ಇಂಫಾಲ:
ಹಿಂಸಾಚಾರ ಪೀಡಿತ ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ಇನ್ನೂ 6 ತಿಂಗಳ ಕಾಲ ವಿಸ್ತರಿಸಲು ರಾಜ್ಯಸಭೆ ಅನುಮೋದನೆ ನೀಡಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಾಜ್ಯಸಭೆಯಲ್ಲಿ ಮಂಡಿಸಿದ ಪ್ರಸ್ತಾವನೆಯನ್ನ ಸದನವು ಅಂಗೀಕರಿಸಿದೆ.
ಆಗಸ್ಟ್ 13ರಿಂದ ಅನ್ವಯವಾಗುವಂತೆ 6 ತಿಂಗಳ ಕಾಲ ರಾಷ್ಟ್ರಪತಿ ಆಡಳಿತ ವಿಸ್ತರಣೆಯಾಗಲಿದೆ ಮಣಿಪುರಕ್ಕೆ ಸಂಬಂಧಿಸಿದಂತೆ ಸಂವಿಧಾನದ 356ನೇ ವಿಧಿ ಅನ್ವಯ 2025ರ ಫೆಬ್ರವರಿ 13ರಂದು ರಾಷ್ಟ್ರಪತಿಗಳು ನೀಡಿದ ಸುಗ್ರೀವಾಜ್ಞೆಯನ್ನ 2025ರ ಆಗಸ್ಟ್ 13ರಿಂದ ಆರು ತಿಂಗಳ ಕಾಲ ಮುಂದುವರಿಸಲು ಸದನ ಒಪ್ಪಿಗೆ ನೀಡಬೇಕಿದೆ ಎಂದು ಸದನದಲ್ಲಿ ಮಂಡಿಸಲಾದ ನೋಟಿಸ್‌ನಲ್ಲಿ ತಿಳಿಸಲಾಗಿದೆ
2023ರ ಹೈಕೋರ್ಟ್ ಆದೇಶದ ವಿರುದ್ಧವಾಗಿ ಬುಡಕಟ್ಟು ಸಮುದಾಯದ ಮೆರವಣಿಗೆಯೊಂದನ್ನು ಆಯೋಜಿಸಲಾಗಿತ್ತು ಈ ವೇಳೆ ಎರಡು ಸಮುದಾಯಗಳ ನಡುವೆ ಹಿಂಸಾಚಾರ ಏರ್ಪಟ್ಟಿತು. ಇಲ್ಲಿಂದ ಸತತವಾಗಿ ಜನಾಂಗೀಯ ಹಿಂಸಾಚಾರ ಶುರುವಾಗಿದೆ. ಪರಿಸ್ಥಿತಿ ನಿಯಂತ್ರಿಸುವಲ್ಲಿ ವಿಫಲವಾದ ಹಿನ್ನೆಲೆ ಮುಖ್ಯಮಂತ್ರಿ ಸ್ಥಾನಕ್ಕೆ ಬಿರೇನ್ ಸಿಂಗ್ ರಾಜೀನಾಮೆ ನೀಡಿದ್ದರು. ಇದಾದ ಕೆಲವೇ ದಿನಗಳಲ್ಲಿ ಅಂದ್ರೆ ಈ ವರ್ಷ ಫೆಬ್ರವರಿ 13ರಂದು 6 ತಿಂಗಳ ಕಾಲ ರಾಷ್ಟ್ರಪತಿ ಆಳ್ವಿಕೆ ಹೇರಲಾಯಿತು. ರಾಜ್ಯದಲ್ಲಿ 1951ರಿಂದ ಇದು 11ನೇ ಬಾರಿಗೆ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗಿದೆ.
