ಬೆಂಗಳೂರು:
ಸರ್ಕಾರದ ವಿವಿಧ ಯೋಜನೆಗಳ ಮೂಲಕ ಪತ್ರಕರ್ತರಿಗೆ ಆದ್ಯತೆ ಮೇರೆಗೆ ನಿವೇಶನ ಹಂಚುವ ಕಾರ್ಯಕ್ರಮ ರೂಪಿಸಲಾಗುವುದು. ಈ ಬಗ್ಗೆ ಚರ್ಚಿಸಿ ಶೀಘ್ರದಲ್ಲೇ ಅಧಿಕೃತ ಘೋಷಣೆ ಮಾಡಲಾಗುವುದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.ಕರ್ನಾಟಕ ಮಾಧ್ಯಮ ಅಕಾಡೆಮಿ 2023 ಮತ್ತು 2024ನೇ ಸಾಲಿನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಡಿ.ಕೆ. ಶಿವಕುಮಾರ್ ಅವರು ಮಾತನಾಡಿದರು.
ನಮ್ಮ ಸರ್ಕಾರ ಪತ್ರಕರ್ತರಿಗೆ ನೀಡಿರುವ ಯೋಜನೆಗಳ ಬಗ್ಗೆ ಈಗಾಗಲೇ ಪ್ರಸ್ತಾಪ ಮಾಡಲಾಗಿದೆ. ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್ ವಿತರಣೆ ಮಾಡಲಾಗಿದೆ. ಪತ್ರಕರ್ತರಿಗೆ ಆರೋಗ್ಯ ವಿಮೆ ನೀಡಲು ಚರ್ಚೆ ನಡೆಯುತ್ತಿದೆ. ಗ್ರಾಮೀಣ ಹಾಗೂ ನಗರ ಭಾಗದ ಪತ್ರಕರ್ತರಿಗೆ ಆದ್ಯತೆ ಮೇರೆಗೆ ನಿವೇಶನ ನೀಡುವ ಬಗ್ಗೆ ಆಲೋಚನೆ ಮಾಡಲಾಗುತ್ತಿದೆ. ಪತ್ರಕರ್ತರು ಗೌರವಯುತವಾಗಿ ಬದುಕಲು ಈ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ನಿವೇಶನ ಹಂಚಿಕೆ ಸಂದರ್ಭದಲ್ಲಿ ಬೇರೆಯವರಿಗೆ ನೀಡುವಂತೆ ಮಾಧ್ಯಮದವರಿಗೂ ಆದ್ಯತೆ ನೀಡಲು ಚರ್ಚೆ ಮಾಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಇದನ್ನು ಘೋಷಣೆ ಮಾಡುತ್ತೇವೆ. ಬೆಂಗಳೂರು ನಗರಾಭಿವೃದ್ಧಿ ಸಚಿವನಾಗಿ, ವಿವಿಧ ಯೋಜನಾ ಪ್ರಾಧಿಕಾರದ ಜವಾಬ್ದಾರಿ ವಹಿಸಿಕೊಂಡವನಾಗಿ ನಾನು ಈ ಭರವಸೆ ನೀಡುತ್ತಿದ್ದೇನೆ ಎಂದು ಹೇಳಿದರು.
ನಾನು ಕೆಲವು ವರ್ಷಗಳ ಹಿಂದೆ ತಮಿಳುನಾಡಿನ ರಾಜ್ಯಪಾಲರನ್ನು ಭೇಟಿ ಮಾಡಲು ಹೋದಾಗ ಅವರು ತಮಿಳುನಾಡಿನ ಮಾಧ್ಯಮಗಳ ಸ್ನೇಹಿತರ ಬಗ್ಗೆ ನನ್ನ ಜತೆ ಚರ್ಚೆ ಮಾಡಿದ್ದರು. ಜಯಲಲಿತಾ ಅವರು ಮುಖ್ಯಮಂತ್ರಿಯಾಗಿದ್ದಾಗ ಅವರು ಮೂರು ತಿಂಗಳ ಕಾಲ ಊಟಿ, ಕೊಡೈಕೆನಾಲ್‌ಗೆ ಹೋಗಿದ್ದರು. ಆಗ ಸ್ವತಃ ರಾಜ್ಯಪಾಲರೇ ಇದನ್ನು ಪ್ರಶ್ನಿಸಿ ಮಾಧ್ಯಮಗಳಲ್ಲಿ ಬರೆಯಿರಿ ಎಂದು ಹೇಳಿದರೂ ಮಾಧ್ಯಮಗಳು ಜಯಲಲಿತಾ ಅವರನ್ನು ಪ್ರಶ್ನೆ ಮಾಡಿರಲಿಲ್ಲವಂತೆ ಎಂದು ತಿಳಿಸಿದರು.
