ಬೀದರ್:
ಬೀದರ್ ನಗರದ ಹೊರವಲಯದಲ್ಲಿರುವ ಮೈಲೂರಿನಲ್ಲಿರುವ ಗುರುನಾನಕ್ ದೇವ್ ಪದವಿ ಕಾಲೇಜಿನಲ್ಲಿ ಬುಧವಾರ ಎರಡು ಸಮುದಾಯದ ವಿದ್ಯಾರ್ಥಿಗಳು ಪರಸ್ಪರ ಹೊಡೆದಾಡಿಕೊಂಡಿದ್ದರಿಂದ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.
ಗುರುನಾನಕ್ ದೇವ್ ಪದವಿ ಕಾಲೇಜಿನಲ್ಲಿ ಮೇ 31 ರಂದು ಯುವಜನೋತ್ಸವವನ್ನು ಆಯೋಜಿಸಲು ನಿರ್ಧರಿಸಲಾಗಿದ್ದು, ವಿದ್ಯಾರ್ಥಿಗಳು ಬುಧವಾರ ಅಭ್ಯಾಸ ನಡೆಸುತ್ತಿದ್ದರು ಎಂದು ಬೀದರ್ ಜಿಲ್ಲಾಧಿಕಾರಿ ಗೋವಿಂದ್ ರೆಡ್ಡಿ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದರು
ನಾಟಕ ಅಭ್ಯಾಸ ಮಾಡುತ್ತಿದ್ದಾಗ ನಾಟಕದ ಭಾಗವಾಗಿದ್ದ ಇಬ್ಬರು ‘ಜೈ ಶ್ರೀ ರಾಮ್’ ಘೋಷಣೆ ಕೂಗಿದರು. ಇದಕ್ಕೆ ಇನ್ನೊಂದು ಸಮುದಾಯದ ವಿದ್ಯಾರ್ಥಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ, ಘೋಷಣೆ ಕೂಗಿದ ವಿದ್ಯಾರ್ಥಿಗಳ ಮೇಲೆ ಇಬ್ಬರು ಹಲ್ಲೆ ನಡೆಸಿದ್ದಾರೆ. ಇದೇ ವೇಳೆ ಕ್ಯಾಂಪಸ್‌ನಲ್ಲಿ ಎರಡೂ ಸಮುದಾಯಗಳ ವಿದ್ಯಾರ್ಥಿಗಳು ಜಗಳ ಆರಂಭಿಸಿದ್ದು ನೂಕುನುಗ್ಗಲು ಉಂಟಾಗಿ ಮಾರಾಮಾರಿ ನಡೆದಿದೆ.
ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು ಎರಡು ಗುಂಪುಗಳನ್ನು ಪ್ರತ್ಯೇಕಿಸಿ ಪರಿಸ್ಥಿತಿ ಸುದಾರಿಸಿದರು. ಸದ್ಯ ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿದ್ದು, ನಿಷೇಧಾಜ್ಞೆ ಹೇರುವ ಅಗತ್ಯವಿರಲಿಲ್ಲ. ಕಾಲೇಜು ಮತ್ತು ಸುತ್ತಮುತ್ತ ಪೊಲೀಸ್ ಭದ್ರತೆಯನ್ನು ಬಿಗಿಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಅಲ್ಲದೇ ಕಾಲೇಜು ಆಡಳಿತ ಮಂಡಳಿ ಯುವಜನೋತ್ಸವವನ್ನು ರದ್ದುಗೊಳಿಸಿದೆ ಎಂದು ಹೇಳಿದ್ದಾರೆ. ‘ಜೈ ಶ್ರೀರಾಮ್’ ಘೋಷಣೆಗಳನ್ನು ಕೂಗಿದ ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ಮೂಲಗಳು ತಿಳಿಸಿವೆ. ಮೆಡಿಕೋ-ಲೀಗಲ್ ಪ್ರಕರಣವನ್ನು ದಾಖಲಿಸಿದ ನಂತರ ಅವರನ್ನು ತಪಾಸಣೆಗೆ ಒಳಪಡಿಸಲಾಯಿತು. ಅವರಿಗೆ ಯಾವುದೇ ಗಾಯಗಳಾಗಿಲ್ಲ ಎಂದು ತಿಳಿದು ಬಂದಿದೆ.