ಹಳ್ಳಿ ಹಳ್ಳಿಗಳಲ್ಲಿ ಮದ್ಯದ ಹೊಳೆ

ಬೆಳಗಾವಿ:

                     ರಾಜ್ಯದ ಹಳ್ಳಿ-ಹಳ್ಳಿಗಳಲ್ಲಿ ಮದ್ಯ ಹರಿಯುತ್ತಿದ್ದು ತನ್ನ ಆದಾಯಕ್ಕಾಗಿ ಈ ಪಿಡುಗನ್ನು ನೋಡಿಯೂ ಸರ್ಕಾರ ಸುಮ್ಮನಿದೆ ಎಂದು ಪಕ್ಷಭೇದ ಮರೆತು ಶಾಸಕರು ಆಕ್ರೋಶ ವ್ಯಕ್ಯಪಡಿಸಿದ ಬೆಳವಣಿಗೆ ವಿಧಾನಸಭೆಯಲ್ಲಿ ನಡೆದಿದೆ.

ಪ್ರಶ್ನೋತ್ತರ ವೇಳೆಯಲ್ಲಿ ಸದಸ್ಯರಾದ ತುಕಾರಾಂ, ರೂಪಕಲಾ, ನಂಜೇಗೌಡ, ಎಂ.ಪಿ.ಕುಮಾರಸ್ವಾಮಿ ಸೇರಿದಂತೆ ಹಲ ಶಾಸಕರು ಮಾತನಾಡಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಈ ಹೊತ್ತು ರಾಜ್ಯದ ಪ್ರತಿ ಜಿಲ್ಲೆಯ ಹಳ್ಳಿ-ಹಳ್ಳಿಗಳಲ್ಲಿ ಮದ್ಯ ಮಾರಾಟವಾಗುತ್ತಿದೆ. ಆದರೆ ಇದನ್ನು ನೋಡಿಯೂ ಸರ್ಕಾರ ಸುಮ್ಮನಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರಾಜ್ಯದಲ್ಲಿ 1992 ರಿಂದ ಮದ್ಯದ ಅಂಗಡಿಗಳನ್ನು ನೀಡಿಲ್ಲ ಎಂದು ಸರ್ಕಾರ ಹೇಳುತ್ತದೆ. ಇತ್ತೀಚಿನ ವರ್ಷಗಳಲ್ಲಿ 568 ಬಾರ್ ಅಂಡ್ ರೆಸ್ಟೋರೆಂಟ್‍ಗಳಿಗೆ ಮಾತ್ರ ಪರವಾನಗಿ ನೀಡಿರುವುದಾಗಿ ಹೇಳುತ್ತಿದೆ. ಆದರೆ ಈ ಹೊತ್ತು ರಾಜ್ಯದ ಹಳ್ಳಿ-ಹಳ್ಳಿಗಳಲ್ಲಿ ಮದ್ಯ ಮಾರಾಟವಾಗುತ್ತಿದೆ. ಕಿರಾಣಿ ಅಂಗಡಿಗಳಲ್ಲೂ ಮದ್ಯ ಸಿಗುತ್ತಿದೆ ಎಂದರೆ ಪರಿಸ್ಥಿತಿ ಯಾವ ಮಟ್ಟದಲ್ಲಿ ಆತಂಕಕಾರಿಯಾಗಿದೆ ಎಂಬುದನ್ನು ಊಹಿಸಬಹುದು ಎಂದು ವಾಗ್ದಾಳಿ ನಡೆಸಿದರು.

