ಲೋಕಕ್ಕೆ ಬೆಳಕಾದ ತ್ರಿವಿಧ ದಾಸೋಹಿ

ತುಮಕೂರು:

ಇಂದು ವಿಶ್ವದಲ್ಲೇ ವೈಶಿಷ್ಟ್ಯದಿಂದ ಕೂಡಿರುವ `ದಾಸೋಹ ದಿನ’. ಭೂಮಿಯ ಮೇಲೆ ನಡೆದಾಡುವ ದೇವರೆನ್ನಿಸಿದ್ದ ಶಿವ ಸ್ವರೂಪಿ ಡಾ.ಶ್ರೀ ಶಿವಕುಮಾರ ಮಹಾಸ್ವಾಮಿಗಳು ಲಿಂಗೈಕ್ಯರಾದ ದಿನ. ತ್ರಿವಿಧ ದಾಸೋಹಿಗಳಾಗಿದ್ದ ಶ್ರೀ ಶಿವಕುಮಾರ ಸ್ವಾಮಿಗಳ ಬದುಕಿನ ಸರಸ್ವವೇ ಆಗಿದ್ದ ಅನ್ನದಾಸೋಹ, ಶಿಕ್ಷಣ ದಾಸೋಹ, ಜ್ಞಾನ ದಾಸೋಹಗಳನ್ನು ಕರ್ನಾಟಕ ಸರ್ಕಾರ ಮೂರ್ತಗೊಳಿಸಿ ರಾಜ್ಯಕ್ಕೆ ಕೊಟ್ಟ ದಿನ.

ದಾಸೋಹದ ಒಳ ಅರ್ಥವನ್ನು ಬಲ್ಲ ರಾಜ್ಯದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ವಾಮೀಜಿಯವರು ದೇಹತ್ಯಾಗ ಮಾಡಿದ ದಿನವನ್ನು `ದಾಸೋಹ ದಿನ’ ಎಂದು ಘೋಷಿಸಿದ ಚರಿತ್ರಾರ್ಹ ದಿನ. ಅವರ ನಂತರ ಬಂದ ಮುಖ್ಯಮಂತ್ರಿಗಳು `ದಾಸೋಹ’ ದಿನಕ್ಕೆ ಮಹತ್ವ ಕೊಟ್ಟು ಚಿರಸ್ಥಾಯಿಯಾಗಿ ಮಾಡಿದ್ದಾರೆ.

ಇದು ಹಸಿದ ಹೊಟ್ಟೆಗಾಗಿ ಹಪಹಪಿಸುತ್ತಿರುವವರಿಗೆ ಧಾನ್ಯ ದಾಸೋಹ, ಶಾಲಾಮಕ್ಕಳಿಗೆ ಅನ್ನ ದಾಸೋಹ, ಜ್ಞಾನ ದಾಸೋಹ ಹೀಗೆ ಹಲವು ಹತ್ತಾರು ದಾಸೋಹಗಳು ನಡೆಯುತ್ತಾ ಸ್ವಾಮೀಜಿಯವರ ಚಿಂತನೆಗೆ ಸಾಕಾರ ರೂಪ ದೊರೆಯುತ್ತಿದೆ ಕನ್ನಡ ನಾಡಿನಲ್ಲಿ.

ದಾಸೋಹವೆಂದರೆ ಅಹಂಕಾರವಳಿದು ತನು, ಮನ, ಧನಗಳನ್ನಳಿದು, ಗುರುಲಿಂಗ ಜಂಗಮಕ್ಕೆ (ಸಮಾಜಕ್ಕೆ) ದಾಸೋಹ ಭಾವದಿಂದ ಮಾಡುವ ಕೈಂಕರ್ಯ. 12ನೇ ಶತಮಾನದಲ್ಲಿ ಕಲ್ಯಾಣದಲ್ಲಿ ನಡೆದ ಸಮಾಜೋಧಾರ್ಮಿಕ ಕ್ರಾಂತಿಯ ವಿಶಾಲ ಸಮುದ್ರದಿಂದ ಬಸವಾದಿ ಶರಣರು ಸಮಾಜವೆಂಬ ಕಡಲನ್ನು ಶುದ್ಧ ಶುಭ್ರ ಮನದಿಂದ ಕಡೆದು ತೆಗೆದ ನವನೀತ ಸಿದ್ಧಾಂತ.

ಅಹಂಕಾರವಳಿದು ಚಿತ್ತ ಶುದ್ಧಿಯುಂಟಾಗಿ ಶಿವಕೃಪೆ ದೊರೆತಾಗ ಮನುಷ್ಯ ದಾಸೋಹಿಯಾಗಬಲ್ಲ. ಬಸವಣ್ಣನವರ ಮಾತುಗಳಲ್ಲಿ-ದಾಸೋಹಂಭಾವ ಸಂಯುಕ್ತಃ ಸರ್ವಾಚಾರ ವಿಯುಕ್ತ ಕಃ, ದಾಸೋಹಂ ಧನ್ಯತಾ ಹೇತುರ್ದಾಸೋಂ ಜನನಾಶನಮ್. ಸೋಹಂ ಎಂಬುದು ಅಂತರಂಗದ ಮದ ನೋಡಯ್ಯ, ಶಿವೋಹಂ ಎಂಬುದು ಬಹಿರಂಗದ ಮದ ನೋಡಯ್ಯ, ಈ ದ್ವಂದ್ವವಳಿದು ದಾಸೋಹಂ ಎಂದೆನಿಸಯ್ಯ.

“ನಿಮ್ಮ ಭೃತ್ಯರು ಬಂದುದಿಲ್ಲಿಗೆ ನಿಮ್ಮ ದಾಸೋಹಂ ಮಿಗಿಲು ಮಿಗಿಲು ಮಾಡಿಸಿಕೊಳ್ಳುತಂ ಮುನ್ನಿನಂದಪದಲಿ’’
ಜಂಗಮರು ತೃಪ್ತಿಗೊಳ್ಳುವಂತೆ ಸೇವಾ ಮನೋಭಾವದಿಂದ ಮಾಡುವ ಅನ್ನಸಂತರ್ಪಣೆ ಹಾಗೂ ಜಂಗಮ ಸಮಾರಾಧನೆ ನಿಮ್ಮನ್ನು ಪೂಜಿಸುವ ಸಂತೋಷಕ್ಕಿಂತ ಮಿಗಿಲು. ಬಸವಣ್ಣನವರು ದಾಸೋಹದ ಸವಿಯನ್ನು ಕುರಿತು ಮತ್ತಷ್ಟು ಹೇಳುತ್ತಾರೆ.

`ಅಯ್ಯಾ ನಿಮ್ಮ ಶರಣರ ದಾಸೋಹಕ್ಕೆ ತನು, ಮನ, ಧನ ಸವೆವಂತೆ ಮಾಡಯ್ಯ, ತನು ದಾಸೋಹಕ್ಕೆ ಉಬ್ಬುವಂತೆ ಮಾಡಯ್ಯ, ಮನ ದಾಸೋಹಕ್ಕೆ ಮಿಡಿಯುವಂತೆ ಮಾಡಯ್ಯ, ಧನ ದಾಸೋಹಕ್ಕೆ ಸವೆದು ನಿಮ್ಮ ಶರಣರ ಪ್ರಸಾದದಲ್ಲಿ ನಿರಂತರ ಆಡಿ, ಹಾಡಿ, ನೋಡಿ, ಕೂಡಿ, ಭಾವಿಸಿ, ಸುಖಿಸಿ, ಪರಿಣಾಮಿಸುವಂತೆ ಮಾಡಯ್ಯ.

ದಾಸೋಹದ ಬಗ್ಗೆ ಹೇಳುವಾಗ `ಕಾಯಕ’ ದ ಬಗ್ಗೆಯೂ ಗಮನವಿರಲೇಬೇಕು. ಕೆಲಸ, ವೃತ್ತಿ, ಉದ್ಯೋಗ ಎಂಬ ಅಥರ್Àದಲ್ಲಿ ವಚನಕಾರರ ಕಾಲದವರೆಗೂ ಬಳಕೆಯಲ್ಲಿತ್ತು. ಬಸವಾದಿ ಶರಣರು ಈ ಶಬ್ದಕ್ಕೆ ವಿಶಿಷ್ಟವಾದ ತತ್ವವನ್ನು ಅಳವಡಿಸಿದರು. ಉದ್ಯೋಗದಲ್ಲಿ ಮೇಲು ಕೀಳುಗಳನ್ನರಸದೆ ಶಿವಾರ್ಪಣ ಭಾವದಿಂದ ದುಡಿಯುವುದು ಕಾಯಕವಾದರೆ, ದುಡಿಮೆಯಿಂದ ಬಂದದ್ದನ್ನು ಹಂಚಿ ಉಣ್ಣುವುದು ದಾಸೋಹವಾಯಿತು.

ಭಕ್ತರಲ್ಲಿ ಕುಲ, ಹೊಲೆಗಳಿಲ್ಲದಂತೆ ಕಾಯಕದಲ್ಲಿ ಕೂಡ ಮೇಲು-ಕೀಳುಗಳ ಸ್ತರವಿಲ್ಲದೆ ಸತ್ಯ-ಶುದ್ಧ ಕಾಯಕ ರೂಪುಗೊಂಡಿತು. ಬಸವಣ್ಣನವರು ಹೇಳುವಂತೆ ಶರಣರಿಲ್ಲದೆ (ಜನ) ಸ್ವಾರ್ಥಕ್ಕಾಗಿ ಗಳಿಸುವ ಹಣ ವ್ಯರ್ಥ. “ಪಾಪಿಯ ಧನ ಪ್ರಾಯಶ್ಚಿತ್ತಕ್ಕಲ್ಲದೆ ಸತ್ಪಾತ್ರಕ್ಕೆ ಸಲ್ಲದಯ್ಯ’’. ಸತ್ಯ ಶುದ್ಧ ಕಾಯಕದಿಂದ ಗಳಿಸಿದ ಹಣ ಸತ್ಪಾತ್ರಕ್ಕೆ ಬಳಕೆಯಾಗಬೇಕು. ಅದು ಉಳ್ಳವರಿಗಿಂತ ಇಲ್ಲದವರಿಗೆ ದೊರೆಯಬೇಕು.

ಶರಣರ ಕಾಯಕಗಳು ಸಮಾಜದ ಬದುಕಿಗೆ ಬೇಕಾದ ಎಲ್ಲಾ ಅಗತ್ಯಗಳನ್ನೂ ಪೂರೈಸುವಂತಿದ್ದವು. ಶರಣ ಸಮಾಜದಲ್ಲಿ ಎಲ್ಲರೂ ಕಾಯಕ ಮಾಡಲೇಬೇಕಿತ್ತು. ಅಲ್ಲಿ ಸೋಮಾರಿತನಕ್ಕೆಡೆಯಿರಲಿಲ್ಲ. ಭಿಕ್ಷಾವೃತ್ತಿಗೆ ಅವಕಾಶವಿಲ್ಲ. ಇಂಥ ಕಾಯಕ ತತ್ವಕ್ಕೆ ಹೊಂದಿಕೊಂಡಂತಹ ಒಂದು ಅದ್ಭುತ ತತ್ವವೇ ದಾಸೋಹ ತತ್ವ.

ಅದು ಉಳ್ಳವರು ಇಲ್ಲದವರಿಗೆ ಯಾವ ಪ್ರತಿಫಲಾಪೇಕ್ಷೆಯೂ ಇಲ್ಲದೆ ನೀಡುವುದು. ಇದೇ ದಾಸೋಹ. ಇದೇ ಸಮುದಾಯದಲ್ಲಿ ಸಮಾನತೆ ಮತ್ತು ಸಹಕಾರ ಮನೋಭಾವವನ್ನು ಮೂಡಿಸುವ ತಂತ್ರ. ನಾನು ಉಪಕಾರಿ, ಸಮುದಾಯಕ್ಕೆ ಒಳ್ಳೆಯದನ್ನು ಮಾಡಿದ್ದೇನೆ ಎಂಬ ಭಾವ ಮೂಡಬಾರದು.. “ಮಾಡಿದೆನೆಂಬುದು ಮನದಲ್ಲಿ ಹೊಳೆದರೆ ಏಡಿಸಿ ಕಾಡಿತ್ತು ಶಿವನ ಡಂಗುರ’’.

