ರಾಜೀನಾಮೆ ಬೆದರಿಕೆ ಪ್ರಸಂಗವೊಂದು ಹೈಡ್ರಾಮಾ ಅಷ್ಟೆ : ಕೆ ಹೆಚ್‌ ಮುನಿಯಪ್ಪ

ಕೋಲಾರ:

    ರಾಜೀನಾಮೆ ಬೆದರಿಕೆ ಪ್ರಸಂಗವೊಂದು ಹೈಡ್ರಾಮಾ ಆಗಿದ್ದು, ಯಾರೂ ರಾಜೀನಾಮೆ ಕೊಡುವುದಿಲ್ಲ ಎಂದು ಸಚಿವ ಕೆ ಹೆಚ್ ಮುನಿಯಪ್ಪ ಅವರು ಗುರುವಾರ ಹೇಳಿದರು. 

    ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ, ರಾಜೀನಾಮೆ ಪ್ರಸಂಗದ ಕುರಿತು ಚರ್ಚೆ ನಡೆಸುತ್ತೇನೆ. ಕಾಂಗ್ರೆಸ್ ಪಕ್ಷದಲ್ಲಿ ಸರಿ ಸುಮಾರು 40 ವರ್ಷಗಳಿಂದ ಸತತವಾಗಿ ರಾಜಕೀಯ ಮಾಡಿದ್ದು, ಪಕ್ಷ 10 ವರ್ಷಗಳ ಕಾಲ ಕೇಂದ್ರದಲ್ಲಿ ಸಚಿವನನ್ನಾಗಿಸಿದೆ. ಕಾಂಗ್ರೆಸ್‌ನ ಹೈಕಮಾಂಡ್ ನೀಡುವ ನಿರ್ಧಾರಕ್ಕೆ ನಾವೆಲ್ಲರೂ ಬದ್ಧರಾಗಿ ಕಾರ್ಯನಿರ್ವಹಿಸುತ್ತೇವೆ. ಬುಧವಾರ ನಡೆದಿರುವ ರಾಜೀನಾಮೆ ಪ್ರಹಸನ ನನಗೆ ಆಶ್ಚರ್ಯ ಉಂಟುಮಾಡಿದೆ. ಈ ರಾಜೀನಾಮೆ ಎಂಬುದು ನಾಟಕ ಆಗಿದೆ. ಯಾರು ರಾಜೀನಾಮೆ ಕೊಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

    ನಾನು ಕೇಂದ್ರ ಮಟ್ಟದಲ್ಲಿ ರಾಜಕಾರಣ ಮಾಡಿರುವ ನಾಯಕ, ನಮ್ಮ ಪಕ್ಷದಲ್ಲಿರುವ ನಾಯಕರ ಕುಟುಂಬದ ಹಲವರಿಗೆ ಟಿಕೆಟ್ ಸಿಕ್ಕಿದೆ. ಸಹಜವಾಗಿ ನಾನೂ ನನ್ನ ಕುಟುಂಬದವರಿಗೆ ಟಿಕೆಟ್ ಕೊಡಿಸಲು ಮುಂದಾಗಿದ್ದು, ಟಿಕೆಟ್​ ದೊರಕುವ ಆಶಾಭಾವನೆ ಇದೆ. ಕೋಲಾರ ಲೋಕಸಭಾ ಕ್ಷೇತ್ರ ಹಾಗೂ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರವನ್ನು ಗೆಲ್ಲಿಸಿಕೊಂಡು ಬರುವ ಭರವಸೆಯನ್ನು ಮುಖ್ಯಮಂತ್ರಿಗಳಿಗೆ ಹಾಗೂ ಕೆಪಿಸಿಸಿ ಅಧ್ಯಕ್ಷರಿಗೆ ನೀಡಿದ್ದೇನೆ ಎಂದು ಹೇಳಿದರು. 

    ಕೋಲಾರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಗೆಲುವು ಕಾಂಗ್ರೆಸ್ ಪಕ್ಷದ್ದಾಗಿರಬೇಕೇ ವಿನಃ, ವ್ಯಕ್ತಿ ಪ್ರತಿಷ್ಠೆಯಿಂದ ಕೂಡಿರಬಾರದು. ನಾವೆಲ್ಲರೂ ಒಗ್ಗಟ್ಟಾಗಿ ಚುನಾವಣೆಯನ್ನು ಎದುರಿಸಿ ಹೈಕಮಾಂಡ್ ಸೂಚಿಸುವ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರುವುದು ನಮ್ಮ ಕರ್ತವ್ಯವಾಗಿದೆ ಎಂದು ತಿಳಿಸಿದರು

   ಕಾಂಗ್ರೆಸ್ ಪಕ್ಷ ಒಂದು ಕುಟುಂಬವಿದ್ದಂತೆ. ಈ ಜಗಳ ಹಾಗೂ ಮನಸ್ತಾಪಗಳನ್ನು ನಮ್ಮ ಹಂತದಲ್ಲಿ ಬಗೆಹರಿಸಿಕೊಂಡು ಮುನ್ನಡೆಯಬೇಕಾಗಿದೆ. ಈ ರೀತಿ ರಾಜೀನಾಮೆ ನೀಡುವ ಹಂತಕ್ಕೆ ಯಾವ ಕಾರಣದಿಂದ ಹೋದರು ಎಂಬುದು ಕುತೂಹಲಕಾರಿಯಾಗಿದೆ. ಕಾದು ನೋಡಿ ಶೀಘ್ರದಲ್ಲೇ ಎಲ್ಲವೂ ಗೊತ್ತಾಗಲಿದೆ ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap