ಬೆಂಗಳೂರು
ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷರ ಹುದ್ದೆಯಿಂದ ವಿಧಾನ ಪರಿಷತ್‌ನ ಮಾಜಿ ಸದಸ್ಯ ಅಬ್ದುಲ್ ಅಜೀಂ ನಾಮ ನಿರ್ದೇಶನ ಹಿಂಪಡೆದಿರುವ ರಾಜ್ಯ ಸರ್ಕಾರದ ಕ್ರಮವನ್ನು ಹೈಕೋರ್ಟ್ ಎತ್ತಿ ಹಿಡಿದೆ. ಹಾಗಾಗಿ ಮಾಜಿ ಐಪಿಎಸ್ ಅಧಿಕಾರಿಗೆ ಕಾನೂನು ಹೋರಾಟದಲ್ಲಿ ಹಿನ್ನಡೆಯಾಗಿದೆ.
ಅಲ್ಲದೆ, ಸರ್ಕಾರದ ಅಧೀನದ ಆಯೋಗಗಳಿಗೆ ಅಧ್ಯಕ್ಷರ ನಾಮ ನಿರ್ದೇಶನ ಮಾಡುವುದು ಮತ್ತು ಹಿಂಪಡೆಯುವುದು ಸರ್ಕಾರದ ವಿವೇಚನೆಗೆ ಒಳಪಟ್ಟಿರಲಿದ್ದು, ಈ ಪ್ರಕ್ರಿಯೆಯಲ್ಲಿ ನೋಟಿಸ್ ನೀಡದೆ ಏಕಪಕ್ಷೀಯವಾಗಿ ನಾಮ ನಿರ್ದೇಶನ ಹಿಂಪಡೆಯಲಾಗಿದೆ ಎಂಬುದಾಗಿ ಸರ್ಕಾರದ ಕ್ರಮವನ್ನು ಪ್ರಶ್ನಿಸಲು ಅವಕಾಶವಿಲ್ಲ ಎಂದು ನ್ಯಾಯಪೀಠ ತಿಳಿಸಿದೆ.
ತಮ್ಮನ್ನು ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷರ ಸ್ಥಾನಕ್ಕೆ ನಾಮ ನಿರ್ದೇಶನ ಹಿಂಪಡೆದಿದ್ದ ಕ್ರಮವನ್ನು ಪ್ರಶ್ನಿಸಿ ಅಬ್ದುಲ್ ಅಜೀಂ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.
ಅಲ್ಲದೆ, ಖುಸ್ರೋ ಖುರೇಷಿ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪನ್ನು ಉಲ್ಲೇಖಿಸಿರುವ ನ್ಯಾಯಪೀಠ, ಅಲ್ಪಸಂಖ್ಯಾತ ಆಯೋಗದ ಸೆಕ್ಷನ್ 4 ಪ್ರಕಾರ ಆಯೋಗದ ಅಧ್ಯಕ್ಷರನ್ನು ನೇಮಕ ಮತ್ತು ರದ್ದು ಮಾಡುವುದು ಸರ್ಕಾರ ವಿವೇಚನೆಗೆ ಒಳಪಟ್ಟಿರುತ್ತದೆ. ಆದ್ದರಿಂದ ಶಾಸನದ ಅನುಸಾರ ಸರ್ಕಾರ ಆದೇಶ ಮಾಡಿರುವುದು ಕಾನೂನು ಬಾಹಿರವಾಗುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.
ಅಲ್ಲದೆ, ಅರ್ಜಿದಾರರು ಯಾವುದೇ ಹಕ್ಕನ್ನು ಕಸಿದುಕೊಂಡಂತಾಗುವುದಿಲ್ಲ. ಸೆಕ್ಷನ್ 4 ಪ್ರಕಾರ ಸರ್ಕಾರ ವಿವೇಚನೆಯಂತೆ ನಾಮನಿರ್ದೇಶನ ಗೊಂಡಿದ್ದಾರೆ. ಈ ರೀತಿಯ ನಾಮ ನಿರ್ದೇಶನವನ್ನು ಸರ್ಕಾರವೇ ರದ್ದುಪಡಿಸುವುದಕ್ಕೆ ಅವಕಾಶವಿಲ್ಲ ಎಂದು ಹೇಳಲಾಗದು ಎಂಬುದಾಗಿ ಪೀಠ ತಿಳಿಸಿದೆ.
