ತುಮಕೂರು:
ಕವಿಯಾದವನು ಲೋಕ ಸಂಸಾರಿಯಾಗಬೇಕು. ಆಗ ಮಾತ್ರ ಲೋಕ ಸುಖ ದುಃಖಗಳನ್ನು ಸೂಕ್ಷ್ಮವಾಗಿ ಪರಿಗಣಿಸಲು ಸಾಧ್ಯವಾಗುತ್ತದೆ. ಮನೆಯ ಸಾಂಸಾರಿಕ ಜೀವನದಲ್ಲಿ ಕಷ್ಟ ಸುಖಗಳನ್ನು ಕಾಣುತ್ತೇವೋ ಹಾಗೇಯೇ ಲೋಕ ಸಂಸಾರಿಯಾದಾಗ ಲೋಕ ಕಷ್ಟ ಸುಖಗಳು ನಮ್ಮನ್ನು ಕಾಡುತ್ತವೆ ಎಂದು ಖ್ಯಾತ ಕವಿ ಹಾಗೂ ಬೆಂಗಳೂರು ಶೇಷಾದ್ರಿಪುರಂ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಸತ್ಯಮಂಗಲ ಮಹಾದೇವ ತಿಳಿಸಿದರು.
ನಗರದ ಕನ್ನಡ ಭವನದಲ್ಲಿ ಕಾವ್ಯ ಸಂಗಮ ಸಾಹಿತ್ಯ ವೇದಿಕೆ ವತಿಯಿಂದ ಕನ್ನಡ ರಾಜ್ಯೋತ್ಸವ, ಪುಸ್ತಕ ಬಿಡುಗಡೆ ಹಾಗೂ ಸರ್ಕಾರಿ ಕನ್ನಡ ಶಾಲೆಗೆ ಮುದ್ರಣ ಯಂತ್ರ ವಿತರಣಾ ಸಮಾರಂಭದಲ್ಲಿ ಅವರು ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನವದೆಹಲಿಯ ರಾಷ್ಟ್ರೀಯ ಅಧ್ಯಕ್ಷರು, ಆಲ್ ಇಂಡಿಯಾ ಸ್ಟೂಡೆಂಟ್ ಅಸೋಸಿಯೇಷನ್ ಕ್ಲಬ್ ನ ಅಧ್ಯಕ್ಷ ಲೋಕೇಶ್ವರ್ ನಾಯಕ್ ರವರು ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ರಾಜ್ಯದ ಯಾವುದೇ ಶಾಲೆ ಕಾಲೇಜುಗಳಲ್ಲಿ ಮೂಲ ಸೌಲಭ್ಯಗಳ ಕೊರತೆ ಉಂಟಾದಲ್ಲಿ ನನ್ನನ್ನು ವೈಯಕ್ತಿಕವಾಗಿ ಸಂಪರ್ಕಿಸಿದರೆ ನಾನು ನೆರವು ನೀಡಲು ಸದಾ ಸಿದ್ದನಾಗಿರುತ್ತೇನೆ ಎಂದು ಕ್ಯಾತಗಾನಕೆರೆ ಸರ್ಕಾರಿ ಶಾಲೆಗೆ ಮುದ್ರಣ ಯಂತ್ರ ವಿತರಿಸಿ ಮಾತನಾಡಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್ ಸಿದ್ದಲಿಂಗಪ್ಪ ಮಾತನಾಡಿ, ಕಾವ್ಯ ಸಂಗಮ ವೇದಿಕೆಯಿಂದ ಗಟ್ಟಿಕವಿಗಳು ಹೊರ ಬರಲಿ. ಸಾಹಿತ್ಯ ಲೋಕದಲ್ಲಿ ನಮ್ಮದೇ ಆದ ಗುರುತನ್ನು ಕಂಡುಕೊಳ್ಳಲಿ ಎಂದು ಅಭಿನಂದಿಸಿದರು.
ಕಾವ್ಯ ಸಂಗಮ ಸಾಹಿತ್ಯ ವೇದಿಕೆಯ ಮುಖ್ಯಸ್ಥ ಅರುಣ್ ಕುಮಾರ್ ಬ್ಯಾತ ಅವರು, ಕಾವ್ಯ ಸಂಗಮ ಸಾಹಿತ್ಯ ಆರಂಭಗೊಂಡು ಇಲ್ಲಿಗೆ ಮೂರು ವರ್ಷಗಳು ಕಳೆದಿವೆ. ಈವರೆಗೆ ಅನೇಕ ಅನಾಥ ಮಕ್ಕಳಿಗೆ, ವೃದ್ಧಾಶ್ರಮಗಳಿಗೆ ವೇದಿಕೆಯಿಂದ ನೆರವನ್ನು ನೀಡಲಾಗಿದೆ. ವೇದಿಕೆಯ ಉದ್ದೇಶ ಇರುವುದು ಅಶಕ್ತ ಬದುಕಿನಲ್ಲಿ ಬೆಳಕು ತರುವುದಲ್ಲದೆ. ನವ ನವೀನ ಸಾಹಿತ್ಯ ಆಸಕ್ತರಿಗೆ ವೇದಿಕೆ ನೀಡುವುದಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಲೇಖಕಿ ಬಿ.ಸಿ ಶೈಲಾನಾಗರಾಜ್ ಮಾತನಾಡಿ ಕಾವ್ಯ ಹದವಾದ, ಮೃದುವಾದ ಮನಸ್ಸಿನಲ್ಲಿ ಹುಟ್ಟಲು ಸಾಧ್ಯ. ಸಾಹಿತ್ಯಕ್ಕೆ ಎಲ್ಲರನ್ನು ಹಿಡಿಟ್ಟುಕೊಳ್ಳುವ ಸೂಕ್ಷ್ಮ ಗಹಿಕೆಗೆ ತಳ್ಳುವ ಅಗಾಧ ಶಕ್ತಿಯಿದೆ. ಕಾವ್ಯ ಸಂಗಮ ಉತ್ತಮ ಸಂಘಡಿಗರುಳ್ಳ ಒಂದು ಸಾಹಿತ್ಯ ವೇದಿಕೆಯಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಹೊಸಬರಿಗೆ ಅವಕಾಶ ವೇದಿಕೆಯಿಂದ ಸಿಗುವಂತಾಗಲಿ ಎಂದರು.
ಕಾರ್ಯಕ್ರಮದಲ್ಲಿ ಮಧುಸೂದನ್ ಮುಳಕುಂಟ ಅವರ ಪುಟ್ಟ ಹಕ್ಕಿಯ ಹಾಡು ಹಾಗೂ ಅರ್ಷಿಣಿಯವರ ರಮ್ಯತಾಣ ಎಂಬ ಎರಡು ಪುಸ್ತಕಗಳನ್ನು ಲೋಕಾರ್ಪಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಕಥೆಗಾರ್ತಿ ವಿಜಯಾ ಮೋಹನ್, ವಕೀಲ ಧನಂಜಯ್, ಪತ್ರಕರ್ತ ಯೋಗೇಶ್ ಮಲ್ಲೂರು, ನ್ಯಾಯಾಂಗ ಇಲಾಖೆಯ ಶಿರಸ್ತೇದಾರ ವಿರೂಪಾಕ್ಷ.ಎಂ.ಎಚ್, ಕವಿ ರಂಗನಾಥ ಬಿದಲೋಟಿ ಸೇರಿದಂತೆ ಇತರರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸ್ಪೂರ್ತಿ.ಸಿ. ನಿರೂಪಣೆ ಮಾಡಿದರು. ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