂ ಗಾಯಗೊಂಡಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಅವರೇ ಹೇಳುವ ಪ್ರಕಾರ ನಾವು ಬಿದ್ದ ಸಮಯದಲ್ಲಿ ಅಕಸ್ಮಾತ್ ಹಿಂದಿನಿಂದ ಯಾವುದಾದರು ವಾಹನ ಬಂದಿದ್ದರೆ ನಾವು ಈ ಲೋಕವನ್ನೇ ತ್ಯಜಿಸಬೇಕಾಗಿತ್ತು ಎಂದು ತಮ್ಮ ನೋವನ್ನು ತೋಡಿಕೊಂಡರು.
ತುಮಕೂರು ತುಂಬೆಲ್ಲಾ ಇಷ್ಟೊಂದು ನಾಯಿಗಳ ಹಾವಳಿ ಇದೆ. ನಗರ ಪಾಲಿಕೆಯವರು ಏನು ಮಾಡುತ್ತಿದ್ದಾರೆ. ಬೀದಿ ನಾಯಿಗಳ ಉಪಟಳ ಇವರಿಗೆ ಕಾಣಿಸುವುದಿಲ್ಲವೆ ಎಂಬ ಪ್ರಶ್ನೆಯನ್ನು ಅವರು ಮುಂದಿಟ್ಟಿದ್ದಾರೆ.
ಕಳೆದ ವಾರ ಮತ್ತೊಬ್ಬರು ಉಪ್ಪಾರಹಳ್ಳಿಯಿಂದ ಗೆದ್ದಲಹಳ್ಳಿ ಮಾರ್ಗವಾಗಿ ಹೋಗುವ ಆಟೋ ಸ್ಟ್ಯಾಂಡ್ ಬಳಿ ನಾಯಿಗಳ ದಾಳಿಗೆ ಸಿಲುಕಿದ್ದಾರೆ. ರಾತ್ರಿವೇಳೆ ದ್ವಿಚಕ್ರ ವಾಹನದಲ್ಲಿ ಕೆಲಸ ಮುಗಿಸಿಕೊಂಡು ಹೋಗುತ್ತಿದ್ದಾಗ ನಾಯಿಗಳ ಗುಂಪು ಆತನನ್ನು ಅಟ್ಟಿಸಿಕೊಂಡು ಬಂದಿವೆ. ಗಾಡಿಯಲ್ಲಿ ಬಿದ್ದು ಆತ ಗಾಯಗೊಂಡಿದ್ದಾನೆ. ಹನುಮಂತಪುರದ ಬಳಿ ಕೆಲವರು ತಮ್ಮ ಪರಿಚಯಸ್ಥರ ಮನೆಗೆ ವಿವಾಹ ಆಮಂತ್ರಣ ನೀಡಲು ಹೋಗಿದ್ದಾಗ ಅವರ ಮೇಲೆ ನಾಯಿಗಳು ಮುತ್ತಿಗೆ ಹಾಕಿವೆ. ಹೀಗೆ ದಿನಬಿಟ್ಟು ದಿನ ನಗರದ ಒಂದೊಂದು ಬಡಾವಣೆಯಲ್ಲಿಯೂ ನಾಯಿಗಳ ಉಪಟಳದ ವರದಿಗಳು ಜನರ ಬಾಯಲ್ಲಿ ಹರಿದಾಡುತ್ತಲೇ ಇವೆ. ಆದರೆ ನಾಯಿಗಳ ಹಾವಳಿ ನಿಯಂತ್ರಣ ಮಾಡಬೇಕಾದ ಮಹಾನಗರ ಪಾಲಿಕೆ ದಿವ್ಯ ನಿರ್ಲಕ್ಷ್ಯ ತಾಳಿದೆ.
ಬೀದಿನಾಯಿಗಳನ್ನು ಹಿಡಿದು ಕೊಲ್ಲುವುದಾಗಲಿ ಅಥವಾ ಕಾನೂನು ವಿರೋಧಿ ಕ್ರಮಗಳಾಗಲಿ ಸಾಧ್ಯವಿಲ್ಲ. ಪ್ರಾಣಿ ಸಂರಕ್ಷಣಾ ಕಾನೂನು ಇದೆ. ಆದರೆ ಇದೇ ಕಾನೂನಿನ ಅಡಿಯಲ್ಲಿ ನಾಯಿಗಳ ನಿಯಂತ್ರಣಕ್ಕೆ ಕೆಲವು ಅವಕಾಶಗಳೂ ಇವೆ. ಸಂತಾನಹರಣ ಶಸ್ತ್ರಚಿಕಿತ್ಸೆ ಮೂಲಕ ನಾಯಿಗಳ ಹೆಚ್ಚಳವನ್ನು ಹತೋಟಿಗೆ ತರಬಹುದು. ಆದರೆ ಆಡಳಿತಗಳು ಏಕೆ ಈ ಬಗ್ಗೆ ಗಮನ ಹರಿಸುತ್ತಿಲ್ಲ ಎಂಬುದು ಕೆಲವು ಪ್ರಜ್ಞಾವಂತರ ಪ್ರಶ್ನೆ.