ಕರ್ನಾಟಕ ರಾಜ್ಯದಲ್ಲಿ ಮಾಧ್ಯಮಗಳಿಗೆ ಇರುವಷ್ಟು ಸ್ವಾತಂತ್ರ್ಯ ದೇಶದ ಬೇರೆ ಯಾವುದೇ ರಾಜ್ಯಗಳಲ್ಲಿ ಇಲ್ಲ. ದಿನಬೆಳಗಾದರೆ ನೀವು ನಮಗೆ ಹೊಡೆಯುತ್ತಲೇ ಇರುತ್ತೀರಿ, ಟೀಕಿಸಿ ನಮ್ಮನ್ನು ಹಳ್ಳಕ್ಕೆ ಹಾಕುತ್ತಲೇ ಇರುತ್ತೀರಿ, ನಿಮಗೆ ಸಂತೋಷವಾದರೆ ನಮ್ಮನ್ನು ಮೇಲಕ್ಕೆ ಏರಿಸುತ್ತೀರಿ. ನಿಮ್ಮನ್ನು ಬಿಟ್ಟು ನಾವು ಬದುಕಲು ಸಾಧ್ಯವಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾಧ್ಯಮ ನಾಲ್ಕನೇ ಅಂಗ. ಸರ್ಕಾರ, ಅಧಿಕಾರಿಗಳು, ನ್ಯಾಯಾಲಯ ತಪ್ಪು ಮಾಡಿದರೆ ತಿದ್ದುವ ಕೆಲಸ ಮಾಡುವುದು ಮಾಧ್ಯಮ. ಸಂವಿಧಾನ ಜಾರಿಯಾದಾಗಿನಿಂದಲೇ ನಮ್ಮನ್ನು ತಿದ್ದುವ, ಮಾರ್ಗದರ್ಶನ ಹಕ್ಕನ್ನು ನಿಮಗೆ ನೀಡಲಾಗಿದೆ” ಎಂದರು.
ಈ ಹಿಂದಿನ ಸರ್ಕಾರ ಪ್ರತಿಷ್ಠಿತ ಟಿಎಸ್ಆರ್ ಪ್ರಶಸ್ತಿ, ಮೊಹರೆ ಹನುಮಂತರಾಯ ಪ್ರಶಸ್ತಿ, ಪರಿಸರ ಪತ್ರಿಕಾ ಪರಿಷತ್ ನೀಡುವ ಪ್ರಶಸ್ತಿಯನ್ನು ಅನೇಕ ವರ್ಷಗಳಿಂದ ನೀಡಿಲ್ಲ. ಅವರನ್ನು ಟೀಕಿಸಿ ಯಾವುದೇ ಪ್ರಯೋಜನವಿಲ್ಲ. ನಮ್ಮ ಸರ್ಕಾರ ಮತ್ತೇ ಇದಕ್ಕೆ ಜೀವ ನೀಡಿದೆ. ರಘುರಾಮ್ ಶೆಟ್ಟಿ ಅವರ ಹೆಸರಿನಲ್ಲಿ ಪ್ರಶಸ್ತಿ ನೀಡಬೇಕು ಎಂಬ ಬೇಡಿಕೆ ಬಗ್ಗೆ ಚರ್ಚೆ ನಡೆಯುತ್ತಿದೆ. ಬೆಲೆ ಏರಿಕೆ ಹಿನ್ನೆಲೆಯಲ್ಲಿ ಪ್ರಶಸ್ತಿ ಮೊತ್ತವನ್ನು ಹೆಚ್ಚಳ ಮಾಡಲು ಸರ್ಕಾರ ತೀರ್ಮಾನಿಸಿದೆ ಎಂದು ಹೇಳಿದರು.
