ಬೆಂಗಳೂರು:
ತೀವ್ರ ತಾಪಮಾನ ಏರಿಕೆಯಿಂದ ಕಂಗೆಟ್ಟಿದ್ದ ಬೆಂಗಳೂರಿನ ನಿವಾಸಿಗಳಿಗೆ ಮಳೆರಾಯ ಕೊನೆಗೂ ಕೊಂಚ ರಿಲೀಫ್ ನೀಡಿದ್ದು, ಗುರುವಾರ ಸಂಜೆ ನಗರದ ಹಲವು ಕಡೆಗಳಲ್ಲಿ ಮಿಂಚು, ಗುಡುಗು ಸಹಿತ ಮಳೆಯಾಗಿದೆ. ಮಳೆಯ ಆಗಮನದಿಂದ ಬೆಂಗಳೂರು ಜನರ ಖುಷಿಗೆ ಪಾರವೇ ಇಲ್ಲದಂತಾಗಿದೆ.
ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಅಧಿಕಾರಿಗಳ ಪ್ರಕಾರ, ತೀವ್ರ ಶಾಖ ಮತ್ತು ಮೋಡದ ರಚನೆಯಿಂದಾಗಿ ಲಘು ಮಳೆಯಾಗುವ ಮುನ್ಸೂಚನೆ ಇತ್ತು. ಈಮಧ್ಯೆ, ನಗರದ ಕೆಲವು ಭಾಗದಲ್ಲಿ ಬೀಸಿದ ಬಿರುಗಾಳಿಯಿಂದಾಗಿ ಕನಿಷ್ಠ 15 ಮರಗಳು ನೆಲಕ್ಕುರುಳಿ ಬಿದ್ದಿದ್ದು, ನಗರದಾದ್ಯಂತ ಬೃಹತ್ ಮರದ ಕೊಂಬೆಗಳು ಬಿದ್ದಿರುವ ಮಾಹಿತಿ ಬಿಬಿಎಂಪಿಗೆ ಲಭ್ಯವಾಗಿದೆ.
’10 ರಿಂದ 20 ನಿಮಿಷಗಳ ಮಳೆಯ ಜೊತೆಗೆ ಗಾಳಿಯೊಂದಿಗೆ ಮರಗಳು ನೆಲಕ್ಕುರುಳಿದವು. ಆದಾಗ್ಯೂ, ಯಾವುದೇ ಹಾನಿ ಅಥವಾ ಗಾಯಗಳು ವರದಿಯಾಗಿಲ್ಲ. ಕೆಲವು ವಾಹನ ಸವಾರರು ಬಿಜಿಎಸ್ ಫ್ಲೈಓವರ್ ಮತ್ತು ಮೈಸೂರು ರಸ್ತೆಯಲ್ಲಿ ಸಂಜೆ 6.30 ರಿಂದ 7.15ರ ನಡುವೆ ನಿಧಾನಗತಿಯ ಸಂಚಾರ ದಟ್ಟಣೆ ಬಗ್ಗೆ ದೂರು ನೀಡಿದ್ದಾರೆ’ ಎಂದು ಬಿಬಿಎಂಪಿ ನಿಯಂತ್ರಣ ಕೊಠಡಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬೆಂಗಳೂರಿಗರು ತಮ್ಮ ಪ್ರದೇಶದಲ್ಲಿನ ಮಳೆ ಸ್ಥಿತಿಯ ಕುರಿತು ‘X’ ನಲ್ಲಿ ಮಾಹಿತಿ ನೀಡಿದ್ದಾರೆ.
ವೈಟ್‌ಫೀಲ್ಡ್ ಮತ್ತು ಜಯನಗರದ ನಿವಾಸಿಗಳು ಭಾರಿ ಮತ್ತು ಗುಡುಗು ಸಹಿತ ಮಳೆಯ ಬಗ್ಗೆ ಸಂತೋಷ ವ್ಯಕ್ತಪಡಿಸಿದ್ದಾರೆ. ಆದರೆ, ತುಂತುರು ಮಳೆಯು ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿದೆ, ಬೆಂಗಳೂರು ಹೆಚ್ಚು ಬಿಸಿಯಾಗುತ್ತಿದೆ ಎಂದು ಹೆಚ್ಚಿನವರು ದೂರುತ್ತಿದ್ದಾರೆ.
ಅರವಿಂದ್ ಬಾಲಾಜಿ (@aravindn15) ಎನ್ನುವ ಬಳಕೆದಾರರೊಬ್ಬರು, ಬನಶಂಕರಿ ಮತ್ತು ಸುತ್ತಮುತ್ತಲಿನ ಬಳಿ ‘ತುಂಬಾ ಗಾಳಿ’ ಎಂದು ದೂರಿದ್ದಾರೆ.
ಮಲ್ಲೇಶ್ವರಂನ ‘X’ ಬಳಕೆದಾರ ಅನಿಲ್ ರಾಜೇ ಅರಸ್ (@AnilRajeUrs3), ತಮ್ಮ ಪ್ರದೇಶದಲ್ಲಿ ಮಳೆಯಾಗಲು ಪ್ರಾರಂಭಿಸಿದಾಗ, ಬಲವಾದ ಗಾಳಿಯು ಮೋಡಗಳನ್ನು ಓಡಿಸಿತು ಎಂದು ಹೇಳಿದರು.
ಇನ್ನೋರ್ವ ‘X’ ಬಳಕೆದಾರರಾದ ಜೀವನ್ ಬಿಕೆ (@Bkjeevan), ವಾಯುವ್ಯ ಬೆಂಗಳೂರಿನಲ್ಲಿ ಮಳೆಯಿಲ್ಲ ಎಂದು ನಿರಾಶೆಗೊಂಡರು.
ತಿರುಮೇನಹಳ್ಳಿ ಮತ್ತು ಯಲಹಂಕ ನಿವಾಸಿಗಳು ಮತ್ತು ಸಾಮಾಜಿಕ ಮಾಧ್ಯಮ ಬಳಕೆದಾರರು, ಬಹು ನಿರೀಕ್ಷಿತ ಮಳೆಯು ಗುಡುಗು ಮಿಂಚಿನಿಂದ ಆರಂಭವಾಯಿತು. ಆದರೆ ತುಂತುರು ಮಳೆಯು ಬಳಿಕ ದಿಗಂತದಿಂದ ಕಣ್ಮರೆಯಾಯಿತು ಎಂದು ದೂರಿದ್ದಾರೆ.