ಶರಣ ಸಿದ್ಧರಾಮಯ್ಯನವರ ಭಾವನೆಯೂ ಇದೇ ಆಗಿತ್ತು. ದಾಸೋಹಕ್ಕೆ ಸಂದಿದ್ದು ಶಿವನಿಗೆ ಸಂದಿತು ಎಂಬ ಭಾವವಿರಬೇಕು. ದಾಸೋಹದಲ್ಲಿ ವ್ಯಷ್ಟಿ ಹಿತವೂ ಇದೆ. ಸಮಷ್ಟಿ ಹಿತವೂ ಇದೆ. ದಾಸೋಹದಲ್ಲಿ ಅಹಮಿಕೆಗೆ ಎಡೆಯಿಲ್ಲ. ಈ ತತ್ವದಲ್ಲಿ ಸರ್ವವೂ ಶಿವನಿಗೆ ಸೇರಿದ್ದು ಎಂಬ ಭಾವ. ಶಿವನ ಸೊಮ್ಮು ಶಿವನಿಗರ್ಪಿತ ಎಂಬ ನಿಸ್ಪøಹ ಭಾವವಿದೆ.

ಆಗ- “ಉಂಡು ತೇಗಿತು ಲೋಕ ಕೊಂಡಾಡಿ ಕಾಯಕವ, ಕಂಡ ಕಂಡಲ್ಲಿ ದಾಸೋಹ ಕಾಯಕವ ಕಂಡ ಜೀವನದ ಹೊಸ ಮಾತು’’ ಈ ಮಾತುಗಳೆಲ್ಲವೂ 21ನೇ ಶತಮಾನದಲ್ಲಿ ಸಿದ್ಧಗಂಗಾ ಮಠದಲ್ಲಿ ಆವಿರ್ಭವಿಸಿದವು. ಶ್ರೀ ಸಿದ್ಧಗಂಗಾ ಶ್ರೀಗಳು ಬಸವಣ್ಣನವರ ಅವತಾರಿಯಾಗಿ ಶೋಭಿಸಿದರು.

ಲಕ್ಷದ ಮೇಲೆ ತೊಂಭತ್ತಾರು ಸಾವಿರ ಜಂಗಮರು ದಾಸೋಹಕ್ಕೆ ಸೇರುತ್ತಿದ್ದಂತೆ ತಂಡೋಪತಂಡವಾಗಿ ಆಗಮಿಸಿ ದಾಸೋಹದಲ್ಲಿ ಪಾಲ್ಗೊಂಡು ಉಂಡು ತೇಗಿ ನಲಿದಾಡಿದರು, ಅಭಿನವ ಬಸವಣ್ಣನನ್ನು, ಕಾಣದ ಕಲ್ಯಾಣವನ್ನು ಕಂಡು ಹಾಡಿ, ಹರಸಿ ನಲಿದಾಡಿದರು. ಶ್ರೀಗಳು ಅಲ್ಲೇ ನೆಲೆಸಿಹರೆಂಬ ಭಾವ. ನಮ್ಮೆಲ್ಲರನ್ನು ಹರಸುತ್ತಿದ್ದಾರೆಂಬ ನಂಬಿಕೆ, ಇಂದಿಗೂ ಶ್ರೀಗಳ ಹಾರೈಕೆಯಂತೆ ನಡೆಯುತ್ತಿದೆ ತ್ರಿವಿಧ ದಾಸೋಹ. ಎಂದೆಂದೂ ಬೆಳಗುತಿರಲಿ ಶ್ರೀ ಸಿದ್ಧಗಂಗಾ.

-ಪ್ರೇಮ ಮಲ್ಲಣ್ಣ, ಲೇಖಕಿ, ತುಮಕೂರು.

              ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link