‘1925ರಿಂದ 1929ರವರೆಗೆ ಸಹಜವಾಗಿ ಉಬ್ಬಿತ್ತು. ಕೃತಕವಾಗಿ ಉಬ್ಬಿಸಿರಲಿಲ್ಲ. ಆದರೆ, ಈಗಿನದು ಹೊಸತು. ಇಂಥದ್ದು ಈ ಹಿಂದೆ ಆಗಿದ್ದಿರಲಿಲ್ಲ. ಹ್ಯಾಂಗೋವರ್ ಇಳಿಸಲು ಏನು ಮಾಡುತ್ತೀರಿ? ಮತ್ತಷ್ಟು ಕುಡಿಯುತ್ತೀರಿ. ಈಗ ಆಗುತ್ತಿರುವುದು ಅದೆಯೇ. ಹೆಚ್ಚುವರಿ ಹಣ ಹರಿದುಬರುತ್ತಿದೆ. ಇದು ಆರ್ಥಿಕತೆಗೆ ಪುಷ್ಟಿಯೇನೋ ಕೊಡುತ್ತಿದೆ. ಆದರೆ ಈ ಉಬ್ಬರ ಕುಸಿಯುವುದನ್ನೂ ನಾವು ನೋಡಬೇಕಾಗುತ್ತದೆ,’ ಎಂದು ಹ್ಯಾರಿ ಡೆಂಟ್ ಅಭಿಪ್ರಾಯಪಟ್ಟಿದ್ದಾರೆ.
1925ರಿಂದ 1929ರವರೆಗೆ ಅಮೆರಿಕದ ಷೇರು ಮರುಕಟ್ಟೆ ಗಮನಾರ್ಹವಾಗಿ ಬೆಳೆದಿತ್ತು. 1929ರಲ್ಲಿ ಪತನ ಆರಂಭವಾಯಿತು. ಅದು ಚೇತರಿಸಿಕೊಳ್ಳಲು ಸಾಧ್ಯವಾಗಿದ್ದು 1940ರಲ್ಲಿ. ಚೇತರಿಕೆಗೆ ಕನಿಷ್ಠ ಏಳೆಂಟು ವರ್ಷ ತಗುಲಿತ್ತು.
ಹ್ಯಾಪಿ ಡೆಂಟ್ ಈ ಹಿಂದೆ ಇಂತಹ ವಿದ್ಯಮಾನಗಳ ಬಗ್ಗೆ ಮುಂಚಿತವಾಗಿಯೇ ಗ್ರಹಿಸಿ ಎಚ್ಚರಿಸಿದ್ದುಂಟು. 1989ರ ಜಪಾನ್ ಆಸ್ತಿ ಬೆಲೆ ಕುಸಿತ, 2000ರ ವರ್ಷದ ಡಾಟ್ ಕಾಮ್ ಕುಸಿತ ಮೊದಲಾದವನ್ನು ಉಲ್ಲೇಖಿಸಬಹುದು. ಅವರ ಪ್ರಕಾರ ಕೃತಕವಾಗಿ ಉಬ್ಬುವಿಕೆ ಸಾಮಾನ್ಯವಾಗಿ ಐದಾರು ವರ್ಷಗಳವರೆಗೆ ಆಗಬಹುದು. ಈಗ ಆಗುತ್ತಿರುವುದು 14 ವರ್ಷದಿಂದ ಉಬ್ಬುತ್ತಿದೆ. ಹೀಗಾಗಿ, 2008-09ರಲ್ಲಿ ಕಂಡಿದ್ದಕ್ಕಿಂತಲೂ ದೊಡ್ಡ ಕುಸಿತವನ್ನು ಕಾಣಲಿದ್ದೇವೆ ಎಂದು ಡೆಂಟ್ ಭವಿಷ್ಯ ನುಡಿದಿದ್ದಾರೆ.
