ಕಾಂಗ್ರೆಸ್‌ 2ನೇ ಪಟ್ಟಿ ಇಂದು ಬಿಡುಗಡೆ ಸಾಧ್ಯತೆ ….!

ಬೆಂಗಳೂರು:

   ಲೋಕಸಭಾ ಚುನಾವಣೆಗೆ ರಾಜ್ಯದ 17 ಕಾಂಗ್ರೆಸ್ ಅಭ್ಯರ್ಥಿಗಳ 2ನೇ ಪಟ್ಟಿ ಅಂತಿಮವಾಗಿದ್ದು, ಗುರುವಾರ ಪ್ರಕಟವಾಗಲಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

    ಪಕ್ಷದ 2ನೇ ಪಟ್ಟಿ ನಿನ್ನೆಯೇ ಪ್ರಕಟವಾಗಬೇಕಿತ್ತು. ಕೋಲಾರ, ಬಳ್ಳಾರಿ, ಚಿಕ್ಕಬಳ್ಳಾಪುರ ಮತ್ತು ಚಾಮರಾಜನಗರದ ನಾಲ್ಕು ಸ್ಥಾನಗಳಿಗೆ ಒಮ್ಮತ ಮೂಡದ ಕಾರಣ ಬುಧವಾರ ನವದೆಹಲಿಯಲ್ಲಿ ನಡೆದ ಕಾಂಗ್ರೆಸ್ ಚುನಾವಣಾ ಸಮಿತಿಯು ಹಲವು ಸುತ್ತಿನ ಚರ್ಚೆಗಳ ಹೊರತಾಗಿಯೂ ಕರ್ನಾಟಕದ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಸಾಧ್ಯವಾಗಿಲ್ಲ. ಇದೀಗ ಗುರುವಾರ ಪಟ್ಟಿ ಬಿಡುಗಡೆಯಾಗಲಿದೆ ಎಂದು ಮೂಲಗಳು ತಿಳಿಸಿವೆ.

    ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ಮತ್ತು ಮಾಜಿ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ನೇತೃತ್ವದ ಎರಡು ಬಣಗಳು ಸಿಎಂ ಮತ್ತು ಡಿಸಿಎಂ ಜೊತೆಗಿನ ಸಭೆಯಲ್ಲಿ ತೀವ್ರ ಮಾತಿನ ಚಕಮಕಿ ನಡೆಸಿದ್ದು, ಇದರಿಂದ ಕೋಲಾರದ ಕ್ಷೇತ್ರದ ಅಭ್ಯರ್ಥಿಯ ವಿಚಾರದಲ್ಲಿ ಭಿನ್ನಾಭಿಪ್ರಾಯ ಉಂಟಾಗಿದೆ ಎನ್ನಲಾಗುತ್ತಿದೆ.

    ಮುನಿಯಪ್ಪ ಅವರು ತಮ್ಮ ಅಳಿಯ ಚಿಕ್ಕಪೆದ್ದಪ್ಪ ಅವರಿಗೆ ಟಿಕೆಟ್ ನೀಡಬೇಕೆಂದು ಪಟ್ಟು ಹಿಡಿದರೆ, ವಿಧಾನಸಭಾ ಚುನಾವಣೆಯಲ್ಲಿ ಕೊಟ್ಟೂರು ಮಂಜುನಾಥ್ ಗೆಲುವಿಗೆ ಶ್ರಮಿಸಿದ ನಾಯಕ ಸಿ.ಎಂ.ಮುನಿಯಪ್ಪ ಪರ ಕುಮಾರ್ ಬ್ಯಾಟಿಂಗ್ ಮಾಡಿದರು.

   ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ ಸ್ಪರ್ಧಿಸಬೇಕು ಎಂದು ಹೈಕಮಾಂಡ್ ಚಿಂತನೆ ನಡೆಸಿದ್ದರೂ, ಚಾಮರಾಜನಗರಕ್ಕೆ ಪುತ್ರ ಸುನೀಲ್ ಬೋಸ್ ಪರ ಮಹದೇವಪ್ಪ ಲಾಬಿ ನಡೆಸಿದ್ದರು. ಆದರೆ ಸಮೀಕ್ಷಾ ವರದಿ ಬೋಸ್ ವಿರುದ್ಧ ಇರುವುದರಿಂದ ಇನ್ನೊಂದು ಬಣ ಇದಕ್ಕೆ ವಿರೋಧ ವ್ಯಕ್ತಪಡಿಸಿತು. ಮಾಜಿ ಶಾಸಕ ನಂಜುಂಡಸ್ವಾಮಿ ಈ ಕ್ಷೇತ್ರದ ಆಕಾಂಕ್ಷಿಯಾಗಿದ್ದಾರೆ.

   ಬಳ್ಳಾರಿಯಲ್ಲಿ ಸಚಿವ ಬಿ.ನಾಗೇಂದ್ರ ಸ್ಪರ್ಧಿಸಬೇಕು ಎಂದು ಹೈಕಮಾಂಡ್ ಬಯಸಿದ್ದರೂ ಸಹೋದರ ವೆಂಕಟೇಶಪ್ರಸಾದ್‌ಗೆ ಟಿಕೆಟ್ ಕೊಡಿಸಲು ನಾಗೇಂದ್ರ ಮುಂದಾಗಿದ್ದರು. ಈ ಕ್ಷೇತ್ರದಲ್ಲಿ ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಪ್ರಬಲ ಸ್ಪರ್ಧಿಯಾಗಿದ್ದಾರೆ.

   ಇನ್ನು ಚಿಕ್ಕಬಳ್ಳಾಪುರದಲ್ಲಿ ಬಿಜೆಪಿ ಸುಮಲತಾ ಅಂಬರೀಶ್ ಅವರನ್ನು ಕಣಕ್ಕಿಳಿಸಿದರೆ, ಕಾಂಗ್ರೆಸ್ ಶಿವಶಂಕರರೆಡ್ಡಿ ಅವರನ್ನು ಕಣಕ್ಕಿಳಿಸಲು ಚಿಂತನೆ ನಡೆಸಿದೆ. ಸುಮಲತಾ ನಿಲ್ಲದೇ ಹೋದಲ್ಲಿ ರಕ್ಷಾ ರಾಮಯ್ಯ ಸ್ಪರ್ಧೆಗಿಳಿಯುವ ಸಾಧ್ಯತೆಗಳಿವೆ ಎನ್ನಲಾಗಿದೆ.

Recent Articles

spot_img

Related Stories

Share via
Copy link