ಅರ್ಜಿದಾರರನ್ನು ಆಯೋಗದ ಹುದ್ದೆಯಿಂದ ತೆಗೆದುಹಾಕಬೇಕಾದರೆ ನೋಟಿಸ್ ಜಾರಿ ಮಾಡಬೇಕು ಎಂದು ಸೆಕ್ಷನ್ 5ರಲ್ಲಿ ಹೇಳಲಾಗಿದೆ ವಕೀಲರು ಎಂದು ವಾದಿಸಿದ್ದಾರೆ. ಆದರೆ, ಸೆಕ್ಷನ್ 5ರ ಪ್ರಕಾರ ಆಯೋಗದ ಅಧ್ಯಕ್ಷರನ್ನು ಅನರ್ಹಗೊಳಿಸುವ ಪ್ರಕ್ರಿಯೆಯಾಗಿದೆ. ಆದರೆ, ಅರ್ಜಿದಾರರನ್ನು ಸರ್ಕಾರ ಅನರ್ಹಗೊಳಿಸಿಲ್ಲ, ಹುದ್ದೆಗೆ ಆಗಿದ್ದ ನಾಮ ನಿರ್ದೇಶನವನ್ನು ಹಿಂಪಡೆದಿದೆ. ಆದ್ದರಿಂದ ನೋಟಿಸ್ ಜಾರಿ ಮಾಡಿ ಅವರ ಪ್ರತಿಕ್ರಿಯೆ ಕೇಳಬೇಕು ಎಂಬ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಪೀಠ ತಿಳಿಸಿದೆ.
ನಿವೃತ್ತ ಪೊಲೀಸ್ ಅಧಿಕಾರಿ ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯ ಅಬ್ದುಲ್ ಅಜೀಂ ಅವರನ್ನು 2019ರಿಂದ ಮೂರು ವರ್ಷಗಳ ಅವಧಿಗೆ ಕರ್ನಾಟಕ ಅಲ್ಪಸಂಖ್ಯಾತರ ಆಯೋಗದ ಕಾಯಿದೆಯನ್ವಯ ರಾಜ್ಯ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು. 2022ಕ್ಕೆ ಅವರ ಮೊದಲ ಮೂರು ವರ್ಷದ ಅಧಿಕಾರವಧಿ ಪೂರ್ಣಗೊಂಡಿತ್ತು. ಇದಾದ ನಂತ ಎರಡನೇ ಅವಧಿಗೆ ನೇಮಕ ಮಾಡಿ ಆದೇಶಿಸಲಾಗಿದ್ದು, 2025ರ ವರೆಗೂ ಅಧಿಕಾರವಧಿ ಜಾರಿಯಲ್ಲಿತ್ತು.
ಈ ನಡುವೆ ರಾಜ್ಯದಲ್ಲಿ ಸರ್ಕಾರ ಬದಲಾದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ಕಚೇರಿಯಿಂದ ಹೊರಬಿದ್ದ ಟಿಪ್ಪಣಿಯ ಅನುಸಾರವಾಗಿ ಹಿಂದಿನ ಸರ್ಕಾರದ ಅವಧಿಯ ಎಲ್ಲ ನಾಮ ನಿರ್ದೇಶನಗಳನ್ನು ಅನೂರ್ಜಿತಗೊಳಿಸಿ ಆದೇಶಿಸಲಾಗಿತ್ತು.
ಅದರಂತೆ ಅರ್ಜಿದಾರ ಅಬ್ದುಲ್ ಅಜೀಂ ಅವರನ್ನು ಆಯೋಗದ ಅಧ್ಯಕ್ಷ ಸ್ಥಾನವನ್ನು ರದ್ದುಗೊಳಿಸಲಾಗಿತ್ತು. ಇದಾದ ನಂತರ ಅರ್ಜಿದಾರರ ಮನವಿಯಂತೆ ನಾಮನಿರ್ದೇಶನ ರದ್ದುಪಡಿಸಿದ್ದ ಅಧಿಸೂಚನೆಯನ್ನು ಸರ್ಕಾರ ಹಿಂಪಡೆದಿತ್ತು. ಅರ್ಜಿ ವಿಚಾರಣಾ ಹಂತದಲ್ಲಿರುವ ಸಂದರ್ಭದಲ್ಲಿಯೇ ಅಬ್ದುಲ್ ಅಜೀಂ ಅವರನ್ನು ಆಯೋಗದ ಅಧ್ಯಕ್ಷರ ಹುದ್ದೆಯಿಂದ ರದ್ದುಗೊಳಿಸಿ ಸರ್ಕಾರ ಅಧಿಸೂಚನೆ ಹೊರಡಿಸಿತ್ತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