ಹೀಗೆ ಎಲ್ಲ ಕಡೆ ಮದ್ಯ ಮಾರಾಟವಾಗುತ್ತಿರುವುದರಿಂದ ಯುವ ಜನತೆ ಹಾಳಾಗುತ್ತಿದೆ, ಸಂಸಾರಗಳು ಒಡೆದು ಹೋಗುತ್ತಿವೆ. ಜನರ ಆರೋಗ್ಯ ಹದಗೆಟ್ಟು ಹೋಗುತ್ತಿದೆ. ಇವರು ನಿರ್ದಿಷ್ಟ ಜಾಗಗಳಿಂದ ನೂರು ಮೀಟರ್ ಅಂತರದಲ್ಲಿ ಮದ್ಯದಂಗಡಿಗಳು ಇರಬೇಕು ಎನ್ನುತ್ತಾರೆ. ಆದರೆ ಅಂತಹ ಯಾವ ನಿಯಮವೂ ಜಾರಿಯಾಗುತ್ತಿಲ್ಲ. ಎಲ್ಲಿ ಬೇಕಾದಲ್ಲಿ ಮದ್ಯ ಸಿಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸರ್ಕಾರದ ಯಾವ ಯೋಜನೆಗಳು ಪರಿಣಾಮಕಾರಿಯಾಗಿ ಜಾರಿಯಾಗದಿರಬಹುದು. ಅವರು ಕೊಡುವ ಸವಲತ್ತು ತಲುಪದಿರಬಹುದು. ಆದರೆ ಮದ್ಯ ಮಾತ್ರ ಎಲ್ಲೆಡೆ ತಲುಪುತ್ತಿದೆ. ಆದಾಯ ಹೆಚ್ಚಳವಾಗಬೇಕು ಎಂಬ ಕಾರಣಕ್ಕಾಗಿ ಇದನ್ನೆಲ್ಲ ನೋಡಿಕೊಂಡು ಸರ್ಕಾರ ಸುಮ್ಮನಿದೆ. ಇದು ಸರಿಯಲ್ಲ. ಆದಾಯ ಬರುತ್ತದೆ ಎಂದು ಜನರ ಜೀವದ ಬಗ್ಗೆ ನಿರ್ಲಕ್ಷ್ಯ ಮಾಡುವುದು ಸರಿಯಲ್ಲ ಎಂದರು.

ಈ ಮಧ್ಯೆ ಹಲವು ಕಡೆ ಕಲಬೆರಕೆ ಮದ್ಯವೂ ಸೇರಿಕೊಂಡಿದೆ. ಇದು ಇಲಾಖೆಯ ಅಧಿಕಾರಿಗಳಿಗೆ ಗೊತ್ತಿದ್ದರೂ ಮೌನ ವಹಿಸಿದ್ದಾರೆ. ಈಗಾಗಲೇ ಪರಿಸ್ಥಿತಿ ಕೈ ಮೀರಿದೆ. ಈಗಲೂ ಇದನ್ನು ಗಂಭೀರವಾಗಿ ಪರಿಗಣಿಸದಿದ್ದರೆ ದೊಡ್ಡ ಅಪಾಯ ಕಾದಿದೆ. ಹಳ್ಳಿಗಾಡಿನಲ್ಲಿ ಮದ್ಯದ ಹಾವಳಿಯಿಂದ ಹೆಣ್ಣು ಮಕ್ಕಳು ಆತಂಕಗೊಂಡಿದ್ದಾರೆ. ಈ ಆತಂಕ ಮದ್ಯ ಮಾರಾಟವಾಗುವ ಜಾಗಗಳ ಮೇಲೆ ನುಗ್ಗಿ ದಾಳಿ ಮಾಡುವ ಪ್ರವೃತ್ತಿ ಬೆಳೆಯಬಹುದು ಎಂದು ಎಚ್ಚರಿಸಿದರು.

ಶಾಸಕರ ಮಾತುಗಳಿಗೆ ಪ್ರತಿಕ್ರಿಯಿಸಿದ ಅಬಕಾರಿ ಸಚಿವ ಕೆ.ಗೋಪಾಲಯ್ಯ, ಈ ರೀತಿ ಕಾನೂನು ಬಾಹಿರವಾಗಿ ಮದ್ಯ ಮಾರಾಟ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಕಲಬೆರಕೆ ಮದ್ಯ ಮಾರಾಟವಾಗುವುದನ್ನು ತಡೆಯಲು ಗೌಪ್ಯ ದಾಳಿಗಳನ್ನು ನಡೆಸುವುದಾಗಿ ಅವರು ಹೇಳಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap