ಬಳ್ಳಾರಿ:
ಈದ್ ಮಿಲಾದ್ ಹಾಗೂ ಗಣೇಶ ಮೂರ್ತಿ ಮೆರವಣಿಗೆ ವೇಳೆ ಕೋಮು ಘರ್ಷಣೆ ಹಾಗೂ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಬಳ್ಳಾರಿಯಲ್ಲಿ ಭದ್ರತೆಯನ್ನುಹೆಚ್ಚಿಸಲಾಗಿದ್ದು, ತಾತ್ಕಾಲಿಕ ಚೆಕ್ ಪೋಸ್ಟ್ ಗಳನ್ನು ರಚಿಸಿ ತಪಾಸಣೆಯನ್ನು ತೀವ್ರಗೊಳಿಸಲಾಗಿದೆ.
ಬಳ್ಳಾರಿ ಪೊಲೀಸ್ ಇಲಾಖೆ ನಗರ ಮತ್ತು ಜಿಲ್ಲೆಯ ಪ್ರವೇಶ ದ್ವಾರಗಳಲ್ಲಿ ಐದು ತಾತ್ಕಾಲಿಕ ಚೆಕ್ ಪೋಸ್ಟ್ ಗಳನ್ನು ತೆರೆದಿದ್ದು, ತಪಾಸಣೆ ನಡೆಸುತ್ತಿದೆ. ಈ ಚೆಕ್ ಪೋಸ್ಟ್ ಗಳ ಮುಖಾಂತರ ನಗರ ಪ್ರವೇಶಿರುವ ಹಾಗೂ ಹೊರ ಹೋಗುವ ವಾಹನ ಹಾಗೂ ಜನರ ಮೇಲೆ ನಿಗಾ ಇರಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬ್ಯಾರಿಕೇಡ್‌ಗಳನ್ನು ಹಾಕಲಾಗಿದ್ದು, ಸೂಕ್ಷ್ಮ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಜಿಲ್ಲೆಗೆ ಪ್ರವೇಶಿಸುವ ಮತ್ತು ಹೊರಹೋಗುವ ಎಲ್ಲಾ ಜನರು ಮತ್ತು ವಾಹನಗಳ ದಾಖಲೆಯನ್ನು ನಿರ್ವಹಿಸುವಂತೆ ಸಿಬ್ಬಂದಿಗೆ ಸೂಚಿಸಲಾಗಿದೆ ಎಂದು ಹೇಳಿದ್ದಾರೆ.
ನಗರದಲ್ಲಿ ವರದಿಯಾಗಿರುವ ಬಹುತೇಕ ಕೋಮು ಘರ್ಷಣೆಯ ಘಟನೆಗಳಲ್ಲಿ ರೌಡಿಶೀಟರ್‌ಗಳು ಮತ್ತು ಕಿಡಿಗೇಡಿಗಳು ಭಾಗಿಯಾಗಿರುವುದು ಕಂಡುಬಂದಿದೆ. ಚೆಕ್ ಪೋಸ್ಟ್‌ಗಳು ಜನರು, ವಾಹನಗಳು ಮತ್ತು ಅವುಗಳಲ್ಲಿ ಏನನ್ನು ಸಾಗಿಸಲಾಗುತ್ತಿದೆ ಎಂಬುದರ ಕುರಿತು ಮಾಹಿತಿಯನ್ನು ಸಂಗ್ರಹಿಸಲು ನಮಗೆ ಸಹಾಯ ಮಾಡುತ್ತದೆ. ರಾಜ್ಯ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳ ಪ್ರಕಾರ, ಎರಡೂ ಮೆರವಣಿಗೆಗಳು ಮುಗಿಯುವವರೆಗೆ ರೌಡಿಶೀಟರ್‌ಗಳನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.