ಬೀದಿ ನಾಯಿಗಳ ನಿಯಂತ್ರಣಕ್ಕೆ ಸರ್ಕಾರದ ಸಂಬಂಧಿಸಿದ ಇಲಾಖೆಗಳೆ ಕೆಲವು ಸುತ್ತೋಲೆಗಳನ್ನು ಹೊರಡಿಸಿದೆ. ಕ್ರಮಕ್ಕಾಗಿ ಆಡಳಿತಗಳಿಗೆ ಸೂಚಿಸಲಾಗಿದೆ. ಆದರೆ ಸರ್ಕಾರದ ಸೂಚನೆಗಳು ಲೆಕ್ಕಕ್ಕಿಲ್ಲ. ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬೀದಿನಾಯಿಗಳ ಸಂಖ್ಯೆಯನ್ನು ನಿಯಂತ್ರಿಸುವ ಸಲುವಾಗಿ ಎಬಿಸಿ – ಎಆರ್‍ವಿ ಕಾರ್ಯಕ್ರಮ ಅನುಷ್ಠಾನಗೊಳಿಸುವ ಮೂಲಕ ಸಂತತಿ ನಿಯಂತ್ರಿಸಲಾಗುತ್ತಿದೆ. ಇದೇ ಮಾದರಿಯಲ್ಲಿ ಇತರೆ ಕಡೆಗಳಲ್ಲಿಯೂ ಅಳವಡಿಸಿಕೊಳ್ಳಿ ಎಂದು ನಗರ ಹಾಗೂ ಸ್ಥಳೀಯ ಆಡಳಿತಗಳಿಗೆ ಇತ್ತೀಚೆಗೆ ಅಂದರೆ ನ.16 ರಂದು ಸರ್ಕಾರದಿಂದ ಸುತ್ತೋಲೆಯೂ ಹೋಗಿದೆ. ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಸೇವೆಯನ್ನು ಬಳಸಿಕೊಳ್ಳಲೂ ಸಹ ಆದೇಶದಲ್ಲಿ ತಿಳಿಸಲಾಗಿದೆ. ಹೀಗಿದ್ದೂ ಸಹ ನಿರ್ಲಕ್ಷ್ಯ ಏಕೆ ಎಂಬುದು ಅರ್ಥವಾಗುತ್ತಿಲ್ಲ.
ನಗರ ಮಾತ್ರವಲ್ಲದೆ, ಗ್ರಾಮೀಣ ಪ್ರದೇಶಗಳಲ್ಲಿಯೂ ನಾಯಿಗಳ ಹಾವಳಿ ಹೆಚ್ಚಾಗುತ್ತಿದ್ದು, ಇದಕ್ಕೆ ಸಂಬಂಧಿಸಿದಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಒಂದು ಸುತ್ತೋಲೆ ಹೊರಡಿಸಿದೆ. ಬೀದಿ ನಾಯಿಗಳನ್ನು ನಿಯಂತ್ರಿಸಲು ಎಬಿಸಿ ಮಾಡಲು ಸುತ್ತೋಲೆಯಲ್ಲಿ ಅವಕಾಶ ಕಲ್ಪಿಸಲಾಗಿದೆ.
ನಗರ ಪಾಲಿಕೆ ಗಮನಿಸಲಿ: ಡಾ.ಪದ್ಮಪ್ರಸಾದ್
ದಿನಾಂಕ: 23.11.2021ರಂದು ನನ್ನ ಶ್ರೀಮತಿಯೊಂದಿಗೆ ಸ್ಕೂಟರ್‍ನಲ್ಲಿ ಹೋಗುತ್ತಿರುವಾಗ ಕೋತಿತೋಪಿನ ಬಳಿ ನಾಲ್ಕಾರು ಬೀದಿನಾಯಿಗಳು ಇದ್ದಕ್ಕಿದ್ದಂತೆ ನನ್ನ ಸ್ಕೂಟರ್‍ಗೆ ಅಡ್ಡ ಬಂದವು. ಪರಿಣಾಮವಾಗಿ ನಾವಿಬ್ಬರೂ ಕೆಳಗೆ ಬಿದ್ದೆವು. ನನ್ನ ಶ್ರೀಮತಿಗೆ ಹಾಗೂ ನನಗೆ ಇಬ್ಬರಿಗೂ ಗಾಯಗಳಾದವು. ಚಿಕಿತ್ಸೆ ಪೆಡಯುತ್ತಿದ್ದೇವೆ. ಪುಣ್ಯಕ್ಕೆ ಸಮೀಪದಲ್ಲಿ ಬೇರೊಂದು ವಾಹನ ಬರುತ್ತಿರಲಿಲ್ಲ. ತುಮಕೂರು ನಗರದಲ್ಲಿ ಬಿಡಾಡಿ ನಾಯಿಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಲೇ ಇದ್ದು, ನನ್ನಂತಹ ಇನ್ನೂ ಹಲವಾರು ಮಂದಿ ಇವುಗಳಿಂದ ತೊಂದರೆಗೆ ಒಳಗಾಗಿದ್ದಾರೆ. ಇನ್ನಾದರೂ ಮಹಾನಗರ ಪಾಲಿಕೆ ಇತ್ತ ಗಮನ ಹರಿಸಿ ಜನರಿಗಾಗುವ ಅಪಾಯಗಳನ್ನು ತಪ್ಪಿಸಲಿ. ಬೀದಿನಾಯಿಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಿ.
-ಡಾ.ಎಸ್.ಪಿ.ಪದ್ಮಪ್ರಸಾದ್, ತುಮಕೂರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