ನೀವು ಸತ್ಯವನ್ನು ಬರೆಯಬಹುದು, ಸತ್ಯವನ್ನು ನುಡಿಯಬಹುದು, ಸತ್ಯಕ್ಕೆ ಗೌರವಿಸುವುದು ಪತ್ರಕರ್ತರು ಹಾಗೂ ರಾಜಕಾರಣಿಗಳ ಕರ್ತವ್ಯ. ಜನಸೇವೆ ಮತ್ತು ದೇಶಸೇವೆ ಪತ್ರಿಕೋದ್ಯಮದ ಏಕೈಕ ಗುರಿ ಎಂಬ ಮಹಾತ್ಮ ಗಾಂಧಿ ಅವರ ಹೇಳಿಕೆಯನ್ನು ಅಕಾಡೆಮಿಯ ಅಧ್ಯಕ್ಷರು ತಿಳಿಸಿದರು. ನಮ್ಮ ಸರ್ಕಾರ ಕೂಡ ಮಹಾತ್ಮ ಗಾಂಧಿ ಅವರು ಸ್ವಾತಂತ್ರ್ಯ ಹೋರಾಟದ ನೇತೃತ್ವ ವಹಿಸಿದ ಬೆಳಗಾವಿ ಅಧಿವೇಶನದ ಶತಮಾನೋತ್ಸವ ಕಾರ್ಯಕ್ರಮವನ್ನು ನಡೆಸಿದ್ದೇವೆ. ಇಂದಿನ ಕಾರ್ಯಕ್ರಮದಲ್ಲಿ ಪತ್ರಕರ್ತರ ಜತೆಗೆ ಅವರ ಕುಟುಂಬದವರನ್ನು ಭೇಟಿ ಮಾಡುತ್ತಿರುವುದು ಸಂತೋಷದ ವಿಚಾರ ಎಂದರು.
ಮಾಧ್ಯಮಗಳಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ. ಸರ್ಕಾರ ಬದಲಿಸುವ, ನಾಯಕರನ್ನು ಬೆಳೆಸುವ ಮಾಧ್ಯಮಗಳ ಶಕ್ತಿಯನ್ನು ನಾವು ನೋಡಿದ್ದೇವೆ. ಆದರೆ ಸುಳ್ಳು ಸುದ್ದಿ ಎಂಬುದನ್ನು ನೀವು ಯಾವ ರೀತಿ ನಿಯಂತ್ರಿಸುತ್ತೀರಿ ಎಂಬುದು ಮುಖ್ಯ. ಇತ್ತೀಚೆಗೆ ಮಾಧ್ಯಮಗಳ ಪರಿಸ್ಥಿತಿ ನೋಡಿ ನನ್ನ ಮಗಳು ನಮ್ಮ ಶಿಕ್ಷಣ ಸಂಸ್ಥೆಯಲ್ಲೇ ಮಾಧ್ಯಮ ನಿರ್ವಹಣೆ ಕೋರ್ಸು ಆರಂಭಿಸಬೇಕು ಎಂದು ಚರ್ಚೆ ಮಾಡಿದ್ದಾಳೆ. ಈ ವರ್ಷದಿಂದ ನಮ್ಮ ಸಂಸ್ಥೆಯಲ್ಲೂ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಕೋರ್ಸ್ ಆರಂಭಿಸಲಾಗುವುದು ಎಂದರು.
