ಸಂಸತ್ತಿನ ಭದ್ರತೆ ಉಲ್ಲಂಘನೆ : ಪ್ರತಿಪಕ್ಷಗಳ ಗದ್ದಲಕ್ಕೆ ಕಲಾಪ ಮುಂದೂಡಿಕೆ

ನವದೆಹಲಿ:

     ಸಂಸತ್ತಿನ ಭದ್ರತೆ ಉಲ್ಲಂಘನೆ ವಿಚಾರವಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆ ಮತ್ತು ರಾಜೀನಾಮೆಗೆ ಒತ್ತಾಯಿಸಿ ವಿರೋಧ ಪಕ್ಷದ ಸದಸ್ಯರ ಪ್ರತಿಭಟನೆಯಿಂದಾಗಿ ಲೋಕಸಭೆಯ ಕಲಾಪವನ್ನು ಸೋಮವಾರ ಮಧ್ಯಾಹ್ನ 12 ಗಂಟೆಗೆ ಮುಂದೂಡಲಾಯಿತು. ಸಂಸತ್ತಿನ ಭದ್ರತಾ ಉಲ್ಲಂಘನೆ ವಿಚಾರವಾಗಿ ಪ್ರತಿಪಕ್ಷಗಳ ಗದ್ದಲದ ನಡುವೆ ರಾಜ್ಯಸಭೆಯ ಕಲಾಪವನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಯಿತು.

    ಶನಿವಾರ ನಿಧನರಾದ ಕುವೈತ್‌ನ ಎಮಿರ್ ಶೇಖ್ ನವಾಫ್ ಅಲ್-ಅಹ್ಮದ್ ಅಲ್-ಜಾಬರ್ ಅಲ್-ಸಬಾಹ್ ಅವರಿಗೆ ಸದನವು ಶ್ರದ್ಧಾಂಜಲಿ ಸಲ್ಲಿಸಿದ ನಂತರ, ಡಿಸೆಂಬರ್ 13 ರಂದು ಭದ್ರತಾ ಉಲ್ಲಂಘನೆಯ ಘಟನೆಯ ನಂತರ ಲೋಕಸಭೆಯ ಸೆಕ್ರೆಟರಿಯೇಟ್ ತೆಗೆದುಕೊಂಡ ಕ್ರಮಗಳ ಬಗ್ಗೆ ಸ್ಪೀಕರ್ ಓಂ ಬಿರ್ಲಾ ಅವರು ಸದನಕ್ಕೆ ತಿಳಿಸಿದರು. ಮತ್ತು ಸದನವನ್ನು ಸುಗಮವಾಗಿ ನಡೆಸಲು ಎಲ್ಲ ಸದಸ್ಯರ ಸಹಕಾರ ಕೋರಿದರು.

    ಆದರೆ, ವಿರೋಧ ಪಕ್ಷದ ಸದಸ್ಯರು ಗೃಹ ಸಚಿವ ಶಾ ಅವರ ಹೇಳಿಕೆ ಮತ್ತು ರಾಜೀನಾಮೆಗೆ ಒತ್ತಾಯಿಸಿದರು. ಪ್ರತಿಪಕ್ಷದ ಕೆಲವು ಸಂಸದರು ತಮ್ಮ ಬೇಡಿಕೆಗಳಿರುವ ಫಲಕಗಳನ್ನು ಸಹ ಹಿಡಿದುಕೊಂಡಿದ್ದರು.

    ಸದನದೊಳಗೆ ಭಿತ್ತಿಪತ್ರಗಳನ್ನು ತರುವುದನ್ನು ವಿರೋಧಿಸಿದ ಲೋಕಸಭಾಧ್ಯಕ್ಷ ಓಂ ಬಿರ್ಲಾ, ಇದು ಸದನದ ಘನತೆಯನ್ನು ಕುಗ್ಗಿಸುತ್ತದೆ ಎಂದು ಹೇಳಿದರು. ಸಂಸದೀಯ ವ್ಯವಹಾರಗಳ ಪ್ರಲ್ಹಾದ್ ಜೋಶಿ ಅವರು ಭಿತ್ತಿಪತ್ರಗಳನ್ನು ಬೀಸದಂತೆ ಪ್ರತಿಪಕ್ಷದ ಸದಸ್ಯರಿಗೆ ಕೈಮುಗಿದು ಮನವಿ ಮಾಡಿಕೊಂಡರು. ಭಿತ್ತಿಪತ್ರಗಳನ್ನು ಹಿಡಿದುಕೊಳ್ಳದಂತೆ ವ್ಯವಹಾರ ಸಲಹಾ ಸಮಿತಿಯ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ ಎಂದು ಹೇಳಿದರು.

   ವಿರೋಧ ಪಕ್ಷದ ಸಂಸದರು ಸಭಾಧ್ಯಕ್ಷ ಬಿರ್ಲಾ ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಪ್ಲಲ್ಹಾದ್ ಜೋಶಿ ಅವರ ಮನವಿಯನ್ನು ನಿರ್ಲಕ್ಷಿಸಿದರು ಮತ್ತು ಘೋಷಣೆಗಳೊಂದಿಗೆ ತಮ್ಮ ಪ್ರತಿಭಟನೆಯನ್ನು ಮುಂದುವರೆಸಿದರು, ಇದರಿಂದಾಗಿ ಸ್ಪೀಕರ್ 12 ಗಂಟೆಯವರೆಗೆ ಸದನದ ಕಲಾಪ ಮುಂದೂಡಿದರು. 

   ಕಳೆದ ಬುಧವಾರ 2001 ರ ಸಂಸತ್ತಿನ ಭಯೋತ್ಪಾದಕ ದಾಳಿಯ ವಾರ್ಷಿಕೋತ್ಸವ ದಿನ ಪ್ರಮುಖ ಭದ್ರತಾ ಉಲ್ಲಂಘನೆಯಲ್ಲಿ, ಇಬ್ಬರು ವ್ಯಕ್ತಿಗಳು – ಸಾಗರ್ ಶರ್ಮಾ ಮತ್ತು ಮನೋರಂಜನ್ ಡಿ – ಶೂನ್ಯ ವೇಳೆಯಲ್ಲಿ ಸಾರ್ವಜನಿಕ ಗ್ಯಾಲರಿಯಿಂದ ಲೋಕಸಭೆಯ ಚೇಂಬರ್‌ಗೆ ಜಿಗಿದು ಬಣ್ಣದ ಹೊಗೆಯನ್ನು ಬಿಡುಗಡೆ ಮಾಡುತ್ತಾ ಘೋಷಣೆಗಳನ್ನು ಕೂಗಿದರು. ಈ ವೇಳೆ ಸಂಸತ್ತಿನ ಆವರಣದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಮಹಿಳೆ ಸೇರಿದಂತೆ ಇಬ್ಬರನ್ನು ಬಂಧಿಸಲಾಗಿತ್ತು. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿC

Recent Articles

spot_img

Related Stories

Share via
Copy link
Powered by Social Snap