ಬೆಂಗಳೂರು
ಬೆಂಗಳೂರಿನ ಜನರಿಗೆ ರಾಜ್ಯ ಸರ್ಕಾರ ಗುಡ್‌ನ್ಯೂಸ್ ನೀಡಿದೆ. ಆಸ್ತಿ ತೆರಿಗೆ ಹೆಚ್ಚಳದ ಬಗ್ಗೆ ತಲೆ ಕೆಡಿಸಿಕೊಂಡಿದ್ದ ಸಿಲಿಕಾನ್ ಸಿಟಿ ಜನರಿಗೆ ಸದ್ಯ ರಿಲೀಫ್ ಸಿಕ್ಕಂತಾಗಿದೆ. 2024-25ನೇ ಸಾಲಿಗೆ ಬೆಂಗಳೂರಿನಲ್ಲಿ ಆಸ್ತಿ ತೆರಿಗೆ ಪರಿಷ್ಕರಣೆಯನ್ನು ರಾಜ್ಯ ಸರ್ಕಾರ ತಳ್ಳಿಹಾಕಿದ್ದು, 2016ರಲ್ಲಿ ಅಳವಡಿಸಿಕೊಂಡ ಲೆವಿ ಲೆಕ್ಕಾಚಾರ ವಿಧಾನವು ಮುಂದುವರಿಯುತ್ತದೆ ಎಂದು ತಿಳಿಸಿದೆ.
ಏಪ್ರಿಲ್ 1ರಿಂದ ಅನ್ವಯವಾಗುವಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ದರ ಏರಿಕೆ ಬಗ್ಗೆ ಸುದ್ದಿ ಹರಿದಾಡುತ್ತಿದ್ದು, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸ್ಪಷ್ಟನೆ ನೀಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಡಿ.ಕೆ ಶಿವಕುಮಾರ್ “ಏಪ್ರಿಲ್ 1ರಿಂದ ಅನ್ವಯವಾಗುವಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ದರ ಏರಿಕೆಯಾಗಲಿದೆ ಎನ್ನುವ ಸುಳ್ಳು ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದು ನನ್ನ ಗಮನಕ್ಕೆ ಬಂದಿದೆ.
ಬಿಬಿಎಂಪಿ ಯಾವುದೇ ಆಸ್ತಿ ತೆರಿಗೆಯನ್ನು ಏರಿಕೆ ಮಾಡಿಲ್ಲ 2016ರಲ್ಲಿ ಸೂಚಿಸಿರುವ ದರದಂತೆಯೇ ಪ್ರಸ್ತುತ ಆಸ್ತಿ ತೆರಿಗೆ ದರಗಳು ಚಾಲ್ತಿಯಲ್ಲಿರುತ್ತವೆ ಹಾಗೂ ಮುಂದುವರಿಯಲಿವೆ. ಬೆಂಗಳೂರಿನ ನಿವಾಸಿಗಳು ಆತಂಕಪಡುವ ಅವಶ್ಯಕತೆಯಿಲ್ಲ ಎಂದು ತಿಳಿಸಿದ್ದಾರೆ.
ಇನ್ನು ಈ ಬಗ್ಗೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಕೂಡ ಪ್ರತಿಕ್ರಿಯಿಸಿದ್ದು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ದರ ಏರಿಕೆ ಬಗ್ಗೆ ಸುಳ್ಳು ಸುದ್ದಿ ಹರಡುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ನಗರ ಪೊಲೀಸ್ ಆಯುಕ್ತರಿಗೆ ತಿಳಿಸಲಾಗಿದೆ. ಸುಳ್ಳು ಸುದ್ದಿಗಳನ್ನು ಅಪ್‌ಲೋಡ್ ಮಾಡುವವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಕರ್ನಾಟಕದಲ್ಲಿ ಭಾರಿ ತೆರಿಗೆ ಹೆಚ್ಚಳವಾಗಲಿದೆ ಎಂದು ಇನ್ಸ್ಟಾಗ್ರಾಮ್ ಪೇಜ್‌ನಲ್ಲಿ ವ್ಯಕ್ತಿಯೊಬ್ಬರು ವಿಡಿಯೋ ಹರಿಯಬಿಟ್ಟಿದ್ದರು. ಬಾಡಿಗೆ ಮನೆಗಳ ಮೇಲಿನ ಆಸ್ತಿ ತೆರಿಗೆ ಎರಡು ಪಟ್ಟು, ವಾಣಿಜ್ಯ ಸಂಸ್ಥೆಗಳ ಮೇಲಿನ ತೆರಿಗೆ 3 ರಿಂದ 5 ಪಟ್ಟು ಹೆಚ್ಚಳವಾಗಲಿದೆ ಎಂದು ಹೇಳಿದ್ದರು. ಇದರಿಂದ ಈ ಸುದ್ದಿ ಎಲ್ಲೆಡೆ ಹರಿದಾಡಿದ್ದು, ಬೆಂಗಳೂರಿನ ನಿವಾಸಿಗಳು ಆತಂಕದಲ್ಲಿದ್ದರು. ಇದೀಗ ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿ ಈ ಬಗ್ಗೆ ಸ್ಪಷ್ಟನೆ ನೀಡಿದೆ.
ಬಿಬಿಎಂಪಿ ಆಸ್ತಿ ತೆರಿಗೆ ಪಾವತಿ ಮಾಡುವವರಿಗೆ ನೀಡುವ ಶೇ.5 ರಷ್ಟು ರಿಯಾಯಿತಿಯು ಈ ಹಿಂದೆ ಆರ್ಥಿಕ ವರ್ಷದ ಮೊದಲ ಎರಡು ತಿಂಗಳು ಅಂದರೆ, ಏಪ್ರಿಲ್ ಮತ್ತು ಮೇ ತಿಂಗಳವರೆಗೆ ಮಾತ್ರ ಅನ್ವಯವಾಗುತ್ತಿತ್ತು. ಇದೀಗ ಈ ಅವಧಿಯನ್ನು ಜುಲೈ 31 ರವರೆಗೆ ವಿಸ್ತರಿಸಲಾಗಿದೆ ಎಂದು ಸಹ ವರದಿಯಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