ಪತ್ರಕರ್ತರು ಬಲಿಷ್ಠವಾಗಬೇಕು. ನೀವು ಬಲಿಷ್ಠವಾದರೆ ನಾವು ಬಲಿಷ್ಠರಾಗುತ್ತೇವೆ. ನಾವು ಬಲಿಷ್ಠವಾಗಿದ್ದರೆ, ನೀವು ಬಲಿಷ್ಠವಾಗಿರುತ್ತೀರಿ. ನಾವು ರಾಜ್ಯದ ಆರ್ಥಿಕ ಪರಿಸ್ಥಿತಿ ನೋಡಿಕೊಂಡೆ ಐದು ಗ್ಯಾರಂಟಿ ಯೋಜನೆ ನೀಡಿದ್ದೇವೆ. ಬೆಲೆ ಏರಿಕೆ ಮಧ್ಯೆ ಜನರಿಗೆ ನೆರವಾಗಲು ದಿಟ್ಟ ತೀರ್ಮಾನ ಮಾಡಿ ₹56 ಸಾವಿರ ಕೋಟಿ ನೀಡುತ್ತಿದ್ದೇವೆ. ನಮ್ಮ ಯೋಜನೆ ನೋಡಿ ಲೇವಡಿ, ಟೀಕೆ ಮಾಡಿದರು. ಮಹಿಳೆಯರಿಗೆ ಆರ್ಥಿಕ ಶಕ್ತಿ ತುಂಬಲು ಕಾರ್ಯಕ್ರಮ ರೂಪಿಸಿದ್ದೇವೆ. ವಿರೋಧ ಪಕ್ಷದವರು ನಮ್ಮ ಯೋಜನೆ ಟೀಕಿಸಿ, ಬೇರೆ ರಾಜ್ಯಗಳಲ್ಲಿ ನಮಗಿಂತ ಮೊದಲೇ ಇಂತಹ ಯೋಜನೆ ಘೋಷಿಸುತ್ತಿದ್ದಾರೆ ಎಂದು ಹೇಳಿದರು.
ಜನರ ಬದುಕಿನಲ್ಲಿ ಸಹಾಯ ಮಾಡಿ, ಸಾಮಾಜಿಕ ಭದ್ರತೆ ಕಾಪಾಡಲು ನಮ್ಮ ಸರ್ಕಾರ ಮುಂದಾಗಿದೆ. ಮಾಧ್ಯಮಗಳು ಕರ್ನಾಟಕದ ಸ್ವಾಭಿಮಾನಕ್ಕೆ ಧಕ್ಕೆ ಬಾರದ ರೀತಿ ಕಾರ್ಯ ನಿರ್ವಹಿಸಬೇಕು. ಕರ್ನಾಟಕ ಹಾಗೂ ಬೆಂಗಳೂರಿಗೆ ವಿಶೇಷವಾದ ಶಕ್ತಿ ಇದ್ದು, ಉತ್ತಮವಾದ ಶಿಕ್ಷಣ, ಮಾನವ ಸಪನ್ಮೂಲದ ಗುಣಮಟ್ಟ ಇಲ್ಲಿದೆ. ಬೇರೆ ರಾಜ್ಯದ ಪ್ರತ್ರಕರ್ತರಿಗಿಂತ ನೀವು ಯಾವುದರಲ್ಲೂ ಕಡಿಮೆ ಇಲ್ಲ ಎಂದರು.
ಮಾಧ್ಯಮಗಳು ಈಗ ಪ್ರಾದೇಶಿಕವಾಗಿ ವಿಭಾಗಗಳಿವೆ. ಗ್ರಾಮೀಣ ಪ್ರದೇಶಗಳಲ್ಲೂ ಹೊಸ ಮಾಧ್ಯಮಗಳು ಶಕ್ತಿಶಾಲಿಯಾಗಿ ಬೆಳೆಯುತ್ತಿವೆ. ಹಳ್ಳಿಯಿಂದ ಬಂದ ನಾವು ಬೆಂಗಳೂರಿನಲ್ಲಿ ರಾಜಕಾರಣ ಮಾಡುವ ರೀತಿ, ನೀವು ಎಲ್ಲಿಂದಾದರೂ ಬಂದರೂ ನಿಮ್ಮ ಪ್ರತಿಭೆ ಮೂಲಕ ಯಾವ ಹಂತಕ್ಕೆ ಬೇಕಾದರೂ ಬೆಳೆಯಬಹುದು. ನಿಮ್ಮೆಲ್ಲರಿಗೂ ಶುಭವಾಗಲಿ, ನಿಮ್ಮ ಆಶೀರ್ವಾದ ನನ್ನ ಮೇಲೆ, ನಮ್ಮ ಸರ್ಕಾರದ ಮೇಲೆ ಇರಲಿ ಎಂದು ತಿಳಿಸಿದರು.