ನವದೆಹಲಿ
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ತಮ್ಮ ಬಗ್ಗೆ ತಪ್ಪು ದಾರಿಯ ಮತ್ತು ಅವಹೇಳನಕಾರಿ ಸುದ್ದಿಗಳನ್ನು ಹಂಚಿಕೊಂಡಿದ್ದಾರೆ ಎಂದು ಆರೋಪಿಸಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರಿಗೆ ಶುಕ್ರವಾರ ಲೀಗಲ್ ನೋಟಿಸ್ ಕಳುಹಿಸಿದ್ದಾರೆ. ಕಾಂಗ್ರೆಸ್‌ನ ಅಧಿಕೃತ ಎಕ್ಸ್ ಖಾತೆಯಲ್ಲಿ ಮಾಡಲಾದ ಫೋಸ್ಟ್ ಮತ್ತು ವಿಷಯಗಳನ್ನು ನೋಡಿದ ತಮ್ಮ ಕಕ್ಷಿದಾರರಿಗೆ ಆಘಾತವಾಗಿದೆ ಎಂದು ಗಡ್ಕರಿ ಅವರ ವಕೀಲ ಬಲೇಂದು ಶೇಖರ್ ಹೇಳಿದ್ದಾರೆ.
ಖರ್ಗೆ ಮತ್ತು ರಮೇಶ್ ಅವರು ಉದ್ದೇಶಪೂರ್ವಕವಾಗಿ ಗಡ್ಕರಿಯವರ “ದಿ ಲಲ್ಲಾಂಟಾಪ್” ವೆಬ್ ಪೋರ್ಟಲ್‌ಗೆ ನೀಡಿದ ಸಂದರ್ಶನದ 19 ಸೆಕೆಂಡುಗಳ ವೀಡಿಯೊ ತುಣುಕನ್ನು ಪೋಸ್ಟ್ ಮಾಡಿದ್ದಾರೆ, ಅವರ ಪದಗಳ ಸಂದರ್ಭೋಚಿತ ಉದ್ದೇಶ ಮತ್ತು ಅರ್ಥವನ್ನು ಮರೆಮಾಚಿದ್ದಾರೆ ಎಂದು ವಕೀಲರು ಆರೋಪಿಸಿದ್ದಾರೆ. ಸಾರ್ವಜನಿಕರ ದೃಷ್ಟಿಯಲ್ಲಿ ಗಡ್ಕರಿ ಅರ ಬಗ್ಗೆ ಅಪಖ್ಯಾತಿ ಸೃಷ್ಟಿಸುವ ಏಕೈಕ ಉದ್ದೇಶ ಮತ್ತು ದುರುದ್ದೇಶದಿಂದ ಈ ಕೆಟ್ಟ ಕೃತ್ಯ ಎಸಗಲಾಗಿದೆ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಜನರ ವಿಶ್ವಾಸ ಗಳಿಸಲು ಸಜ್ಜಾಗಿರುವ ಬಿಜೆಪಿ ಒಗ್ಗಟ್ಟಿನಲ್ಲಿ ಬಿರುಕು ಮೂಡಿಸುವ ವ್ಯರ್ಥ ಪ್ರಯತ್ನವೂ ಆಗಿದೆ.
ಗಡ್ಕರಿ ಅವರ ಸಂದರ್ಶನವನ್ನು ತಿರುಚಿ, ಸಂದರ್ಭೋಚಿತ ಅರ್ಥವಿಲ್ಲದ ವೀಡಿಯೊವನ್ನು ಅಪ್‌ಲೋಡ್ ಮಾಡುವ ಮೂಲಕ ಪ್ರಸ್ತುತಪಡಿಸಲಾಗಿದೆ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.