‘ಎಸ್ ಅಂಡ್ ಪಿ ಶೇ. 86ರಷ್ಟು ಕುಸಿತ ಕಾಣಬಹುದು. ನಾಸ್ಡಾಕ್ ಶೇ. 92ರಷ್ಟು ಕುಸಿಯಬಹುದು ಎಂದನಿಸುತ್ತಿದೆ. ಎನ್ವಿಡಿಯಾದಂತಹ ಒಳ್ಳೆಯ ಕಂಪನಿಯ ಷೇರು ಶೇ. 98ರಷ್ಟು ಕುಸಿಯುವುದನ್ನು ನೋಡಲಿದ್ದೇವೆ,’ ಎಂದು ಅಮೆರಿಕದ ಈ ಆರ್ಥಿಕ ತಜ್ಞ ಹೇಳಿದ್ದಾರೆ. ಅಮೆರಿಕದ ಷೇರುಮಾರುಕಟ್ಟೆಯ ಒಟ್ಟು ಮಾರುಕಟ್ಟೆ ಬಂಡವಾಳ 50 ಟ್ರಿಲಿಯನ್ ಡಾಲರ್ನಷ್ಟಿದೆ.
ಅಮೆರಿಕ ಸರ್ಕಾರವೇ ಈ ಉಬ್ಬರವನ್ನು ಸೃಷ್ಟಿಸಿದೆ. ಒಂದು ರೀತಿಯಲ್ಲಿ ಶಕ್ತಿ ತುಂಬಿಸಲು ಡ್ರಗ್ಸ್ ನೀಡಿದಂತೆ ಅಗುತ್ತಿದೆ. ಮನುಷ್ಯ ಜೀವನದಿಂದ ಹಿಡಿದು ಇತಿಹಾಸದವರೆಗೆ ನೀವು ಗಮನಿಸಿ ನೋಡಿ ಏನೂ ಇಲ್ಲದೇ ಏನನ್ನಾದರೂ ಪಡೆಯಲು ಸಾಧ್ಯವೇ ಇಲ್ಲ. ಗುಳ್ಳೆ ಯಾವಾಗಲೂ ಒಡೆದುಹೋಗುತ್ತದೆ ಎಂದು ಹ್ಯಾರಿ ಡೆಂಟ್ ಎಚ್ಚರಿಸಿದ್ದಾರೆ.
ಹ್ಯಾರಿ ಡೆಂಟ್ ಪ್ರಕಾರ ಅಮೆರಿಕದ ಷೇರು ಮಾರುಕಟ್ಟೆ ಮುಂದಿನ ವರ್ಷದ ಮಧ್ಯಭಾಗದಲ್ಲಿ ಕುಸಿತ ಕಾಣಬಹುದು. ಹಣದುಬ್ಬರ ನಿಯಂತ್ರಿಸಲು ಫೆಡರಲ್ ರಿಸರ್ವ್ ತಳೆಯುವ ಕಠಿಣ ಕ್ರಮ ಈ ಕುಸಿತಕ್ಕೆ ಕಿಡಿ ಹೊತ್ತಿಸಬಹುದು. ವಸತಿ ಮಾರುಕಟ್ಟೆ ಈ ಕುಸಿತದ ಕೇಂದ್ರಬಿಂದು ಆಗಿರುತ್ತೆ ಎಂದಿದ್ದಾರೆ.
ಚೀನಾದ ಆರ್ಥಿಕ ಹಿನ್ನಡೆಯ ಕೇಂದ್ರಬಿಂದು ಆಗಿರುವುದು ಅಲ್ಲಿನ ವಸತಿ ಮಾರುಕಟ್ಟೆಯೆ ಎಂಬುದನ್ನು ಇಲ್ಲಿ ಗಮನಿಸಬಹುದು.
1929ರ ಯುಎಸ್ ಸ್ಟಾಕ್ ಮಾರ್ಕೆಟ್ ಕುಸಿತ ಆದಾಗ ಅದರ ಪರಿಣಾಮ ಜಾಗತಿಕವಾಗಿ ಆಗಿತ್ತು. ಅಮೆರಿಕದಲ್ಲಿ ಬಿಕ್ಕಟ್ಟು ಸಂಭವಿಸಿದಾಗೆಲ್ಲಾ ಅದರ ಪರಿಣಾಮ ಜಾಗತಿಕವಾಗಿ ಆಗುವುದು ಸಹಜ ಪ್ರತಿಕ್ರಿಯೆ. ಈಗಲೂ ಕೂಡ ಅಮೆರಿಕದ ಷೇರು ಮಾರುಕಟ್ಟೆ ಕುಸಿದರೆ ಭಾರತವೂ ಒಳಗೊಂಡಂತೆ ವಿಶ್ವದ ಪ್ರಮುಖ ಷೇರು ಮಾರುಕಟ್ಟೆ ತಲ್ಲಣಗೊಳ್ಳುವ ಸಾಧ್ಯತೆ ದಟ್ಟವಾಗಿರುತ್ತದೆ.